ಹೊರ ಜಿಲ್ಲೆಗಳಿಂದ ಕೊರೋನಾ ಹೆಚ್ಚಳ ಭೀತಿ; ಅಂತರ್​​ ಜಿಲ್ಲಾ ಚೆಕ್​​ ಪೋಸ್ಟ್ ತೆರೆದ ಚಾಮರಾಜನಗರ ಜಿಲ್ಲಾಡಳಿತ

ಚೆಕ್ ಪೋಸ್ಟ್ ಗಳಲ್ಲಿ ಹೊರ ಜಿಲ್ಲೆಗಳಿಂದ ಬರುವವರಿಗೆ ರ್ಯಾಂಡಮ್ ಟೆಸ್ಟ್ ಮಾಡಲಾಗುವುದು. ಸೋಂಕಿನ ಲಕ್ಷಣ ಕಂಡು ಬಂದರೆ ಚೆಕ್ ಪೋಸ್ಟ್ ಗಳಲ್ಲೇ RAT ಪರೀಕ್ಷೆ ನಡೆಸಲಾಗುವುದು. ಸೋಂಕಿತ ರನ್ನು ಚೆಕ್ ಪೋಸ್ಟ್ ನಿಂದ ವಾಪಸ್ ಕಳುಹಿಸಲಾಗುವುದು.

ಚೆಕ್​ ಪೋಸ್ಟ್​

ಚೆಕ್​ ಪೋಸ್ಟ್​

  • Share this:
ಚಾಮರಾಜನಗರ (ಆ.15): ನೆರೆಯ ಕೇರಳ ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ  ರಾಜ್ಯದ ಎಂಟು ಗಡಿ ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ  ವೀಕೆಂಡ್ ಕರ್ಫ್ಯೂ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಈ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಹೋಗಿ ಅಂತರ ಜಿಲ್ಲಾ ಚೆಕ್ ಪೋಸ್ಟ್ ಗಳನ್ನೂ ತೆರೆದಿದೆ. ನೆರೆಯ ಕೇರಳ ಹಾಗು ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಗಡಿ ಪ್ರದೇಶಗಳಲ್ಲಿ ಈಗಾಗಲೇ ಆರು ಅಂತರರಾಜ್ಯ ಪೋಸ್ಟ್ ಗಳು ಕಾರ್ಯಾಚರಣೆ ನಡೆಸುತ್ತಿದ್ದು ಇದೀಗ ಐದು ಅಂತರ ಜಿಲ್ಲಾ ಚೆಕ್ ಪೋಸ್ಟ್ ಗಳನ್ನು ಆರಂಭಿಸಲಾಗಿದೆ.

ಅಂತರ ರಾಜ್ಯ ಗಳಿಗಿಂತ ಅಂತರ ಜಿಲ್ಲೆಗಳಿಂದಲೇ  ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಮೈಸೂರು, ಮಂಡ್ಯ ಸೇರಿದಂತೆ ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ  ಗುಂಡ್ಲುಪೇಟೆ ತಾಲೋಕಿನ‌ ಬೇಗೂರು, ಚಾಮರಾಜನಗರ ತಾಲೋಕಿನ ಹೆಗ್ಗವಾಡಿ, ಬಾಣಹಳ್ಳಿ,  ಕೊಳ್ಳೇಗಾಲ ತಾಲೋಕಿನ ಟಗರಪುರ ಹಾಗು ಸತ್ತೇಗಾಲದಲ್ಲಿ ಅಂತರ ಜಿಲ್ಲಾ ಚೆಕ್ ಪೋಸ್ಟ್ ಗಳನ್ನು  ತೆರೆಯಲಾಗಿದೆ. ಈ ಚೆಕ್ ಪೋಸ್ಟ್ ಗಳಿಗೆ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ನೌಕರರನ್ನು  ನಿಯೋಜನೆ ಮಾಡಲಾಗಿದೆ.

ಜಿಲ್ಲೆಯ ಮಹದೇಶ್ವರ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬಿಳಿಗಿರಿರಂಗನ ಬೆಟ್ಟ ಬಂಡೀಪುರ, ಭರಚುಕ್ಕಿ ಜಲಪಾತ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿಗೆ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಬರುವುದು ಸಾಮಾನ್ಯವಾಗಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ ಹೊರ ಜಿಲ್ಲೆಯಿಂದ ಬಂದವರಿಂದಲೇ  ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿರುವುದು ಕಂಡು ಬಂದಿದೆ.

ಇದನ್ನೂ ಓದಿ:ಮುಳ್ಳಯ್ಯನಗಿರಿಯಲ್ಲಿ ದಿನಕ್ಕೆ 1200 ಪ್ರವಾಸಿಗರಿಗೆ ಮಾತ್ರ ಅವಕಾಶ; ಇಂದಿನಿಂದಲೇ ಆದೇಶ ಜಾರಿ

ಕೊಳ್ಳೇಗಾಲ ತಾಲೂಕಿನ ಒಡೆಯರಪಾಳ್ಯ ಬಳಿ ಇರುವ ಟಿಬೇಟಿಯನ್ ಸೆಟಲ್ ಮೆಂಟ್ ನಲ್ಲಿ 70ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ತಗುಲಿತ್ತು. ಸೋಂಕಿನ ಮೂಲ ಪತ್ತೆ ಹಚ್ಚಿ ದಾಗ ಇವರಲ್ಲಿ ಕೆಲವರು ಮೈಸೂರು ಜಿಲ್ಲೆಯ ಬೈಲುಕುಪ್ಪೆಗೆ ಹೋಗಿ ಬಂದಿರುವುದು ಗೊತ್ತಾಗಿದೆ ಅಂತಹವರಿಂದ ಮತ್ತಷ್ಟು ಜನರಿಗರ ಸೋಂಕು ಹರಡಿದೆ ಇದಲ್ಲದೆ  ಬಿ.ಆರ್.ಟಿ. ಹುಲಿರಕ್ಷಿತಾರಣ್ಯದ ವ್ಯಾಪ್ತಿಯಲ್ಲಿರುವ ಬೇಡಗುಳಿಯಲ್ಲಿ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದವು. ಇಲ್ಲಿನ ಕಾಫಿ ಎಸ್ಟೇಟ್ ವ್ಯವಸ್ಥಾಪಕರೊಬ್ಬರು ಕೊಡುಗು ಜಿಲ್ಲೆಗೆ ಹೋಗಿ ಬಂದ ನಂತರ ಸೋಂಕು ಹರಡಿತ್ತು. ಹೀಗೆ ಹಲವಾರು ಕಡೆ ಬೇರೆ ಬೇರೆ  ಜಿಲ್ಲೆಗಳಿಂದಲೇ ಬಂದವರಿಂದಲೇ ಹೆಚ್ಚು ಕೊರೋನಾ ಸೋಂಕು  ಹಬ್ಬಿರುವುದು ಕಂಡು ಬಂದಿರುವುದರಿಂದ ಅಂತರ ಜಿಲ್ಲಾ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ  ನ್ಯೂಸ್ 18ಗೆ ತಿಳಿಸಿದರು.

ಚೆಕ್ ಪೋಸ್ಟ್ ಗಳಲ್ಲಿ ಹೊರ ಜಿಲ್ಲೆಗಳಿಂದ ಬರುವವರಿಗೆ ರ್ಯಾಂಡಮ್ ಟೆಸ್ಟ್ ಮಾಡಲಾಗುವುದು. ಸೋಂಕಿನ ಲಕ್ಷಣ ಕಂಡು ಬಂದರೆ ಚೆಕ್ ಪೋಸ್ಟ್ ಗಳಲ್ಲೇ RAT ಪರೀಕ್ಷೆ ನಡೆಸಲಾಗುವುದು. ಸೋಂಕಿತ ರನ್ನು ಚೆಕ್ ಪೋಸ್ಟ್ ನಿಂದ ವಾಪಸ್ ಕಳುಹಿಸಲಾಗುವುದು ಎಂದು ಅವರು ಹೇಳಿದರು.

  ಗಡಿ ಭಾಗದ ಗ್ರಾಮಗಳಲ್ಲಿ ಶೇಕಡಾ 60 ರಷ್ಟು ಜನರಿಗೆ ವ್ಯಾಕ್ಸಿನೇಷನ್‌

ಕೇರಳ ಹಾಗು ತಮಿಳುನಾಡಿಗೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿ  170 ಗ್ರಾಮಗಳಿದ್ದು 80 ಸಾವಿರ ಜನಸಂಖ್ಯೆ ಇದೆ.  ಈಗಾಗಲೇ ಶೇಕಡಾ 61 ರಷ್ಟು ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಗಡಿಭಾಗದ ಗ್ರಾಮಗಳಲ್ಲಿ ಈ ತಿಂಗಳ ಒಳಗಾಗಿ ಶೇಕಡಾ 70 ರಷ್ಟು ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಬೇಕೆಂಬ ಗುರಿ ಹೊಂದಲಾಗಿದೆ.

ಇದನ್ನೂ ಓದಿ:ಸಿದ್ಧರಾಮಯ್ಯನವರ ಕನಸು ಭಗ್ನವಾಗಲಿದೆ; ಮಡಿಕೇರಿಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯ

ಪ್ರತಿದಿನ 15 ಸಾವಿರ ಲಸಿಕೆ ಒದಗಿಸಿಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಲಸಿಕೆ ಲಭ್ಯತೆ ಆಧಾರದ ಮೇಲೆ ಆದಷ್ಟು  ಬೇಗ ಶೇಕಡಾ 100 ರಷ್ಟು ಗುರಿ ಸಾಧಿಸುಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ.
Published by:Latha CG
First published: