ದಲಿತರ ಬೀದಿಗೂ ದೇವರ ಉತ್ಸವ ಬರಲಿ ಎಂದಿದ್ದಕ್ಕೆ 50 ಸಾವಿರ ರೂ ದಂಡ

ಚಾಮರಾಜನಗರದ ಹೊನ್ನೂರು ಗ್ರಾಮ

ಚಾಮರಾಜನಗರದ ಹೊನ್ನೂರು ಗ್ರಾಮ

ಚಾಮರಾಜನಗರದ ಯಲಂದೂರಿನ ಹೊನ್ನೂರು ಗ್ರಾಮದಲ್ಲಿ ದಲಿತರ ಕೇರಿಗೂ ದೇವರ ಮೆರವಣಿಗೆ ಬರಲಿ ಎಂದು ಕೇಳಿದ್ದಕ್ಕೆ ದಲಿತ ವ್ಯಕ್ತಿಗೆ ಗ್ರಾಮಸ್ಥರು 50,101 ರೂ ದಂಡ ವಿಧಿಸಿದ್ದಾರೆ. ತಹಶೀಲ್ದಾರ್ ಈ ಪ್ರಕರಣದ ವಿಚಾರಣೆ ಮಾಡುವುದಾಗಿ ಹೇಳಿದ್ದಾರೆ.

  • Share this:

ಚಾಮರಾಜನಗರ (ಅಕ್ಟೋಬರ್ 18): ದೇಶಕ್ಕೆ ಸ್ವಾತಂತ್ರ್ಯ ಬಂದು  ಏಳು ದಶಕಗಳೇ ಕಳೆದರೂ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಆಚರಣೆ, ಪಾಳೇಗಾರಿಕೆ ಸಂಸ್ಕೃತಿ ಇನ್ನೂ ನಿಂತಿಲ್ಲ. ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ.  ಚಾಮರಾಜನಗರ ಜಿಲ್ಲೆಯ ಗ್ರಾಮವೊಂದರಲ್ಲಿ ದಲಿತರ ಕೇರಿಗೂ ದೇವರ ಉತ್ಸವ ಬರಲಿ ಎಂದು ಮನವಿ ಸಲ್ಲಿಸಿದ್ದೇ ತಡ ಗ್ರಾಮದ ಮುಖಂಡರೆಲ್ಲಾ ಸೇರಿಕೊಂಡು ಬಡ ಕಾರ್ಮಿಕನೊಬ್ಬನಿಗೆ ಐವತ್ತು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ಹಣವಿಲ್ಲದೆ ಆತ ಮಡದಿಯ ಒಡವೆಗಳನ್ನು ಒತ್ತೆ ಇಟ್ಟು ಹಣ ತೆರಬೇಕಾಯಿತು.


ಘಟನೆಯ ವಿವರ: ಚಾಮರಾಜನಗರ ಜಿಲ್ಲೆ ಯಳಂದೂರು ತಾಲೋಕಿನ ಹೊನ್ನೂರು ಗ್ರಾಮದಲ್ಲಿ ದಲಿತರು ಸೇರಿದಂತೆ ಮೂರು ಸಾವಿರಕ್ಕು ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಚಾಮುಂಡೇಶ್ವರಿ ದೇವಸ್ಥಾನವಿದ್ದು ನವರಾತ್ರಿ ಸಂದರ್ಭದಲ್ಲಿ ಚಾಮುಂಡೇಶ್ವರಿ ಉತ್ಸವ ನಡಯುತ್ತದೆಮ ಇದಕ್ಕು ಮೊದಲು ತಹಸೀಲ್ದಾರ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತದೆ.


ಇದನ್ನೂ ಓದಿ: ಕನಕಪುರ ಬಂಡೆ ಪುಡಿಮಾಡುವ ಡೈನಮೈಟ್ ಗಳು ಬಿಜೆಪಿ ಬಳಿ ಇವೆ ; ನಳಿನ್ ಕುಮಾರ್ ಕಟೀಲ್


ಈ ಬಾರಿಯೂ ಯಥಾಪ್ರಕಾರ ಯಳಂದೂರಿನಲ್ಲಿನ ತಹಸೀಲ್ದಾರ್ ಸುದರ್ಶನ್ ಅವರ ನೇತೃತ್ವದಲ್ಲಿ ಗ್ರಾಮಸ್ಥರ ಪೂರ್ವ ಭಾವಿ ಸಭೆ ಕರೆಯಲಾಗಿತ್ತು. ಸಭೆಗೂ ಮುನ್ನ ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ ದಲಿತ ಸಮುದಾಯದ ಹಲವು ಯುವಕರು, ಚಾಮುಂಡೇಶ್ವರಿ ದೇಗುಲ ಮುಜರಾಯಿ ಇಲಾಖೆಗೆ ಸೇರಿದೆ. ಆದರೆ ದೇವರ ಉತ್ಸವ ಕೇವಲ ಸವರ್ಣೀಯರ ಬೀದಿಗಳಲ್ಲಿ ನಡೆಯುತ್ತದೆ. ಈ ಬಾರಿ ದಲಿತರ ಬೀದಿಗು ಉತ್ಸವ ಬರಬೇಕು ಎಂದು ಮನವಿ ಮಾಡಿದ್ದರು.


Ningaraju and his wife
ಹೊನ್ನೂರು ಗ್ರಾಮದ ದಲಿತ ವ್ಯಕ್ತಿ ನಿಂಗರಾಜು ಮತ್ತವರ ಪತ್ನಿ


ಸಭೆ ಆರಂಭವಾದಾಗ ದಲಿತರ ಬೀದಿಯ ನಿಂಗರಾಜು ಎಂಬಾತ ತಾವು ನೀಡಿರುವ ಮನವಿಯ ವಿಷಯ ಪ್ರಸ್ತಾಪಿಸಿ ದಲಿತರ ಬೀದಿಗೂ ದೇವರ ಉತ್ಸವ ಬರಬೇಕು ಎಂದು ನೇರವಾಗಿ ಒತ್ತಾಯಿಸಿದ್ದರು. ಸಭೆ ಮುಗಿಸಿ ಯಳಂದೂರಿನಿಂದ ವಾಪಸ್ ಬಂದು ದಲಿತರು ಸೇರಿದಂತೆ ಎಲ್ಲಾ ಕೋಮಿನ ಮುಖಂಡರು ಮಾರನೇ ದಿನವೇ ಸೇರಿ ನ್ಯಾಯಪಂಚಾಯ್ತಿ ನಡೆಸಿದ್ದಾರೆ. ನಿಂಗರಾಜುವನ್ನು ತರಾಟೆಗೆ ತೆಗೆದುಕೊಂಡು ಐವತ್ತು ಸಾವಿರದ ನೂರ ಒಂದು (50,101) ರೂಪಾಯಿ ದಂಡ ವಿಧಿಸಿದ್ದಾರೆ. ಇಷ್ಟೇ ಅಲ್ಲದೆ ತಹಸೀಲ್ದಾರ್​ರಿಗೆ ಅರ್ಜಿ ನೀಡಲು ಹೋಗಿದ್ದ ನಿಂಗರಾಜುವಿನ ಸ್ನೇಹಿತ ಶಂಕರಮೂರ್ತಿಗೂ ಹತ್ತು ಸಾವಿರದ ನೂರ ಒಂದು(10,101) ರೂಪಾಯಿ ದಂಡ ವಿಧಿಸಿದ್ದಾರೆ.


ಇದನ್ನೂ ಓದಿ: ಜಾತಿ ಜನಗಣತಿ ಪ್ರಕಟಿಸುತ್ತೇವೆ ಎಂದ ಈಶ್ವರಪ್ಪ; ನಮೋ ನಮೋ ಎಂದ ಸಿದ್ದರಾಮಯ್ಯ


ಬಡ ಕೂಲಿ ಕಾರ್ಮಿಕನಾದ ನಿಂಗರಾಜುಗೆ 50 ಸಾವಿರ ರೂಪಾಯಿಯಷ್ಟು ದೊಡ್ಡ ಮೊತ್ತ ಹೊಂದಿಸುವುದು ಕಷ್ಟವಾಗಿದೆ. ಕೊನೆಗೆ ಪತಿಯ ಕಷ್ಟ ನೋಡಲಾಗದೆ ಪತ್ನಿ ತನ್ನ ಕಿವಿಯೋಲೆ ಹಾಗು ಇತರೆ ಒಡವೆಗಳನ್ನು ಬಿಚ್ಚಿ ಗಿರವಿ ಇಟ್ಟು ದಂಡದ ಹಣ ಕಟ್ಟಿದ್ದಾರೆ.


ಹೊಲಗೇರಿಗೆ ದೇವರ ಉತ್ಸವ ಎಂದಾದರು ಬಂದಿತ್ತಾ? ನೀನೇಕೆ ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದೆ ಎಂದು ನಮ್ಮವರೇ ನನ್ನನ್ನೇ ಪ್ರಶ್ನಿಸುತ್ತಾರೆ. ಹಾಗಾದರೆ ದಲಿತರ ಬೀದಿಗೆ ದೇವರು ಬರಬೇಕು ಎಂದು ಹೇಳುವುದೇ ತಪ್ಪೇ? ನಾವೂ ಪೂಜೆ ಸಲ್ಲಿಸಬಾರದೆ?  ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ನಿಂಗರಾಜು.


ತನಗಾದ ಅನ್ಯಾಯದ ಬಗ್ಗೆ ನಿಂಗರಾಜು ಯಳಂದೂರು ತಹಸೀಲ್ದಾರ್​ಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯೂಸ್ 18 ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಸುದರ್ಶನ್ ಅವರು, ನಿಂಗರಾಜು ನಿನ್ನೆ ಸಂಜೆ ದೂರು ನೀಡಿದ್ದಾರೆ. ನಿಂಗರಾಜು ಹಾಗು ದೂರಿನಲ್ಲಿ ಹೆಸರಿಸಿರುವ ಮುಖಂಡರನ್ನು ನಾಳೆ ಯಳಂದೂರಿಗೆ ಕರೆಸಿ ಸಭೆ ನಡೆಸಿ ಕೂಲಂಕುಶವಾಗಿ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.


ವರದಿ: ಎಸ್.ಎಂ.ನಂದೀಶ್

Published by:Vijayasarthy SN
First published: