ಚಾಮರಾಜನಗರ (ಮಾ.24) ದೇಶವನ್ನು ಸಂಪೂರ್ಣವಾಗಿ ಬಯಲು ಬಹಿರ್ದೆಸೆಮುಕ್ತವನ್ನಾಗಿ ಮಾಡಲು ಸಂಪೂರ್ಣ ಸ್ವಚ್ಚತಾ ಆಂದೋಲನ ಆಯ್ತು, ನಿರ್ಮಲ ಭಾರತ್ ಯೋಜನೆಯು ಆಯ್ತು, ಈಗ ಸ್ಚಚ್ವ ಭಾರತ್ ಮಿಷನ್ ಜಾರಿಯಲ್ಲಿದೆ. ಆದರೆ ಇನ್ನು ಕೆಲವು ಜಿಲ್ಲೆಗಳಲ್ಲಿ ಬಯಲೇ ಶೌಚಾಲಯವಾಗಿದ್ದು ಬಯಲು ಬಹಿರ್ದೆಸೆಯಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ.
ಹೌದು, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಪಿ.ಜಿ.ಪಾಳ್ಯ ಆದಿಜಾಂಬವರ ಬೀದಿಯ ಜನರಿಗೆ ಶೌಚಾಲಯ ಎಂಬುದು ಕನಸಾಗಿಯೇ ಉಳಿದಿದೆ. ಪ್ರತಿದಿನ ಮಲ ವಿಸರ್ಜನೆಗೆ 2 ಕಿಲೋ ಮೀಟರ್ ದೂರದ ಬಯಲಿಗೆ ತೆರಳಬೇಕಾದ ದುಸ್ಥಿತಿ ಇದ್ದು ಮಹಿಳೆಯರಂತೂ ಸಂಜೆಯಾಗುವುದನ್ನೇ ಕಾಯಬೇಕು. ಪುರುಷರು ಅಡ್ಡಾಡುವುದರಿಂದ ನಾಚಿಕೆ ಬಿಟ್ಟು ಅನಿವಾರ್ಯವಾಗಿ ಬೇಲಿ ಮರೆಯಲ್ಲಿ ಕೂರುವ ಹೀನಾಯ ಪರಿಸ್ಥಿತಿ ಈ ಮಹಿಳೆಯರದ್ದಾಗಿದ್ದು ಹೇಳಿಕೊಳ್ಳಲಾಗದ ವೇದನೆ ಅನುಭವಿಸುತ್ತಿದ್ದಾರೆ. ಒಟ್ಟಾರೆ ಸ್ವಚ್ಛ ಭಾರತ್ ಮಿಷನ್ ಮೂಲಕ ಪ್ರತಿ ಮನೆಗಳಲ್ಲೂ ಶೌಚಾಲಯ ನಿರ್ಮಾಣದ ಬಹುದೊಡ್ಡ ಆಂದೋಲನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ವಿಫಲವಾಗಿದೆ.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಸಾಮಾನ್ಯ ವರ್ಗದವರಿಗೆ 12 ಸಾವಿರ ರೂ. ಎಸ್ಸಿ, ಎಸ್ಟಿಗೆ 15 ಸಾವಿರ ರೂ. ಸಹಾಯಧನ ನ ನೀಡುತ್ತದೆ. ಆದರೆ ಈ ಯೋಜನೆಯ ಮಾಹಿತಿಯು ಗ್ರಾಮಸ್ಥರಿಗೆ ಇಲ್ಲವಾಗಿದ್ದು ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸುವಂತಾಗಿದೆ. ನಮ್ಮಲ್ಲಿ ಶೌಚಾಲಯ ಇಲ್ಲದೆ ಮಲ ವಿಸರ್ಜನೆಗೆ ಹೊರಗೆ ಹೋಗಬೇಕು, ಪುರುಷರು ಓಡಾಡುವುದರಿಂದ ಸಂಜೆಯಾಗುವುದನ್ನೇ ಕಾಯುತ್ತೇವೆ. ಬಹಳ ಹಿಂಸೆಯಾಗುತ್ತದೆ. ಮರ್ಯಾದೆ ಬಿಟ್ಟು ಬಯಲಲ್ಲಿ ಕೂರಬೇಕು, ಎಂದು ಲಕ್ಷ್ಮಿ ಎಂಬ ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಶೌಚಾಲಯ, ವಸತಿ, ಕುಡಿಯುವ ನೀರು ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಾವು ಸಾಕಷ್ಟು ಬಾರಿ ಅರ್ಜಿ ಕೊಟ್ಟಿದ್ದೇವೆ. ಕೇಳಿದರೆ ಮಾಡಿಕೊಡುತ್ತೇವೆ ಎಂದು ಕೇವಲ ಭರವಸೆ ನೀಡುತ್ತಾರೆ ಅಷ್ಟೇ. ಆದರೆ ಯಾವುದೇ ಪ್ರಯೋಜನವೂ ಆಗಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳಾಗಲಿ, ಜಿಲ್ಲಾ ಮಟ್ಟದ ಅಧಿಕಾರಿಗಳಾಗಲಿ ಇದುವರೆಗೂ ಭೇಟಿ ನೀಡಿಲ್ಲ. ಮುಖ್ಯವಾಗಿ ಶೌಚಾಲಯ ಇಲ್ಲದೆ ನಮ್ಮ ಮನೆಗಳಲ್ಲಿನ ಮಹಿಳೆಯರ ಪಾಡಂತು ಹೇಳತೀರದು. ಈಗ ಗ್ರಾಮ ವಾಸ್ತವ್ಯ ಮಾಡುತ್ತಿರುವ ಜಿಲ್ಲಾಧಿಕಾರಿಗಳು ನಮ್ಮೂರಿನಲ್ಲೂ ಒಮ್ಮೆ ಗ್ರಾಮ ವಾಸ್ತವ್ಯ ಮಾಡಬೇಕು ನಮ್ಮ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಪಿ.ಜಿ.ಪಾಳ್ಯ ಗ್ರಾಮದ ಆದಿಜಾಂಬವರ ಬೀದಿಯಲ್ಲಿ ಅವಿಭಕ್ತ ಕುಟುಂಬಗಳು ವಿಭಜನೆಯಾಗಿ ಕುಟುಂಬಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ವಲಸೆ ಹೋಗಿದ್ದ ಕುಟುಂಬಗಳು ವಾಪಸ್ ಬಂದಿವೆ. ಹಾಗಾಗಿ ಅಲ್ಲಿ ಶೌಚಾಲಯ ಸಮಸ್ಯೆ ತಲೆದೋರಿದೆ. ಅಲ್ಲಿನ ಶೌಚಾಲಯ ಸಮಸ್ಯೆ ಇರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಚಾಮರಾಜನಗರ ಜಿಲ್ಲಾ ಪಂಚಾಯತ್ ಸಿ.ಇ.ಒ ಹರ್ಷಲ್ ಬೋಯರ್ ನಾರಾಯಣರಾವ್ ನ್ಯೂಸ್ 18 ಗೆ ತಿಳಿಸಿದರು.
ವರದಿ: ಎಸ್.ಎಂ.ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ