ಗ್ರಾಮ ಪಂಚಾಯತಿ ಅಖಾಡಕ್ಕೆ ದಂಪತಿ; ಗಂಡನ ಆಶಯದಂತೆ ಸ್ಪರ್ಧೆಗಿಳಿದ ಹೆಂಡತಿ

ಸಂಪತ್ತು ಅವರ ಪತ್ನಿ ಮಂಗಳಗೌರಿ

ಸಂಪತ್ತು ಅವರ ಪತ್ನಿ ಮಂಗಳಗೌರಿ

ಸೋಲಾಗಲಿ, ಗೆಲುವಾಗಲಿ ಸದಾ ಪತಿಯ ಆಶಯಗಳ ಪರವಾಗಿರಬೇಕು ಎಂಬ  ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ

  • Share this:

ಚಾಮರಾಜನಗರ: ಸಂಸಾರದ ರಥವನ್ನು ಜೊತೆಯಾಗಿ ಎಳೆಯುತ್ತಿರುವ ಜೋಡಿಯೊಂದು ಈಗ ಪಂಚಾಯತ್​ ಚುನಾವಣೆಗೆ ಸ್ಪರ್ಧಿಸುವ ಮೂಲಕ ಆಡಳಿತದ ನೊಗ ಹೊರಲು ಸಿದ್ಧತೆ ನಡೆಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ  ಗ್ರಾಮಪಂಚಾಯತಿಯ ವ್ಯಾಪ್ತಿಯ ಕುಂದಕೆರೆ ಗ್ರಾಮದಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಎಂ.ಸಂಪತ್ತು ಹಾಗೂ ಅವರ ಹೆಂಡತಿ ಮಂಗಳಗೌರಿ ತಮ್ಮೂರಿನ ಬೇರೆ ಬೇರೆ ವಾರ್ಡ್ ಗಳಲ್ಲಿ ಚುನಾವಣೆಗೆ ಸ್ಪರ್ಧಿಸಿ ಎಲ್ಲರ ಗಮನಸೆಳೆದಿದ್ದಾರೆ.  ಬೊಮ್ಮನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಚಿರಕನಹಳ್ಳಿ, ಉಪಕಾರ ಕಾಲೋನಿ, ರಾಮಯ್ಯನಪುರ, ಕಡಬೂರು, ಕುಂದಕೆರೆ, ಹೆಗ್ಗವಾಡಿ, ಕುರುಬರಹುಂಡಿ ಗ್ರಾಮಗಳಿವೆ. ಈ ಪೈಕಿ ಕುಂದಕೆರೆ ಗ್ರಾಮದಲ್ಲಿ ಎರಡು ಬ್ಲಾಕ್ ಗಳಿವೆ. ಒಂದನೇ ಬ್ಲಾಕ್  ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದು, ಈ ಬ್ಲಾಕ್ ನಲ್ಲಿ ಸಂಪತ್ತು ಅವರ ಪತ್ನಿ ಮಂಗಳಗೌರಿ ಸ್ಪರ್ಧಿಸಿದ್ದಾರೆ ಹಾಗೂ ಎರಡನೇ ಬ್ಲಾಕ್  ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಈ ವಾರ್ಡ್ ನಲ್ಲಿ ಸಂಪತ್ತು ಕಣಕ್ಕಿಳಿದಿದ್ದಾರೆ.


ಕಳೆದ ಹತ್ತು ವರ್ಷಗಳಿಂದ ಗುಂಡ್ಲುಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಜಿಲ್ಲಾ ಉಪಾಧ್ಯಕ್ಷರಾಗಿರುವ ಸಂಪತ್ತು   ರೈತರ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ  ಹೋರಾಟ  ನಡೆಸುತ್ತಿದ್ದಾರೆ. ಇದೀಗ ನಮ್ಮೂರಿನ ಸಮಸ್ಯೆಗಳಿಗೆ ದನಿಯಾಗಲು ಈ ಚುನಾವಣೆಯಲ್ಲಿ ನಾನು ಹಾಗೂ ನನ್ನ ಪತ್ನಿ ಇಬ್ಬರೂ ಸ್ಪರ್ಧಿಸಿದ್ದೇವೆ.  ಗ್ರಾಮಪಂಚಾಯತಿ ಮಟ್ಟದಲ್ಲಿ ಅನೇಕ ಅಕ್ರಮಗಳು ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಆ ಮೂಲಕ ಗ್ರಾಮವನ್ನು ಅಭಿವೃದ್ಧಿಪಡಿಸಬೇಕು ಎಂಬುದು ನನ್ನ ಸ್ಪರ್ಧೆಯ ಪ್ರಮುಖ ಉದ್ದೇಶ ಎನ್ನುತ್ತಾರೆ ಸಂಪತ್ತು. ಸೋಲಾಗಲಿ, ಗೆಲುವಾಗಲಿ ಸದಾ ಪತಿಯ ಆಶಯಗಳ ಪರವಾಗಿರಬೇಕು ಎಂಬ  ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎನ್ನುತ್ತಾರೆ ಮಂಗಳಗೌರಿ.


ಎದುರಾಳಿ ಮಣಿಸಲು ಕಾರ್ಯತಂತ್ರ


ಇನ್ನೊಂದೆಡೆ ತಾಲೂಕಿನ ಮೇಗಲಹುಂಡಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಎರಡು ಸಮುದಾಯಗಳ ನಡುವೆ ಮನಸ್ತಾಪ ಉಂಟಾಗಿತ್ತು. ಇದೀಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲು ಈ ಮನಸ್ತಾಪದ ಕರಿನೆರಳು ಬಿದ್ದಿದೆ.  ಒಂದು ಸಮುದಾಯದವರು ಎದುರಾಳಿ ಸಮುದಾಯಕ್ಕೆ ಟಕ್ಕರ್ ಕೊಡಲು ಪಕ್ಕದ ಗ್ರಾಮದ ವ್ಯಕ್ತಿಯನ್ನು ಕರೆತಂದು ತಮ್ಮ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ರಣತಂತ್ರ ರೂಪಿಸಿದ್ದಾರೆ.


ಇದನ್ನು ಓದಿ: ನಾಳೆಯೂ ಮುಂದುವರೆಯಲಿದೆ ಸಾರಿಗೆ ನೌಕರರ ಮುಷ್ಕರ; ಮಾತುಕತೆಗೆ ಬಾರದೇ ಇದ್ದರೆ ಎಸ್ಮಾ ಜಾರಿ ಸುಳಿವು ನೀಡಿದ ಸಚಿವರು


ಹೆಗ್ಗೋಠಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೇಗಲಹುಂಡಿ ಗ್ರಾಮದಲ್ಲಿ ಉಪ್ಪಾರ ಹಾಗು ಕೊರಮ ಸಮುದಾಯಗಳಿವೆ. ಉಪ್ಪಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ  ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಕೊರಮ ಸಮುದಾಯವರು ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಅರ್ಹರಾಗಿದ್ದರೂ ಸಹ  ಇವರ ಎದುರಾಳಿ ಸಮುದಾಯದವರು ಇವರಿಗೆ ಟಕ್ಕರ್ ಕೊಡಲು ಪಕ್ಕದ ಬೆಂಡರವಾಡಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯನ್ನು ಕರೆತಂದು ಕಣಕ್ಕಿಳಿಸಿದ್ದಾರೆ.. ಇದರಿಂದ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲುವ ಕನಸು ಕಂಡಿದ್ದ ಕೊರಮ ಜನಾಂಗದವರಿಗೆ ಶಾಕ್ ಎದುರಾಗಿದೆ.


ನಮಗೆ ಮೋಸವಾಗಿದೆ ಹೊರಗಡೆಯಿಂದ ಅಭ್ಯರ್ಥಿಯನ್ನ ಕರೆತಂದು  ಕಣಕ್ಕಿಳಿಸಿದ್ದಾರೆ. ಅವರ ಬಳಿ ಒಂದು ಸಾವಿರ ಮತಗಳಿದ್ದು ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲುತ್ತಾರೆ, ನೈತಿಕವಾಗಿ ನಮಗೆ ಅನ್ಯಾಯವಾಗುತ್ತಿದೆ ಎಂದು ಕೊರಮ ಸಮುದಾಯದವರು ತಮ್ಮ ಅಳಲು ತೋಡಿಕೊಂಡಿದ್ದಾರೆ


 
(ವರದಿ: ಎಸ್.ಎಂ.ನಂದೀಶ್ )

Published by:Seema R
First published: