ನೋ ವ್ಯಾಕ್ಸಿನೇಷನ್ ನೋ ರೇಷನ್; ವಿವಾದ ಭುಗಿಲೆದ್ದ ಬಳಿಕ ಹೇಳಿಕೆ ಹಿಂಪಡೆದ ಚಾಮರಾಜನಗರ ಡಿಸಿ

No Vaccination No Ration- ಲಸಿಕೆ ಹಾಕಿಸಿಕೊಳ್ಳದಿದ್ದರೆ ರೇಷನ್, ಪೆನ್ಷನ್ ಕೊಡಲ್ಲ ಎಂದು ಜನರನ್ನ ಹೆದರಿಸುವ ಕೆಲಸ ಅಮಾನವೀಯ ಎಂದು ಕಾಂಗ್ರೆಸ್ಸಿಗರು ಅಕ್ಷೇಪಿಸಿದ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಧಿಕಾರಿ ಎಂಆರ್ ರವಿ ಸ್ಪಷ್ಟನೆ ನೀಡಿದ್ದಾರೆ.

ಚಾಮರಾಜನಗರ ಜಿಲ್ಲಾಡಳಿತ

ಚಾಮರಾಜನಗರ ಜಿಲ್ಲಾಡಳಿತ

  • Share this:
ಚಾಮರಾಜನಗರ (ಸೆ. 01): ನೋ ವ್ಯಾಕ್ಸಿನೇಷನ್‌ ನೋ ರೇಷನ್, ನೋ ಪೆನ್ಷನ್ ಎಂಬ ಚಾಮರಾಜನಗರ ಜಿಲ್ಲಾಧಿಕಾರಿ ಎಂ. ಆರ್. ರವಿ ಅವರ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಪಡಿತರದಾರರಿಗೆ ಪಿಂಚಣಿದಾರರಿಗೆ ಸೌಲಭ್ಯ ನಿರಾಕರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿ ಪ್ರಕಟಣೆ ಹೊರಡಿಸಿದ್ದಾರೆ. ವ್ಯಾಕ್ಸಿನೇಷನ್ ಪಡೆಯದಿದ್ದರೆ ಪಡಿತರ ಇಲ್ಲ ಪಿಂಚಣಿ ಇಲ್ಲ ಎಂಬ ಜಿಲ್ಲಾಧಿಕಾರಿ ಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೋವಿಡ್‌ ಲಸಿಕೆ ಪಡೆಯದಿದ್ರೆ ಪಡಿತರ, ಪಿಂಚಣಿ ಎರಡೂ ಇಲ್ಲ ಎಂದು ಚಾಮರಾಜನಗರ ದಲ್ಲಿ ಬಿಜೆಪಿ ಸರ್ಕಾರ ಹೇಳುತ್ತಿದೆ. ಆದರೆ ಮೂಲ ಸೌಕರ್ಯಗಳಾದ ಆಹಾರ ಮತ್ತು ಪಿಂಚಣಿ ನೋಡುವುದಿಲ್ಲ ಅಂತ ಹೆದರಿಸುವುದು ಅಕ್ರಮ, ಅನೈತಿಕ ಹಾಗೂ ಅಸಾಂವಿಧಾನಿಕ ಎಂದು ಅವರು ಚಾಮರಾಜನಗರ ಜಿಲ್ಲಾಡಳಿತದ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದರು.

ಲಸಿಕೆಗಳು ಜನಸಂಖ್ಯೆಗೆ ಸಾಕಾಗುವಷ್ಟು ಇವೆಯಾ? ಲಸಿಕೆ ಪಡೆಯುವಂತೆ ಜನರ ಮನವೊಲಿಸಿದ್ದಾರಾ? ಎಂದು ಪ್ರಶ್ನಿಸಿರುವ ಡಿ.ಕೆ.ಶಿವಕುಮಾರ್, ಆಕ್ಸಿಜನ್‌ ಪೂರೈಸಲು ಅಸಮರ್ಥರಾಗಿ 36 ಅಮಾಯಕರ ಜೀವ ತೆಗೆದಿರುವ ಬಿಜೆಪಿ ಸರ್ಕಾರ ಹಾಗೂ ಚಾಮರಾಜನಗರ ಜಿಲ್ಲಾಡಳಿತಕ್ಕೆ ನಾಚಿಕೆಯಾಗ್ಬೇಕು. ಲಸಿಕೆ ಪಡೆಯದವರಿಗೆ ಶಿಕ್ಷಿಸಲು ಮುಂದಾಗಿರುವವರು ಮೊದಲು ಆಕ್ಸಿಜನ್‌, ಲಸಿಕೆ, ಪರೀಕ್ಷೆ ಹಾಗೂ ಮೃತರಿಗೆ ಸೂಕ್ತ ಪರಿಹಾರ ನೀಡದಿದ್ದಕ್ಕೆ ಕ್ಷಮೆ ಕೇಳಲಿ ಆಗ್ರಹಿಸಿದ್ದರು.

ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಅವರು ಸಹ ಚಾಮರಾಜನಗರ ಜಿಲ್ಲಾಧಿಕಾರಿ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿಗಳ ಕ್ರಮ ಅವೈಜ್ಞಾನಿಕವಾಗಿದ್ದು, ಕಾನೂನಿಗೆ ವಿರುದ್ದವಾಗಿದೆ, ಕೂಡಲೇ ಹಿಂಪಡೆಯಬೇಕು  ಎಂದು ಅವರು  ಒತ್ತಾಯಿಸಿದ್ದರು.

ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ವಾಕ್ಸಿನೇಷನ್ ಕೊರತೆ ಇದ್ದು ಮೊದಲು ವ್ಯಾಕ್ಸಿನೇಷನ್‌ ಸೌಲಭ್ಯ ಹೆಚ್ಚಿಸಬೇಕು. ಬಡವರ ಹಸಿವನ್ನ ನೀಗಿಸುಲು ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ತಂದಿದೆ. ಬಡವರ ಹೊಟ್ಟೆ ಮೇಲೆ ಹೊಡೆಯಬೇಡಿ. ಕೂಡಲೇ ನಿಮ್ಮ ಅವೈಜ್ಞಾನಿಕ ಆದೇಶವನ್ನ ಹಿಂಪಡೆಯಿರಿ. ವ್ಯಾಕ್ಸಿನೇಷನ್‌ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಎಂದು ಆರ್.ಧ್ರುವನಾರಾಯಣ ಒತ್ತಾಯಿಸಿದ್ದರು.

ಇದನ್ನೂ ಓದಿ: Koramanagala Accident: ಏಳು ಮಂದಿ ಸಾವಿಗೆ ಕಾರಣವಾಯ್ತಾ ಒಂದು ನೀರಿನ ಬಾಟಲ್? ಕೋರಮಂಗಲ ಅಪಘಾತ ಪ್ರಕರಣದಲ್ಲೊಂದು ಅನುಮಾನ

ಕೇರಳ ಹಾಗು ತಮಿಳುನಾಡು ಗಡಿಗೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲೆಯಲ್ಲಿ ಆಗಸ್ಟ್ 27 ರಿಂದ ಒಂದು ವಾರ ಕಾಲ ಕೋವಿಡ್ ಲಸಿಕಾ ಮಹಾ ಮೇಳ ಆಯೋಜಿಸಲಾಗಿದ್ದು, ಪ್ರತಿ ದಿನ  18 ವರ್ಷ ಮೇಲ್ಪಟ್ಟ 25 ಸಾವಿರ ಮಂದಿಗೆ ಲಸಿಕೆ ಹಾಕುವ ಯೋಜನೆ ಹಮ್ಮಿಕೊಳ್ಳಲಾಗಿದೆ, ಆದರೆ ಇನ್ನೂ ಕೆಲವು ಜನರು ಲಸಿಕೆ ಹಾಕಿಸಿಕೊಳ್ಳಲು ಉದಾಸೀನತೆ ತೋರುತ್ತಿದ್ದು  ಜನರ ಆರೋಗ್ಯದ ಹಿತದೃಷ್ಟಿಯಿಂದ ಸೆಪ್ಟೆಂಬರ್ 1 ರಿಂದ   "ನೋ ವ್ಯಾಕ್ಸಿನೇಷನ್‌ ನೋ ರೇಷನ್", "ನೋ ವ್ಯಾಕ್ಸಿನೇಷನ್‌ ನೋ ಪೆನ್ಷನ್" ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿ ಹೇಳಿಕೆ ನೀಡಿದ್ದರು.

ಜಿಲ್ಲೆಯಲ್ಲಿ 2 ಲಕ್ಷ 90 ಸಾವಿರ ಬಿಪಿಎಲ್ ಹಾಗು ಅಂತ್ಯೋದಯ ಪಡಿತರದಾರರು ಇದ್ದಾರೆ. ಇವರು ಪಡಿತರ ಪಡೆಯ ಬೇಕಾದರೆ ಲಸಿಕೆ ಹಾಕಿಸಿಕೊಂಡಿರಬೇಕು. ಇದೇ ರೀತಿ ಜಿಲ್ಲೆಯಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ 2 ಲಕ್ಷ 20 ಸಾವಿರ ಮಂದಿ ಪಿಂಚಣಿದಾರರಿದ್ದಾರೆ  ವ್ಯಾಕ್ಸಿನೇಷನ್‌ ಪ್ರಮಾಣಪತ್ರ ಇದ್ದರೆ ಮಾತ್ರ ಇವರಿಗೆ ಮಾಸಾಶನ ಪಾವತಿಸುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದರು.

ಲಸಿಕೆ ಹಾಕಿಸಿಕೊಳ್ಳಲು ಕೆಲವು ಜನರಲ್ಲಿ ಉದಾಸೀನ ಪ್ರವೃತ್ತಿ ಕಂಡು ಬರುತ್ತಿದೆ. ಹಾಗಾಗಿ ಕೊರೋನಾ ಸೋಂಕಿನ ಬಗ್ಗೆ ಗಂಭೀರತೆ ಮೂಡಿಸಲು ಹಾಗು ಜನರ ಆರೋಗ್ಯ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಈ ಕ್ರಮ ವಿವಾದಕ್ಕೆ ಗುರಿಯಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅವರು ಅಂಥ ಯಾವುದೇ ಕ್ರಮ ಅಧಿಕೃತವಾಗಿ ಘೋಷಣೆ ಆಗಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ವರದಿ: ಎಸ್.ಎಂ.ನಂದೀಶ್
Published by:Vijayasarthy SN
First published: