ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬೈಕ್​ನಲ್ಲಿ ವೀಕೆಂಡ್ ಕರ್ಫ್ಯೂ ನೋಡಲು ರಸ್ತೆಗಿಳಿದ ಭೂಪ

ಚಾಮರಾಜನಗರದಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಸಾಕಷ್ಟು ಜನರು ಶನಿವಾರ ಅನಗತ್ಯವಾಗಿ ಓಡಾಟ ಮಾಡಿದ್ಧಾರೆ. ಪೊಲೀಸರು ಅಲ್ಲಲ್ಲಿ ನಿಂತು ಪರಿಶೀಲಿಸುತ್ತಿದ್ದಾರೆ. ಒಬ್ಬ ಬೈಕ್ ಸವಾರ ತಾನು ವೀಕೆಂಡ್ ಕರ್ಫ್ಯೂ ಹೇಗಿರುತ್ತೆ ನೋಡಲು ಬಂದೆ ಎಂದಿದ್ದು ಪೊಲೀಸರಿಗೂ ಶಾಕ್ ಕೊಟ್ಟಿತ್ತು.

ಚಾಮರಾಜನಗರದಲ್ಲಿ ಪೊಲೀಸರ ಕಾರ್ಯಾಚರಣೆ

ಚಾಮರಾಜನಗರದಲ್ಲಿ ಪೊಲೀಸರ ಕಾರ್ಯಾಚರಣೆ

  • Share this:
ಚಾಮರಾಜನಗರ (ಏ. 24): ಕೆಲವರಿಗೆ ವೀಕೆಂಡ್ ಕರ್ಫ್ಯೂ ಹೇಗಿರುತ್ತೆ ಎಂಬ ಕುತೂಹಲ. ಇನ್ನೂ ಕೆಲವರಿಗೆ ಮನೆಯಲ್ಲಿ ಇರಲಾರದೆ ಸುಖಾಸುಮ್ಮನೆ ಹೊರಗೆ ಸುತ್ತಾಡುವ ಚಾಳಿ. ಹೀಗೆ ಚಾಮರಾಜನಗರದಲ್ಲಿ ವೀಕೆಂಡ್ ಕರ್ಫ್ಯೂ ಹೇಗಿರುತ್ತೆ ಎಂದು ನೋಡಲು ಬಂದ ದ್ವಿಚಕ್ರ ವಾಹನ ಸವಾರನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇಲ್ಲಿನ ಗುಂಡ್ಲುಪೇಟೆ ವೃತ್ತದಲ್ಲಿ ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕಾರ್ಯಾಚರಿಸುತ್ತಿದ್ದಾಗ ಆ ಮಾರ್ಗದಲ್ಲಿ ಕೆಲವರು ದ್ವಿಚಕ್ರ ವಾಹನ ಸವಾರರು ಬಂದಿದ್ದಾರೆ. ಇವರನ್ನು ತಡೆದು ಪ್ರಶ್ನಿಸಿದಾಗ ಒಬ್ಬ ಆಸ್ಪತ್ರೆಗೆ ಹೋಗಬೇಕು ಎಂದ, ಇನ್ನೊಬ್ಬ ನಾನು ಕೆಎಸ್ಸಾರ್ಟಿಸಿ ನೌಕರ ಎಂದ. ಹೀಗೆ ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದರೆ ಭೂಪನೊಬ್ಬ ತಾನು ಲಾಕ್ ಡೌನ್ ನೋಡಲು ಬಂದಿದ್ದೀನಿ ಮೇಡಂ ಎನ್ನುವುದೇ! ಈ ಉತ್ತರ ಕೇಳಿದ  ಡಿವೈಎಸ್ಪಿ ಒಂದು ಕ್ಷಣ ಅವಾಕ್ಕಾಗಿದ್ದಂತೂ ಹೌದು.

ದ್ವಿಚಕ್ರ ವಾಹನ ಸವಾರನ ಈ ಮಾತು ಕೇಳಿದ ಅವರು, ಏನಪ್ಪಾ ತಮಾಷೆ ಮಾಡ್ತಾ ಇದ್ದೀಯಾ? ಎಂದು ಈತನ ಬೈಕ್ ನಂಬರ್ ನೋಟ್ ಮಾಡಿಕೊಂಡು ದಂಡ ವಿಧಿಸುವಂತೆ ಪೊಲೀಸರಿಗೆ ಸೂಚಿಸಿದರು. ವೀಕೆಂಡ್ ಕರ್ಫ್ಯೂ ನೋಡಲು ಬಂದವನಿಗೆ  ಪೊಲೀಸರು 100 ರೂಪಾಯಿ ದಂಡ ವಿಧಿಸಿದರು. ಸರಿಯಾದ ಮಾಸ್ಕ್ ಅನ್ನೂ ಹಾಕದೆ ಬಾಯಿ ಮೂಗಿಗೆ ಬಟ್ಟೆ ಸುತ್ತಿಕೊಂಡು ಬಂದಿದ್ದನ್ನು ನೋಡಿ ಸಿಡಿಮಿಡಿಗೊಂಡ ಡಿವೈಎಸ್ಪಿ, ಮತ್ತೆ ಅನಾವಶ್ಯಕ ವಾಗಿ ಓಡಾಟ ನಡೆಸುವುದು ಕಂಡು ಬಂದರೆ ಸುಮ್ಮನಿರುವುದಿಲ್ಲ ಎಂದು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.

ಇದನ್ನೂ ಓದಿ: Oxygen Scarcity - ಆಕ್ಸಿಜನ್ ಸಿಗದ ಕಾರಣ ದೆಹಲಿಯ ಜೈಪುರ್ ಆಸ್ಪತ್ರೆಯಲ್ಲಿ 20 ಮಂದಿ ದುರ್ಮರಣ

ಚಾಮರಾಜ ನಗರದಲ್ಲಿ ಮಾರ್ಗಸೂಚಿ ಉಲ್ಲಂಘನೆ: 51 ಮಂದಿ ವಿರುದ್ದ ಎಫ್ಐಆರ್

ಕೊರೋನಾ ಸೋಂಕು ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ಹೇರಲಾಗಿದ್ದರೂ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸುಮಾರು ಹೊತ್ತು ವಾಹನಗಳ ಅನಗತ್ಯ ಓಡಾಟ ಸಾಮಾನ್ಯವಾಗಿತ್ತು. ಕಳೆದ ಎರಡು ದಿನಗಳಿಂದ ವೀಕೆಂಡ್ ಕರ್ಫ್ಯೂ ಬಗ್ಗೆ ಎಚ್ಚರಿಕೆ ನೀಡಿದ್ದರೂ ಕೇರ್ ಮಾಡದ ವಾಹನ ಸವಾರರು ಸಬೂಬು ಹೇಳುತ್ತಾ ಸುಖಾಸುಮ್ಮನೆ ಓಡಾಡುತ್ತಿದ್ದರು. ಕೊನೆಗೆ‌ ಲಾಠಿ ಹಿಡಿದು ಫೀಲ್ಡಿಗಿಳಿದ ಪೊಲೀಸರು ಅನಾವಶ್ಯಕವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.

ಇದಲ್ಲದೆ ನಗರದ ನಾಲ್ಕು ಕಡೆ ನಾಕಾ ಬಂದಿ ಹಾಕಿ ಅನಗತ್ಯ ವಾಹನ ಸಂಚಾರ ನಿಯಂತ್ರಣಕ್ಕೆ ಮುಂದಾದರು. ಪ್ರವೇಶ ದ್ವಾರಗಳಲ್ಲೇ ವಾಹನಗಳನ್ನು ತಡೆದು ವಾಪಸ್ ಕಳುಹಿಸಲು ಆರಂಭಿಸಿದರು. ಈ ನಡುವೆ ವೀಕೆಂಡ್ ಕರ್ಫ್ಯೂ ಮಾರ್ಗಸೂಚಿ ಉಲ್ಲಂಘಿಸಿದ 51 ಮಂದಿ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ 47 ಮಂದಿ  ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 4 ಮಂದಿ ವಿರುದ್ದ ಕೇಸ್ ದಾಖಲಿಸಲಾಗಿದೆ.

ಇದನ್ನೂ ಓದಿ: HD Kumaraswamy - ಕೊರೋನಾದಿಂದ ಗುಣಮುಖರಾದ ಎಚ್ ಡಿ ಕುಮಾರಸ್ವಾಮಿ; 2 ವಾರಗಳ ಕಾಲ ಮನೆಯಲ್ಲಿ ವಿಶ್ರಾಂತಿ

ಈ ಬಗ್ಗೆ ಮಾಹಿತಿ ನೋಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ವೀಕೆಂಡ್ ಕರ್ಫ್ಯೂ ಬಗ್ಗೆ ಸಾಕಷ್ಟು ಅರಿವು ಮೂಡಿಸಿದ್ದೇವೆ. ಅನಗತ್ಯವಾಗಿ ಓಡಾಡಬಾರದು. ಬೆಳಿಗ್ಗೆ 10 ರ ನಂತರ ಎಲ್ಲ ಅಂಗಡಿ ಮುಂಗಟ್ಟು ಮುಚ್ಚಬೇಕು ಎಂದು ಸೂಚನೆ ನೀಡಿದ್ದೇವೆ. ಆದರೂ ಕೆಲವರು ಸೂಚನೆ ಉಲ್ಲಂಘಿಸಿದ್ದಾರೆ. ವಾಹನಗಳ ಅನಾವಶ್ಯಕ ಓಡಾಟ ತಡೆಗಟ್ಟಲು ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಎರಡರಿಂದ ಮೂರು ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವರದಿ: ಎಸ್.ಎಂ. ನಂದೀಶ್
Published by:Vijayasarthy SN
First published: