ನೋ ವ್ಯಾಕ್ಸಿನೇಷನ್… ನೋ ರೇಷನ್, ನೋ ಪೆನ್ಷನ್: ಚಾಮರಾಜನಗರ ಜಿಲ್ಲಾಡಳಿತದ ವಿಭಿನ್ನ ಕ್ರಮ

ಕೋವಿಡ್ ಆರ್ಭಟಿಸುತ್ತಿದ್ದರೂ ಈಗಲೂ ಕೆಲ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಎಷ್ಟೇ ಮನವಿ ಮಾಡಿಕೊಂಡರೂ ಕಿವಿಗೊಡುತ್ತಿಲ್ಲ. ಹೀಗಾಗಿ, ಚಾಮರಾಜನಗರ ಜಿಲ್ಲಾಡಳಿತವು ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಮಾತ್ರ ರೇಷನ್, ಪೆನ್ಷನ್ ಎಂದು ಹೇಳಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಚಾಮರಾಜನಗರ (ಆ. 31): ಕೇರಳ ಹಾಗು ತಮಿಳುನಾಡು ಗಡಿಗೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲೆಯಲ್ಲಿ ಆಗಸ್ಟ್ 27 ರಿಂದ ಒಂದು ವಾರ ಕಾಲ ಕೋವಿಡ್ ಲಸಿಕಾ ಮಹಾ ಮೇಳ ಆಯೋಜಿಸಲಾಗಿದ್ದು, ಪ್ರತಿ ದಿನ 18 ವರ್ಷ ಮೇಲ್ಪಟ್ಟ 25 ಸಾವಿರ ಮಂದಿಗೆ ಲಸಿಕೆ ಹಾಕುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಆದರೆ ಇನ್ನೂ ಕೆಲವು ಜನರು ಲಸಿಕೆ ಹಾಕಿಸಿಕೊಳ್ಳಲು ಉದಾಸೀನತೆ ತೋರುತ್ತಿದ್ದಾರೆ.  ಹಾಗಾಗಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಚಾಮರಾಜನಗರ ಜಿಲ್ಲಾಡಳಿತ ಸೆಪ್ಟೆಂಬರ್ 1 ರಿಂದ "ನೋ ವ್ಯಾಕ್ಸಿನೇಷನ್‌ ನೋ ರೇಷನ್", "ನೋ ವ್ಯಾಕ್ಸಿನೇಷನ್‌ ನೋ ಪೆನ್ಷನ್" ಎಂದು ಘೋಷಿಸಿ ಲಸಿಕಾಕರಣಕ್ಕೆ ವೇಗ ನೀಡಲು ಮುಂದಾಗಿದೆ. ಜಿಲ್ಲೆಯಲ್ಲಿ 2 ಲಕ್ಷ 90 ಸಾವಿರ ಬಿಪಿಎಲ್ ಹಾಗು ಅಂತ್ಯೋದಯ ಪಡಿತರದಾರರು ಇದ್ದಾರೆ. ಇವರು ನ್ಯಾಯಬೆಲೆ ಅಂಗಡಿಗಳಲ್ಲಿ ನಾಳೆಯಿಂದ ಪಡಿತರ ಪಡೆಯಬೇಕಾದರೆ ವ್ಯಾಕ್ಸಿನೇಷನ್ ಪ್ರಮಾಣ ಪತ್ರ ತರಬೇಕು. ತರದಿದ್ದವರಿಗೆ ಪಡಿತರ ವಿತರಣೆ ಮಾಡದಂತೆ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಸೂಚನೆ ನೀಡಿದ್ದಾರೆ.

ಇದೇ ರೀತಿ ಚಾಮರಾಜನಗರ ಜಿಲ್ಲೆಯಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ಮಾಸಾಶನ ಪಡೆಯುವ 2 ಲಕ್ಷ 20 ಸಾವಿರ ಮಂದಿ ಪಿಂಚಣಿದಾರರು ಇದ್ದಾರೆ. ವ್ಯಾಕ್ಸಿನೇಷನ್‌ ಪ್ರಮಾಣಪತ್ರ ಇದ್ದರೆ ಮಾತ್ರ ಇವರಿಗೆ ಮಾಸಾಶನ ಪಾವತಿಸುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಕೆಲವು ಜನರಲ್ಲಿ ಉದಾಸೀನ ಪ್ರವೃತ್ತಿ ಕಂಡು ಬರುತ್ತಿದೆ. ಹಾಗಾಗಿ ಕೊರೋನಾ ಸೋಂಕಿನ ಬಗ್ಗೆ ಗಂಭೀರತೆ ಮೂಡಿಸಲು ಹಾಗು ಜನರ ಆರೋಗ್ಯ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದ್ದಾರೆ. ಜಿಲ್ಲೆಯ ಜನರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಹಾಗು ಮುಂಜಾಗ್ರತಾ ಕ್ರಮ ಅನುಸರಿಸುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಇದೇ ವೇಳೆ ಮನವಿ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Bengaluru Car Accident: ಶಾಸಕರ ಮಗನ ವಿರುದ್ಧ ದೂರು ನೀಡಿದ ಪ್ರತ್ಯಕ್ಷದರ್ಶಿ; ಘಟನೆ ನೋಡಿದಾತ ಹೇಳಿದ್ದೇನು? 

ಜಿಲ್ಲೆಯ ನಗರ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್ ಲಸಿಕೆ ಹಾಕಲು 238 ತಂಡ ರಚಿಸಲಾಗಿದೆ. ಇದಲ್ಲದೆ 20 ಮೊಬೈಲ್ ತಂಡಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ  ಶೇಕಡಾ 75 ರಷ್ಟು ಮಂದಿಗೆ (18 ವರ್ಷ ಮೇಲ್ಪಟ್ಟವರು) ಲಸಿಕೆ ಹಾಕಲಾಗಿದೆ. ಆಗಸ್ಟ್ 30 ರವರೆಗೆ ಜಿಲ್ಲೆಯಲ್ಲಿ 4,83, 512 ಮಂದಿಗೆ ಮೊದಲ ಡೋಸ್, 1,38,637 ಮಂದಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ.

ನೆರೆಯ ಕೇರಳದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗಗಳಲ್ಲಿ ಸೋಂಕು ಹರಡದಂತೆ ಹಲವು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಆರು ಅಂತರರಾಜ್ಯ ಚೆಕ್ ಪೋಸ್ಟ್ ತೆರೆಯಲಾಗಿದ್ದು ಕೇರಳ ಹಾಗು ತಮಿಳುನಾಡಿನಿಂದ ಬರುವವರು ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಹೊಂದಿದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಜಿಲ್ಲೆಯ ಒಳಭಾಗದಲ್ಲೂ ಸಹ ಐದು ಅಂತರಜಿಲ್ಲಾ ಚೆಕ್ ಪೋಸ್ಟ್ ಗಳು ಸಹ ಕಾರ್ಯಾಚರಿಸುತ್ತಿವೆ. ಇದಲ್ಲದೆ ಕಳೆದ ಮೂರು ವಾರಗಳಿಂದ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಗಡಿಭಾಗದಲ್ಲಿ 170 ಗ್ರಾಮಗಳಿದ್ದು ಲಸಿಕಾಕರಣ ಚುರುಕುಗೊಳಿಸಿ ಈಗಾಗಲೇ ಶೇ. 92 ರಷ್ಟು ಮಂದಿಗೆ ಲಸಿಕೆ ನೀಡಲಾಗಿದ್ದು ಒಂದೆರೆಡು ದಿನದಲ್ಲಿ ಶೇಕಡಾ 100 ರಷ್ಟು ಗುರಿ ಸಾಧಿಸುವ ಭರವಸೆಯನ್ನು ಜಿಲ್ಲಾಡಳಿತ ಹೊಂದಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಎಸ್.ಎಂ.ನಂದೀಶ್
Published by:Vijayasarthy SN
First published: