• Home
  • »
  • News
  • »
  • district
  • »
  • Chamarajanagar: ಬುಡಕಟ್ಟು ಸೋಲಿಗರ ಸಂಕಷ್ಟಕ್ಕೆ ಮಿಡಿದ ಟಿಬೇಟಿಯನ್ ಹೃದಯಗಳು

Chamarajanagar: ಬುಡಕಟ್ಟು ಸೋಲಿಗರ ಸಂಕಷ್ಟಕ್ಕೆ ಮಿಡಿದ ಟಿಬೇಟಿಯನ್ ಹೃದಯಗಳು

ಆಹಾರ ಕಿಟ್ ವಿತರಣೆ

ಆಹಾರ ಕಿಟ್ ವಿತರಣೆ

450ಕ್ಕೂ ಹೆಚ್ಚು ಬುಡಕಟ್ಟು ಸೋಲಿಗ ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಆಹಾರ ಕಿಟ್ ವಿತರಿಸಿದ್ದಾರೆ. 

  • Share this:

ಚಾಮರಾಜನಗರ (ಮೇ 30): ಮೊದಲನೆಯದಾಗಿ ಅವರೇ ನಿರಾಶ್ರಿತರು, ಭಾರತಕ್ಕೆ  ಬಂದು ಆಶ್ರಯ‌ ಪಡೆದಿದ್ದಾರೆ. ತಾವೇ ನಿರಾಶ್ರಿತರಾಗಿದ್ದರೂ ಕೊರೋನಾ ಸಂದರ್ಭದಲ್ಲಿ  ದೇಶದ ಜನರ ಕಷ್ಟಕ್ಕೆ ಅವರ ಹೃದಯ ಮಿಡಿದಿದೆ. ಹೌದು, ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಒಡೆಯರಪಾಳ್ಯದ ಬಳಿ ಇರುವ  ಟಿಬೇಟಿಯನ್ ನಿರಾಶ್ರಿತರು ತಾವೇ ಕಷ್ಟದಲ್ಲಿದ್ದರೂ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಬುಡಕಟ್ಟು ಸೋಲಿಗರ ಸಹಾಯಕ್ಕೆ ಧಾವಿಸಿದ್ದಾರೆ. 


ಪಿ.ಜಿ.ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಕಲಕಿಂಡಿ,  ಹಾವಿನಮೂಲೆ, ಮಾವತ್ತೂರು, ಯರಗಬಾಳು, ಉದ್ದಟ್ಟಿ, ನೆಲ್ಲಿಕತ್ರಿ, ಕೆರೆದಿಂಬ,  ಗೊಂಬೆಗಲ್ಲು ,ಜೀರಿಗೆ ಗದ್ದೆ ಮೊದಲಾದ ಗಿರಿಜನ ಹಾಡಿಗಳ ಒಂದಲ್ಲ, ಎರಡಲ್ಲ,  450ಕ್ಕೂ ಹೆಚ್ಚು ಬುಡಕಟ್ಟು ಸೋಲಿಗ ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಆಹಾರ ಕಿಟ್ ವಿತರಿಸಿದ್ದಾರೆ.


ಕೂಲಿ ಕೆಲಸವನ್ನೇ ನಂಬಿ ಜೀವನ ಸಾಗಿಸುವ ಬುಡಕಟ್ಟು ಸೋಲಿಗರು ಬಿಳಿಗಿರಿರಂಗನ ಬೆಟ್ಟದಲ್ಲಿರುವ  ಬೇಡಗುಳಿ, ಅತ್ತಿಖಾನೆ  ಮೊದಲಾದ ಕಾಫಿ ಎಸ್ಟೇಟ್ ಗಳಿಗೆ  ಹೋಗುತ್ತಿದ್ದರು. ಆದರೆ ಕಳೆದ  ಲಾಕ್ ಡೌನ್ ಪರಿಣಾಮ ಎಲ್ಲಿಯೂ ಹೋಗಲಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಮನಗಂಡ ಒಡೆಯರಪಾಳ್ಯ ನಿರಾಶ್ರಿತರ ವಸಾಹತು ಶಿಬಿರದ ಟಿಬೇಟಿಯನ್ನರು ಸೋಲಿಗರಿಗೆ ಸಹಾಯ ಹಸ್ತ ಚಾಚಿದ್ದಾರೆ.


ಇದನ್ನೂ ಓದಿ:ಅತ್ಯಾಚಾರ ಆರೋಪ: ಮಂಡ್ಯದಲ್ಲಿ ಅರೆಸ್ಟ್‌ ಆದ Kangana Ranaut ಬಾಡಿಗಾರ್ಡ್


ಜೀವನೋಪಾಯಕ್ಕೆ ಕೃಷಿ ಹಾಗು ಸ್ವೆಟರ್ ಮಾರಾಟ ಅವಲಂಬಿಸಿರುವ ಈ ಟಿಬೇಟಿಯನ್  ನಿರಾಶ್ರಿತರು ಲಾಕ್ ಡೌನ್ ನಿಂದ ಸ್ವತಃ ಸಂಕಷ್ಟದಲ್ಲಿದ್ದಾರೆ. ಆದರೂ ತಾವು ಕೂಡಿಟ್ಟ ಹಣದಲ್ಲಿ ತಾನಾ ಚಾರಿಟಬಲ್ ಟ್ರಸ್ಟ್ ಮೂಲ  ಸೋಲಿಗರ ಸಂಕಷ್ಟಕ್ಕೆ  ಸ್ಪಂದಿಸುವ ಮೂಲಕ ಹೃದಯ ವೈಶಾಲ್ಯತೆ  ಮೆರೆದಿದ್ದಾರೆ.


ಟಿಬೆಟಿಯನ್ ನಿರಾಶ್ರಿತರ ಶಿಬಿರದ ಸುತ್ತಮುತ್ತ ಹಾಡಿಗಳಲ್ಲಿರುವ ಸೋಲಿಗರ ಸ್ಥಿತಿಗತಿ  ಅರಿತ ಟಿಬೆಟಿಯನ್ ರು ತಮ್ಮ ಇತಿಮಿತಿಯಲ್ಲಿ ಸಹಾಯಕ್ಕೆ ಧಾವಿಸಿರುವುದು ಸ್ಥಳೀಯರ ಮೆಚ್ಚುಗೆ ಗೆ ಪಾತ್ರವಾಗಿದೆ.


ತಮ್ಮ ದೇಶ ಬಿಟ್ಟು ಬಂದಿರುವ ಟಿಬೆಟಿಯನ್ ರು ಇಲ್ಲಿನ ಬಡವರ ಕಷ್ಟ ಅರ್ಥಮಾಡಿಕೊಂಡಿದ್ದಾರೆ.  ತಾವೇ ಕಷ್ಟದಲ್ಲಿದ್ದರೂ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಅವರ  ಗುಣ  ಇತರರಿಗೆ ಮಾದರಿಯಾಗಿದೆ ಎನ್ನುತ್ತಾರೆ ಪಿ.ಜಿ.ಪಾಳ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣಮೂರ್ತಿ.


ಇದನ್ನೂ ಓದಿ:Sidewing: ಥಿಯೇಟರ್‌ಗಳಲ್ಲೂ ಬರಲ್ಲ, ಓಟಿಟಿಯಲ್ಲೂ ರಿಲೀಸ್ ಇಲ್ಲ; ಸೈಡ್‌ವಿಂಗ್ ಅವಿನಾಶ್ ವಿನೂತನ ಪ್ರಯತ್ನ


ಚೀನಾ ಆಕ್ರಮಣದಿಂದ ನೆಲೆ ಕಳೆದುಕೊಂಡು ನಿರಾಶ್ರಿತರಾದ ಸಾವಿರಾರು ಟಿಬೆಟಿಯನ್ನರಿಗೆ 1959 ರಲ್ಲಿ ಅಂದಿನ ಸರ್ಕಾರ ಭಾರತದ ವಿವಿಧ ಕಡೆ ಆಶ್ರಯ ನೀಡಿತ್ತು. ಟಿಬೆಟಿಯನ್ ನಿರಾಶ್ರಿತರು ಭಾರತಕ್ಕೆ ಆಶ್ರಯ ಕೋರಿ ಬಂದಾಗ ಕರ್ನಾಟಕದಲ್ಲು ಉತ್ತರಕನ್ನಡ ಜಿಲ್ಲೆಯ ಮುಂಡಗೋಡು, ಮೈಸೂರು ಜಿಲ್ಲೆಯ ಬೈಲುಕುಪ್ಪೆ, ಗುರುಪುರ, ಈಗಿನ ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಒಡೆಯರಪಾಳ್ಯ ಬಳಿ ಆಶ್ರಯ ನೀಡಲಾಗಿತ್ತು.


1974 ರಲ್ಲಿ ಅಂದಿನ ಕರ್ನಾಟಕ ಸರ್ಕಾರ ಒಡೆಯರಪಾಳ್ಯ ಬಳಿ ಟಿಬೆಟಿಯನ್ ರಿಗೆ ವಸತಿ ಹಾಗು ಕೃಷಿ ಭೂಮಿಯನ್ನು ನೀಡಿದ್ದು ಇಲ್ಲಿ ನಿರಾಶ್ರಿತ ಟಿಬೆಟಿಯನ್ ರ 22 ಹಳ್ಳಿಗಳಿದ್ದು ಒಂದೊಂದು ಹಳ್ಳಿಯಲ್ಲೂ 25 ರಿಂದ 30 ಕುಟುಂಬಗಳು ವಾಸವಾಗಿವೆ. ಇವರ ಮುಖ್ಯ ಕಸುಬು ಕೃಷಿ ಹಾಗು ಸ್ವೆಟರ್ ಮಾರಾಟವಾಗಿದ್ದು ಇದರ ಜೊತೆಗೆ ಸಣ್ಣಪುಟ್ಟ ವ್ಯಾಪಾರ ವ್ಯವಹಾರ ಮಾಡಿಕೊಂಡಿದ್ದಾರೆ.

Published by:Latha CG
First published: