ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಶತಮಾನೋತ್ಸವ ಪೂರೈಸಿರುವ ಶಾಲೆಗಳಿಗೆ ಗತವೈಭವ ತಂದುಕೊಡಲು ಜಿಲ್ಲಾಡಳಿತ ಮುಂದಾಗಿದೆ. ಸಹಸ್ರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿರುವ ಈ ಶಾಲೆಗಳ ಪಾರಂಪರಿಕತೆಗೆ ಧಕ್ಕೆಯಾಗದಂತೆ ನವೀಕರಿಸಿ ಮೂಲ ಸೌಕರ್ಯ ಕಲ್ಪಿಸಿ ಐತಿಹಾಸಿಕ ಸ್ಥಳಗಳನ್ನಾಗಿ ಸಂರಕ್ಷಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈಗಾಗಲೇ ಮೂರು ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ತಲಾ 5 ಲಕ್ಷ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಗಡಿ ಜಿಲ್ಲೆಯ ಚಾಮರಾಜನಗರದಲ್ಲಿ 100 ವರ್ಷ ಪೂರೈಸಿರುವ 36 ಸರ್ಕಾರಿ ಶಾಲೆಗಳಿಗೆ ಅವುಗಳ ಇತಿಹಾಸ ಮರುಕಳಿಸುವಂತೆ ಮಾಡಲು ಹೊಸ ಮೆರಗು ನೀಡಲು ಜಿಲ್ಲಾಡಳಿತ ಮುಂದಾಗಿದೆ. ಈ ಶಾಲೆಗಳ ಇತಿಹಾಸ, ಆರಂಭ, ನಡೆದುಬಂದ ಹಾದಿಯ ದಾಖಲೀಕರಣ ಮಾಡಿ ಇಂದಿನ ಪೀಳಿಗೆಗೆ ಪರಿಚಯಿಸಲು ಪ್ರತಿ ಶಾಲೆಯ ಆವರಣದಲ್ಲಿ ಶಾಲಾ ಇತಿಹಾಸ, ಮಹತ್ವ, ವೈಶಿಷ್ಟ್ಯಗಳ ಬಗ್ಗೆ ಪ್ರಚುರ ಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಐತಿಹಾಸಿಕ ಶಾಲೆಗಳನ್ನು ಸಂರಕ್ಷಿಸಲು ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ. ಈ ಶಾಲೆಗಳ ಅಭಿವೃದ್ಧಿಗಾಗಿ ಜಿಲ್ಲಾ ಮಟ್ಟದ ಸಮಿತಿಯನ್ನೂ ಸಹ ರಚಿಸಿದೆ.
ಇದನ್ನೂ ಓದಿ: ಚಡಚಣದಲ್ಲಿ ನಿತ್ಯ 50 ಲಕ್ಷ ರೂ ಮಾವಾ ಮಾದಕ ಪದಾರ್ಥ ಮಾರಾಟ: ನಾಗಠಾಣ ಶಾಸಕ ಚವ್ಹಾಣ ಆರೋಪ
1916 ರಲ್ಲಿ ನಿರ್ಮಾಣವಾಗಿರುವ ಗುಂಡ್ಲುಪೇಟೆ ತಾಲೋಕು ಹಂಗಳ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ, 1900 ರಲ್ಲಿ ಆರಂಭವಾದ ಹನೂರು ತಾಲೋಕು ರಾಮಾಪುರ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಹಾಗು 1909 ರಲ್ಲಿ ನಿರ್ಮಿಸಿರುವ ಕೊಳ್ಳೇಗಾಲ ತಾಲೋಕು ಮಧುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ರಾಜ್ಯ ವಲಯ ಯೋಜನೆಯಡಿ ತಲಾ 5 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಹಿತಿ ತಿಳಿಸಿದ್ದಾರೆ.
ಗತವೈಭವ ಸಾರುವ ಈ ಶಾಲೆಗಳನ್ನು ಅವುಗಳ ಪಾರಂಪರಿಕತೆಗೆ ಧಕ್ಕೆಯಾಗದಂತೆ ನವೀಕರಿಸಿ ಮೂಲ ಸೌಕರ್ಯ ಕಲ್ಪಿಸಿ ಪಾರಂಪರಿಕ ಕಟ್ಟಡಗಳನ್ನಾಗಿ ಸಂರಕ್ಷಿಸಲು ನಿರ್ಧರಿಸಲಾಗಿದೆ. ನೂರು ವರ್ಷ ಪೂರೈಸಿರುವ ಜಿಲ್ಲೆಯ ಶಾಲೆಗಳನ್ನು ಸಂರಕ್ಷಿಸಲು ಸಾರ್ವಜನಿಕ ಸಹಭಾಗಿತ್ವ ಮಹತ್ವದ್ದಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ.
ಇದನ್ನೂ ಓದಿ: ತಮಿಳುನಾಡು ಗಡಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಯತ್ನ; ಓರ್ವ ಅರೆಸ್ಟ್, ಒಂದೂವರೆ ಕೆಜಿ ಗಾಂಜಾ ವಶ
ಶತಮಾನಗಳ ಇತಿಹಾಸ ಸಾರುತ್ತಿರುವ ಈ ಶಾಲೆಗಳ ವೈಭವವನ್ನು ಮರಕಳಿಸುವಂತೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಶತಮಾನ ಕಂಡ ಶಾಲೆಗಳ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಲು ಸಹ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳ ಬಗ್ಗೆ ವಿಶೇಷ ಪ್ರೀತಿ ಅಭಿಮಾನದಿಂದ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವಧ್ಧಿಪಡಿಸಲು ಮುಂದೆ ಬರಬಹುದು ಎಂಬ ನಿರೀಕ್ಷೆ ಜಿಲ್ಲಾಡಳಿತದ್ದಾಗಿದೆ.
ವರದಿ: ಎಸ್.ಎಂ. ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ