ಚಾಮರಾಜನಗರ (ಮೇ 25): ಜಿಲ್ಲಾಸ್ಪತ್ರೆಯಲ್ಲಿ ಮೇ2 ರ ರಾತ್ರಿ ನಡೆದಿದ್ದ ಆಕ್ಸಿಜನ್ ಕೊರತೆ ದುರಂತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಅಂದಿನ ದುರಂತದಲ್ಲಿ ಮೃತಪಟ್ಟ ಇನ್ನೂ ಹಲವರ ಹೆಸರನ್ನ ಕೈಬಿಡಲಾಗಿದ್ದು ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರ ಪ್ರಾಣವೂ ಹೋಯ್ತು, ಇತ್ತ ಪರಿಹಾರವು ಇಲ್ಲದಂತಾಗಿದ್ದು ಅಂತಹ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮುಂದೆ ಜೀವನಕ್ಕೆ ಏನು ಮಾಡುವುದು ಎಂದು ದಿಕ್ಕು ತೋಚದೆ ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ.
ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಚಾಮರಾಜಗರ ತಾಲೋಕು ಬಿಸಿಲವಾಡಿಯ ಸಿದ್ದನಾಯಕ ಎಂಬುವರ ಹೆಸರು ಸಹ ಪರಿಹಾರದ ಪಟ್ಟಿಯಿಂದ ಕೈ ಬಿಡಲಾಗಿದ್ದು ಕುಟುಂಬಸ್ಥರ ಗೋಳು ಹೇಳತೀರದಾಗಿದೆ. ಆಟೋ ಚಾಲಕರಾಗಿದ್ದ ಸಿದ್ದನಾಯಕ ಏಪ್ರಿಲ್ 26ರಂದು ಕೊರೋನಾ ಪಾಸಿಟಿವ್ ಆಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೇ 2 ರಂದು ರಾತ್ರಿ 11.15 ರ ವೇಳೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತ ಪಟ್ಟಿದ್ದರು. ಸಿದ್ದನಾಯಕ ಮೃತಪಟ್ಟಿರುವ ಬಗ್ಗೆ ವೈದ್ಯಾಧಿಕಾರಿಗಳು ಸಹ ಧೃಢೀಕರಣ ಪತ್ರ ನೀಡಿದ್ದಾರೆ. ಆದರೆ ಸರ್ಕಾರ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಕುಟುಂಬಗಳಿಗೆ ನೀಡುತ್ತಿರುವ ಪರಿಹಾರದ ಪಟ್ಟಿಯಲ್ಲಿ ಮಾತ್ರ ಸಿದ್ಧನಾಯಕ ಅವರು ಹೆಸರು ಇಲ್ಲವಾಗಿದೆ.
ಇದನ್ನೂ ಓದಿ:ನಾಳೆಯಿಂದ ಭಾರತದಲ್ಲಿ ಬ್ಯಾನ್ ಆಗುತ್ತಾ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್?
"ಅಂದು ರಾತ್ರಿ ನಾನು ಹಾಗೂ ನಮ್ಮ ಅಣ್ಣ ನಮ್ಮ ಯಜಮಾನರ ಬಳಿಯೇ ಇದ್ದೆವು. 10.30 ರ ವೇಳೆಗೆ ಆಕ್ಸಿಜನ್ ಖಾಲಿಯಾಯ್ತು. ನಮ ಯಜಮಾನರನ್ನು ಬೆನ್ನು ಮೇಲೆ ಮಾಡಿ ಬೆನ್ನು ತಟ್ಟುತ್ತಾ, ಅವರ ಕೈಕಾಲು ಉಜ್ಜುತ್ತಾ ಹೆದರಬೇಡಿ ಇನ್ನೇನು ಆಕ್ಸಿಜನ್ ಬರುತ್ತೆ ಎಂದು ಧೈರ್ಯ ತುಂಬುತ್ತಿದ್ದವು. ಆದರೆ ರಾತ್ರಿ 11.15 ಆದರೂ ಆಕ್ಸಿಜನ್ ಬರಲಿಲ್ಲ, ನಮ್ಮ ಕಣ್ಣೆದುರೇ ನನ್ನ ಪತಿ ಸತ್ತು ಹೋದರು" ಎಂದು ಸಿದ್ದನಾಯಕರ ಪತ್ನಿ ಜ್ಯೋತಿ ಅಂದಿನ ಘಟನೆಯನ್ನು ವಿವರಿಸಿದ್ದು, "ನಮಗೆ ಆಸ್ಪತ್ರೆ ಯಲ್ಲು ಅನ್ಯಾಯ ಆಯ್ತು ಈಗ ಪರಿಹಾರದಲ್ಲು ಅನ್ಯಾಯ ಆಗಿದೆ, ವಯಸ್ಸಾದ ನನ್ನ ಅತ್ತೆ ಮಾವ ಹಾಗು ನನ್ನ ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಜೀವನ ಹೇಗೆ ಸಾಗಿಸಲಿ, ಎಲ್ಲಿ ಹೋಗಲಿ ಎಂದು ಕಣ್ಣೀರಿಡುತ್ತಿದ್ದಾರೆ
"ಮೃತರ ಕುಟುಂಬಗಳಿಗೆ ಪರಿಹಾರ ಬಿಡುಗಡೆಯಾಗಿರುವ ಮಾಹಿತಿ ತಿಳಿದು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ವಿಚಾರಿಸಿದೆವು. ಸಿದ್ದನಾಯಕರ ಹೆಸರು ಪಟ್ಟಿಯಲ್ಲಿ ಇಲ್ಲ, ನೀವು ಜಿಲ್ಲಾಸ್ಪತ್ರೆಗೆ ಹೋಗಿ ವಿಚಾರಿಸಿ ಎಂದು ಅಲ್ಲಿ ತಿಳಿಸಿದ್ದರಿಂದ ಜಿಲ್ಲಾಸ್ಪತ್ರೆಗು ಹೋಗಿ ವಿಚಾರಿಸಲಾಗಿ, ನಮಗೆ ಗೊತ್ತಿಲ್ಲ ಫೈಲ್ ಗಳೆಲ್ಲಾ ಸೀಜ್ ಆಗಿವೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇಲ್ಲಿ ಸಾವುಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನ ಇದೆ. ಅಧಿಕಾರಿಗಳ ಬೇಜವಬ್ದಾರಿತನದಿಂದ ನಮ್ಮ ಅಕ್ಕನ ಸಂಸಾರ ಬೀದಿಪಾಲಾಗಿದೆ "ಎಂದು ಸಿದ್ದನಾಯಕರ ಪತ್ನಿಯ ಸಹೋದರಿ ಪವಿತ್ರ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಜಿಲ್ಲಾಸ್ಪತ್ರೆಯಿಂದ ಪಟ್ಟಿ ಕೊಡುವಾಗಲೇ ತಪ್ಪಾಗಿದೆ. ಆಕ್ಸಿಜನ್ ಕೊರತೆಯಿಂದ24 ಮಂದಿಯಷ್ಟೇ ಅಲ್ಲ 34 ಮಂದಿ ಸತ್ತಿದ್ದಾರೆ ಎಂದು ಆವತ್ತಿನಿಂದಲು ಪ್ರತಿಪಾದಿಸುತ್ತಾ ಬಂದಿದ್ದೇನೆ. ಸಿದ್ದನಾಯಕ ಸೇರಿದಂತೆ ಇನ್ನೂ ಹತ್ತು ಮಂದಿಯ ಹೆಸರು ಕೈ ಬಿಡಲಾಗಿದೆ. ಇದನ್ನು ಸರಿಪಡಿಸಿ ಉಳಿದ ಕುಟುಂಬಗಳಿಗು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹೈಕೋರ್ಟ್ ನೇಮಿಸಿದ್ದ ನ್ಯಾ.ವೇಣುಗೋಪಾಲ ಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಸಹ ಆಕ್ಸಿಜನ್ ಕೊರತೆಯಿಂದ 36 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದೆ. ಆದಾಗ್ಯೂ ಸರ್ಕಾರ 24 ಮಂದಿಯ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಿದೆ. ಉಳಿದವರ ಸಾವು ಸಾವಲ್ಲವೇ? ಅವರ ಕುಟುಂಬಗಳ ಕಥೆ ಏನು? ಅವರಿಗೆ ಪರಿಹಾರ ನೀಡುವವರು ಯಾರು? ಎಂಬುದಕ್ಕೆ ಸರ್ಕಾರವೇ ಉತ್ತರಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ