ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಕುತ್ತು; 22 ಕಿಮೀ ಸಾಗಲು ಬೇಕು 2 ಗಂಟೆ

ಚಾಮರಾಜನಗರ ಜಿಲ್ಲೆಯ ಮೂಲಕ ಹಾದು ಹೋಗುವ ರಾ.ಹೆ. 209ರಲ್ಲಿ ಕೈಯಲ್ಲಿ ಪ್ರಾಣ ಹಿಡಿದುಕೊಂಡು ಸಂಚರಿಸಬೇಕಿದೆ. ಚಾಮರಾಜನಗರದ ಅಟ್ಟುಗುಳಿಪುರದಿಂದ ತಮಿಳುನಾಡಿನ ಗಡಿಭಾಗದವರೆಗೆ 22 ಕಿಲೋ ಮೀಟರ್ ಉದ್ದಕ್ಕೂ ರಸ್ತೆ ಎಲ್ಲಿದೆ ಎಂಬುದನ್ನು ದುರ್ಬೀನು ಹಾಕಿ ಹುಡುಕಬೇಕಷ್ಟೆ.

news18-kannada
Updated:August 1, 2020, 3:11 PM IST
ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಕುತ್ತು; 22 ಕಿಮೀ ಸಾಗಲು ಬೇಕು 2 ಗಂಟೆ
ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿ 209ರ ದುಸ್ಥಿತಿ
  • Share this:
ಚಾಮರಾಜನಗರ (ಆಗಸ್ಟ್ 1): ಎಲ್ಲೆಲ್ಲೂ ಗುಂಡಿಗಳದ್ದೇ ಸಾಮ್ರಾಜ್ಯ, ಹಳ್ಳಕೊಳ್ಳಗಳದ್ದೇ ದರ್ಬಾರ್. ವಾಲಾಡುತ್ತಾ ಸಂಚರಿಸುವ ವಾಹನಗಳು, ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಕುತ್ತು…. ಇದ್ಯಾವುದೋ ಗ್ರಾಮೀಣ ಭಾಗದ ರಸ್ತೆಯ ಪರಿಸ್ಥಿತಿಯಲ್ಲ. ಇದು ಕರ್ನಾಟಕದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 209ರ ದುಸ್ಥಿತಿ.

ಚಾಮರಾಜನಗರ ಜಿಲ್ಲೆಯ ಮೂಲಕ ಹಾದು ಹೋಗುವ ಈ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೈಯಲ್ಲಿ ಪ್ರಾಣ ಹಿಡಿದುಕೊಂಡು ಸಂಚರಿಸಬೇಕಿದೆ. ಚಾಮರಾಜನಗರ ಜಿಲ್ಲೆ ಅಟ್ಟುಗುಳಿಪುರದಿಂದ ತಮಿಳುನಾಡಿನ ಗಡಿಭಾಗದವರೆಗೆ 22 ಕಿಲೋ ಮೀಟರ್ ಉದ್ದಕ್ಕೂ ರಸ್ತೆ ಎಲ್ಲಿದೆ ಎಂಬುದನ್ನು ದುರ್ಬೀನು ಹಾಕಿ ಹುಡುಕಬೇಕಷ್ಟೆ. ಅಷ್ಟರ ಮಟ್ಟಿಗೆ ಈ ರಾಷ್ಟ್ರೀಯ ಹೆದ್ದಾರಿ ಅದ್ವಾನ ಎದ್ದು ಹೋಗಿದೆ. ಈ 22 ಕಿಲೋ ಮೀಟರ್ ಪ್ರಯಾಣಕ್ಕೆ ಎರಡು ಗಂಟೆಗೂ ಹೆಚ್ಚು ಕಾಲ ಬೇಕು ಅಂದರೆ ಈ ರಾಷ್ಟ್ರೀಯ ಹೆದ್ದಾರಿ ಎಷ್ಟರ ಮಟ್ಟಿಗೆ ಕಿತ್ತು ಹೋಗಿದೆ ಎಂಬುದನ್ನು ಯಾರಾದರೂ ಊಹಿಸಿಕೊಳ್ಳಬಹುದು.

ಇದನ್ನೂ ಓದಿ: Karnataka Dam Water Level: ಆಗಸ್ಟ್​ ಬಂದರೂ ಸುರಿಯುತ್ತಿಲ್ಲ ಮಳೆ; ಇಂದಿನ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಈ ಹೆದ್ದಾರಿಯಲ್ಲಿ ನಿತ್ಯವೂ ಒಂದಲ್ಲ ಒಂದು ವಾಹನಗಳು ಮಗುಚಿ ಬಿದ್ದು ಅಪಘಾತಕ್ಕೀಡಗುತಿದ್ದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಜುಲೈ 15 ರಂದು ಪುಣಜನೂರು ಗಡಿಭಾಗಕ್ಕೆ ತೆರಳಿ ಖುದ್ದು ಪರಿಶೀಲನೆ ನಡೆಸಿದ್ದರು. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿದ್ದ ಅವರು ಮೊದಲ ಎಂಟು ದಿನಗಳ ಒಳಗೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯಲಿದೆ. ನಂತರದ ದಿನಗಳಲ್ಲಿ ಸಂಪೂರ್ಣ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದರು. ಇದಾದ ಮರುದಿನವೇ ಅಧಿಕಾರಿಗಳು ಗುಂಡಿಗಳಿಗೆ ಮಣ್ಣು ಸುರಿದು ಕೈತೊಳೆದುಕೊಂಡಿದ್ದಾರೆ. ಈಗ ಮಳೆಯಾಗುತ್ತಿರುವುದರಿಂದ ಗುಂಡಿಗಳಿಗೆ ತುಂಬಿರುವ ಮಣ್ಣು ಕೆಸರುಮಯವಾಗಿ ಮತ್ತೆ ಗುಂಡಿಬಿದ್ದು ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ.

2017ರಲ್ಲಿ ಬೆಂಗಳೂರಿನಿಂದ ಚಾಮರಾಜನಗರ ಜಿಲ್ಲೆ ಗಡಿಭಾಗದವರೆಗೆ 171 ಕಿಲೋಮೀಟರ್ ಉದ್ದವಿರುವ ಈ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡಲು ಭೂಸ್ವಾಧೀನ ಹಾಗು ಅಭಿವೃದ್ಧಿಗೆ ಕೇಂದ್ರ ಸರ್ಕಾರ 1080 ಕೋಟಿ ರೂಪಾಯಿ ಮಂಜೂರು ಮಾಡಿತ್ತು. ಬೆಂಗಳೂರು ಮೂಲದ ಸದ್ಭವ್ ಹೈವೇ ಎಂಬ ಖಾಸಗಿ ಕಂಪನಿಯು ಟೆಂಡರ್ ಪಡೆದಿತ್ತು. ಟೆಂಡರ್ ನಿಯಮಗಳ ಪ್ರಕಾರ ಈಗಾಗಲೇ ರಸ್ತೆ ಅಗಲೀಕರಣ ಹಾಗು ಅಭಿವೃದ್ಧಿ ಸಂಪೂರ್ಣವಾಗಿ ಮುಕ್ತಾಯಗೊಳ್ಳ ಬೇಕಾಗಿತ್ತು. ಆದ್ರೆ ಅಲ್ಲಿಂದಿಷ್ಟು, ಇಲ್ಲೊಂದಿಷ್ಟು ಕಾಮಗಾರಿ ಮಾಡಲಾಗಿದ್ದು ಯಾವುದೇ ಕಾಮಗಾರಿಯನ್ನ ಸಂಪೂರ್ಣವಾಗಿ ಮುಗಿಸಿಲ್ಲ. ಅಟ್ಟುಗುಳಿಪುರದಿಂದ ಗಡಿಭಾಗದವರೆಗೆ ಕಾಮಗಾರಿಯನ್ನೇ ಆರಂಭಿಸಿಲ್ಲ.

ಇದನ್ನೂ ಓದಿ: ಗ್ರಾಮ ಪಂಚಾಯಿತಿ ಮತ್ತು ನರೇಗಾ ಸ್ಥಳಗಳಿಗೆ ಚಿಕ್ಕಾಬಳ್ಳಾಪುರ ಸಿಇಓ ದಿಢೀರ್ ಭೇಟಿ: ಅಧಿಕಾರಿಗಳಿಗೆ ತೀವ್ರ ತರಾಟೆ 

ಕರ್ನಾಟಕದ ಭಾಗದಲ್ಲಿ ಈ ರಾಷ್ಟ್ರೀಯ ಹೆದ್ದಾರಿ ಅದ್ವಾನವೆದ್ದು ಹೋಗಿದ್ದರೆ ತಮಿಳುನಾಡು ಭಾಗದಲ್ಲಿ ಅತ್ಯುತ್ತಮ ಗುಣಮಟ್ಟದಿಂದ ಕೂಡಿದ್ದು ರಾಜ್ಯದ ಆಡತಳಿ ವೈಖರಿಯನ್ನು ಅಣುಕಿಸುವಂತಿದೆ. ತಮಿಳುನಾಡು ಕಡೆಯಿಂದ ಬರುವವರು ರಾಜ್ಯದ ಗಡಿ ಪ್ರವೇಶಿಸುತ್ತಿದ್ದಂತೆ ಹಿಡಿಶಾಪ ಹಾಕತೊಡಗಿದ್ದಾರೆ. ರಾಜ್ಯದ ಗಡಿಭಾಗದಲ್ಲಿ ಕರ್ನಾಟಕದ ಮಾನಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿದೆ.

ಎಸ್.ಎಂ.ನಂದೀಶ್  ಚಾಮರಾಜನಗರ 
Published by: Vijayasarthy SN
First published: August 1, 2020, 3:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading