ಚಾಮರಾಜನಗರದಲ್ಲಿ ಕೋವಿಡ್​ಗೆ ಮತ್ತೊಂದು ಬಲಿ; ಕೊರೋನಾ ಗೆದ್ದ 4 ವರ್ಷದ ಬಾಲೆ

ಕೊಳ್ಳೇಗಾಲ ದೇವಾಂಗಪೇಟೆಯ 65 ವರ್ಷದ ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್ ಗೆ ನಾಲ್ಕು ದಿನದ ಹಿಂದೆ ಕೊರೋನಾ ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

news18-kannada
Updated:July 12, 2020, 7:13 PM IST
ಚಾಮರಾಜನಗರದಲ್ಲಿ ಕೋವಿಡ್​ಗೆ ಮತ್ತೊಂದು ಬಲಿ; ಕೊರೋನಾ ಗೆದ್ದ 4 ವರ್ಷದ ಬಾಲೆ
ಚಾಮರಾಜನಗರದ ಕೋವಿಡ್ ಆಸ್ಪತ್ರೆ
  • Share this:
ಚಾಮರಾಜನಗರ(ಜುಲೈ 12): ಕೊರೋನಾ ಮಹಾಮಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ಇನ್ನೊಂದೆಡೆ 4 ವರ್ಷದ ಹೆಣ್ಣುಮಗು ಕೊರೋನಾ ಗೆದ್ದು ಚೇತರಿಸಿಕೊಂಡಿದ್ದು, ಇಂದು 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನಿನ್ನೆ ತಾನೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. 24 ಗಂಟೆ ಕಳೆಯುವಷ್ಟರಲ್ಲೇ ಕೊಳ್ಳೇಗಾಲದವರೇ ಆದ ಮತ್ತೊಬ್ಬ ವ್ಯಕ್ತಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಕೊಳ್ಳೇಗಾಲ ದೇವಾಂಗಪೇಟೆಯ 65 ವರ್ಷದ ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್ ಗೆ ನಾಲ್ಕು ದಿನದ ಹಿಂದೆ ಕೊರೋನಾ ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಪ್ರತೀ ವಾರ್ಡ್​ಗೆ ಆಂಬುಲೆನ್ಸ್ ವ್ಯವಸ್ಥೆ: ಬೊಮ್ಮನಹಳ್ಳಿ ವಲಯ ಕೋವಿಡ್ ಉಸ್ತುವಾರಿ ಸುರೇಶ್ ಕುಮಾರ್

ಜಿಲ್ಲೆಯಲ್ಲಿಂದು 10 ಮಂದಿಗೆ ಕೊರೋನಾ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ದಾಖಲಾದ ಸೋಂಕು ಪ್ರಕರಣಗಳ ಸಂಖ್ಯೆ 173ಕ್ಕೇರಿದೆ. ಇದೇ ವೇಳೆ 8 ಮಂದಿ ಮಹಿಳೆಯರು ಸೇರಿದಂತೆ 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇವರಲ್ಲಿ ಗುಂಡ್ಲುಪೇಟೆ ಪಟ್ಟಣ ಹೌಸಿಂಗ್ ಬೋರ್ಡ್ ಕಾಲೋನಿಯ  ನಾಲ್ಕು ವರ್ಷದ ಹೆಣ್ಣು ಮಗು ಕೊರೋನಾ ಗೆದ್ದು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ವಿಶೇಷವಾಗಿದೆ.

ಜಿಲ್ಲೆಯಲ್ಲಿ ಇಂದು ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟವರಿಗಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಹೆಚ್ಚಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಇಂದಿನ 10 ಪ್ರಕರಣಗಳಲ್ಲಿ ತಾಲೋಕುವಾರು ನೋಡುವುದಾದರೆ ಕೊಳ್ಳೇಗಾಲ 3, ಹನೂರು 1, ಗುಂಡ್ಲುಪೇಟೆ 1, ಚಾಮರಾಜನಗರ 2, ಯಳಂದೂರು 3 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇಂದಿನ ಸೋಂಕಿತರು ಸೇರಿದಂತೆ ಒಟ್ಟು 96 ಮಂದಿ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ನೂರರ ಮೇಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ ಎರಡಂಕಿಗೆ ಇಳಿದಿರುವುದು ಸ್ವಾಗತಾರ್ಹ.

ಇದನ್ನೂ ಓದಿ: ಕೊರೋನಾ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ಆರೋಪ - ದಾಖಲೆಯಿದ್ದರೆ ಬಿಡುಗಡೆ ಮಾಡಲಿ: ಸಚಿವ ಶ್ರೀರಾಮುಲು

ಸೋಂಕಿತರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕದಲ್ಲಿದ್ದ 2485 ಮಂದಿ ನಿಗಾವಣೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 11,233 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು 11,058 ಮಂದಿಯ ವರದಿ ನೆಗೆಟಿವ್ ಬಂದಿದೆ.  ಇನ್ನೂ 1,397 ಮಂದಿಯ ಗಂಟಲುದ್ರವ ಮಾದರಿ ಸಂಗ್ರಹಿಸಿ ಚಾಮರಾಜನಗರದ ಮೆಡಿಕಲ್ ಕಾಲೇಜಿನ ಕೋವಿಡ್ ಪ್ರಯೋಗಾಲಯಕ್ಕೆ ಕಳಹಿಸಲಾಗಿದ್ದು ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.

ವರದಿ: ಎಸ್.ಎಂ. ನಂದೀಶ್
Published by: Vijayasarthy SN
First published: July 12, 2020, 7:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading