ಚಾಮರಾಜನಗರದಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸಿಹಿ ತಿನಿಸಿ ಸ್ವಾಗತಿಸಿದ ಜಿಲ್ಲಾಧಿಕಾರಿ

ಪ್ರಾಥಮಿಕ ಹಾಗು ಪ್ರೌಢಶಾಲೆಯ ಶಿಕ್ಷಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಜಿಲ್ಲೆಯಲ್ಲಿ  ಸರ್ಕಾರಿ ಹಾಗು ಖಾಸಗಿ ಸೇರಿದಂತೆ 4500ಕ್ಕು ಹೆಚ್ಚು ಮಂದಿ ಶಿಕ್ಷಕರಿಗೆ ಈಗಾಗಲೇ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ

ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಜಿಲ್ಲಾಧಿಕಾರಿ ಡಾ ಎಂ ಆರ್​ ರವಿ

ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಜಿಲ್ಲಾಧಿಕಾರಿ ಡಾ ಎಂ ಆರ್​ ರವಿ

  • Share this:
ಚಾಮರಾಜನಗರ(ಜನವರಿ. 01): ಚಾಮರಾಜನಗರದಲ್ಲಿ ವಿದ್ಯಾಗಮಕ್ಕೆ ಬಂದ ವಿದ್ಯಾರ್ಥಿಗಳನ್ನು ಸ್ವತಃ ಜಿಲ್ಲಾಧಿಕಾರಿಗಳು ಗುಲಾಬಿ ಹೂ ನೀಡಿ ಸಿಹಿ ತಿನಿಸಿ ಸ್ವಾಗತಿಸಿದರು. ನಗರದ ಚನ್ನಿಪುರದಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ  ನಡೆಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ವಿದ್ಯಾಗಮಕ್ಕೆ ಬಂದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ವಿದ್ಯಾರ್ಥಿಗಳಿಗೆ  ನೈತಿಕ ಸ್ಥೈರ್ಯ ತುಂಬಿದರು. ಚನ್ನಿಪುರದಮೋಳೆ ಶಾಲೆಯಷ್ಟೆ ಅಲ್ಲ, ಇತರ ಶಾಲಾ ಕಾಲೇಜುಗಳಲ್ಲೂ ಸಂಭ್ರಮ ಸಡಗರದಿಂದ ಮಕ್ಕಳನ್ನು ಹಾಗು ಅಧ್ಯಾಪಕರನ್ನು ಸ್ವಾಗತಿಸಿದ್ದೇವೆ, ಬಹಳಷ್ಟು ತಿಂಗಳ ನಂತರ ಶಾಲೆಗಳು ತೆರೆದುಕೊಳ್ಳುತ್ತಿವೆ ಶಾಲೆಗಳಲ್ಲಿ ಮಕ್ಕಳು ಇಲ್ಲದಿದ್ದರೆ ಆ ಶಾಲೆಗಳಿಗೆ ಜೀವವೂ ಇರುವುದಿಲ್ಲ, ಜೀವ ಕಳೆಯು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ  ಹೇಳಿದರು.

ಮೊದಲ ದಿನ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇದೆ, ನಾವು ನಿರೀಕ್ಷೆ ಮಾಡಿದಷ್ಟು ಮಕ್ಕಳು ಬಂದಿಲ್ಲ ಎಂದ ಅವರು ಇಂದು ಹೊಸ ವರ್ಷದ ಮೊದಲ ದಿನ, ನಾಳೆ ಶನಿವಾರ ಹಾಗಾಗಿ ಸೋಮವಾರದಿಂದ ಮಕ್ಕಳು ಹಾಜರಾತಿ ಹೆಚ್ಚಾಗುವ ನಿರೀಕ್ಷೆ ಇದೆ, ಜಿಲ್ಲಾಡಳಿತ ಹಾಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸಂಪೂರ್ಣ ಜವಬ್ದಾರಿ ತೆಗೆದುಕೊಂಡಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೋಷಕರು ನಮ್ಮ ವ್ಯವಸ್ಥೆ ಬಗ್ಗೆ ನಂಬಿಕೆ ಇಡಬೇಕು, ಧೈರ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಯಾವುದೇ ರೀತಿಯ ಭಯ, ಆತಂಕ, ಗಾಬರಿ  ಬೇಡ ಎಂದು ಮನವಿ ಮಾಡಿದರು.

4500 ಮಂದಿ  ಶಿಕ್ಷಕರಿಗೆ ಕೋವಿಡ್ ಟೆಸ್ಟ್

ಪ್ರಾಥಮಿಕ ಹಾಗು ಪ್ರೌಢಶಾಲೆಯ ಶಿಕ್ಷಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಹಾಗು ಖಾಸಗಿ ಸೇರಿದಂತೆ 4500ಕ್ಕು ಹೆಚ್ಚು ಮಂದಿ ಶಿಕ್ಷಕರಿಗೆ ಈಗಾಗಲೇ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಈ ಪೈಕಿ ಒಬ್ಬ ಶಿಕ್ಷಕರಿಗೆ ಕೋವಿಡ್ ದೃಡಪಟ್ಟಿದೆ. ಇನ್ನೂ 2 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೋವಿಡ್ ಟೆಸ್ಟ್ ವರದಿ ಬರಬೇಕಿದೆ. ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರುವುದನ್ನು ಕಡ್ಡಾಯ ಮಾಡಲಾಗಿದ್ದು ಶಾಲಾಕಾಲೇಜುಗಳ ಪ್ರವೇಶ ದ್ವಾರದಲ್ಲೇ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಸ್ಯಾನಿಟೈಸರ್ ನೀಡಿ ನಂತರವಷ್ಟೇ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಒಂದೊಂದು ಕೊಠಡಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳು ಮಾತ್ರ ಕೂರಲು  ವ್ಯವಸ್ಥೆ ಮಾಡಲಾಗಿತ್ತು.

ಶಾಲಾರಂಭದ ಮೊದಲ ದಿನವಾದ ಇಂದು  ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ತರಗತಿಗಳಿಗೆ ಶೇಕಡಾ 36 ವಿದ್ಯಾರ್ಥಿಗಳು ಹಾಜರಾಗಿದ್ದರು, ವಿದ್ಯಾಗಮಕ್ಕೆ ಶೇಕಡಾ 48 ರಷ್ಟು ಮಕ್ಕಳು ಹಾಜರಾಗಿದ್ದರು ಎಂದು ಡಿಡಿಪಿಐ ಜವರೇಗೌಡ  ನ್ಯೂಸ್ 18 ತಿಳಿಸಿದ್ದಾರೆ. ಇಂದು ಹೊಸ ವರ್ಷದ ಮೊದಲ ದಿನ ಹಾಗು ನಾಳೆ ಶನಿವಾರ ಆಗಿರುವುದರಿಂದ ಜನವರಿ 4 ರ ಸೋಮವಾರದಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಬಹುದೆಂದು ನಿರೀಕ್ಷೆ ಮಾಡಲಾಗಿದೆ ಎಂದು ಅವರು ತಿಳಿಸಿದರು

ದ್ವಿತೀಯ ಪಿಯುಸಿಗೆ 1447 ವಿದ್ಯಾರ್ಥಿಗಳ ಹಾಜರಿ

ಇನ್ನು ಜಿಲ್ಲೆಯಲ್ಲಿ 61 ಪಿಯು ಕಾಲೇಜುಗಳಿದ್ದು 6118 ಮಂದಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿದ್ದಾರೆ, ಇವರ ಪೈಕಿ ಮೊದಲ ದಿನವಾದ ಇಂದು 1447 ಮಂದಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಕೃಷ್ಣಮೂರ್ತಿ ನ್ಯೂಸ್ 18 ಕನ್ನಡಕ್ಕೆ ತಿಳಿಸಿದರು.

ಇದನ್ನೂ ಓದಿ : ನಾಲ್ಕು ತಿಂಗಳ ನಂತರ ಕಾರಜೋಳ ಕಲಬುರ್ಗಿಗೆ : ಪ್ರಶ್ನೆ ಕೇಳಿದ ಪತ್ರಕರ್ತರ ವಿರುದ್ದ ಗರಂ

ಈ 1447 ಮಂದಿ ಪೈಕಿ 941  ವಿದ್ಯಾರ್ಥಿನಿಯರೇ ಹಾಜರಾಗಿದ್ದು ವಿಶೇಷವಾಗಿತ್ತು. ಗುಂಡ್ಲುಪೇಟೆಯ ಜೆ.ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಮೊದಲ ದಿನವೆ 101 ವಿದ್ಯಾರ್ಥಿಗಳ ಪೈಕಿ 98 ವಿದ್ಯಾರ್ಥಿಗಳು ಹಾಜರಾಗಿದ್ದರು.

ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು  ಬಸ್ ಪಾಸ್ ಮಾಡಿಸಿಕೊಂಡಿಲ್ಲ, ಜೊತೆಗೆ ಹಾಸ್ಟೆಲ್ ಗಳೂ ತೆರೆದಿಲ್ಲ ಹಾಗು ಇಂದು ಹೊಸ ವರ್ಷದ ಮೊದಲ ದಿನವಾಗಿದ್ದು, ಈ ಮೂರು ಕಾರಣಗಳಿಂದ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿದ್ದು ಸೋಮವಾರದಿಂದ ಹೆಚ್ಚಳವಾಗವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
Published by:G Hareeshkumar
First published: