• Home
  • »
  • News
  • »
  • district
  • »
  • ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳ ತೆರವಿಗೆ ಜಿಲ್ಲಾಧಿಕಾರಿ ನೋಟಿಸ್

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳ ತೆರವಿಗೆ ಜಿಲ್ಲಾಧಿಕಾರಿ ನೋಟಿಸ್

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ಅನಧಿಕೃತವಾಗಿ ನಿರ್ಮಿಸಿರುವ 3 ಹೋಮ್‍ ಸ್ಟೇ ಕಟ್ಟಡಗಳಿಗೆ ನೀಡಿರುವ ಅನುಮತಿಯನ್ನು ಸಹ ಹಿಂಪಡೆಯಲು ಜಿಲ್ಲಾಧಿಕಾರಿ ಕ್ರಮ ತೆಗೆದುಕೊಂಡಿದ್ದಾರೆ.

  • Share this:

ಚಾಮರಾಜನಗರ(ಮೇ.31): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಈಗಾಗಲೇ ನಿರ್ಮಾಣ ಮಾಡಿರುವ ಎಂಟು ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ ಇನ್ನು 7 ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮುಂದಾಗಿದ್ದಾರೆ.


ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಿ ಕೇಂದ್ರ ಸರ್ಕಾರ 2012 ರ ಅಕ್ಟೋಬರ್ 4ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಪ್ರಕಾರ  31-08-2010ರ ನಂತರ  ನಿರ್ಮಾಣ ಮಾಡಿರುವ ಕಟ್ಟಡಗಳ ಅನ್ಯಕ್ರಾಂತ ಆದೇಶವನ್ನು ರದ್ದುಪಡಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕ್ರಮ ಜರುಗಿಸಿದ್ದಾರೆ.


ಅನ್ಯಕ್ರಾಂತವಾಗದೇ ನಿರ್ಮಿಸಿರುವ 3 ಹೋಮ್‍ ಸ್ಟೇ ಕಟ್ಟಡಗಳಿಗೆ ನೀಡಿರುವ ಅನುಮತಿಯನ್ನು ಸಹ ಹಿಂಪಡೆಯಲು ಜಿಲ್ಲಾಧಿಕಾರಿ ಕ್ರಮ ತೆಗೆದುಕೊಂಡಿದ್ದಾರೆ. ಅನುಮತಿ ಪಡೆಯದೆ ನಡೆಸುತ್ತಿದ್ದ ಇನ್ನೊಂದು ಹೋಮ್ ಸ್ಟೇಗೆ ಬೀಗಮುದ್ರೆ ಹಾಕಲಾಗಿತ್ತು. ಆದರೂ ಸಹ ಬೀಗ ಮುದ್ರೆ ಆದೇಶ ಉಲ್ಲಂಘಿಸಿ ಹೋಮ್ ಸ್ಟೇ ತೆರೆದು ಕಟ್ಟಡ ದುರಸ್ತಿ ಕಾರ್ಯ ಕೈಗೊಂಡಿದ್ದ ಸದರಿ ಹೋಮ್ ಸ್ಟೇ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಕ್ರಮ ವಹಿಸಲಾಗಿದೆ.


ಇದನ್ನೂ ಓದಿ : ಬಿಜೆಪಿ ಆಂತರಿಕ ವಿಚಾರ ನಮಗೆ ಬೇಡ ; ಅನ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೇಳಿಕೆ ನೀಡಬೇಡಿ ; ಡಿಕೆ ಶಿವಕುಮಾರ್​​


ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಅಧಿಸೂಚನೆ ಹೊರಡಿಸಿದ್ದು, ಇದರ ಅನುಸಾರ ಬಂಡೀಪುರ ಕಾಡಂಚಿನ ಒಟ್ಟು 123 ಗ್ರಾಮಗಳು ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಬರುತ್ತಿದ್ದು, ಸದರಿ ಗ್ರಾಮಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಚಟುವಟಿಕೆ ಕೈಗೊಳ್ಳಲು ಅವಕಾಶವಿರುವುದಿಲ್ಲ. ಆದಾಗಿಯೂ ಅಧಿಸೂಚನೆ ಉಲ್ಲಂಘಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪೂರ್ವಾನುಮತಿ ಪಡೆಯದೇ ನಿರ್ಮಿಸಲಾಗಿರುವ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ವಹಿಸುವಂತೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ  ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ  ವರದಿ ನೀಡುವಂತೆ ಗುಂಡ್ಲುಪೇಟೆ ತಹಶೀಲ್ದಾರ್​​ಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Published by:G Hareeshkumar
First published: