Chamarajanagar: ಕೊರೋನಾದಿಂದ ದುಡಿಯುವ ವ್ಯಕ್ತಿ ಕಳೆದುಕೊಂಡು ಬೀದಿಪಾಲಾಗಿವೆ 236 ಕುಟುಂಬಗಳು

ಮನೆಯಲ್ಲಿ ದುಡಿಯುವ ವ್ಯಕ್ತಿ ಕೊರೋನಾದಿಂದ ಸಾವನ್ನಪ್ಪಿದ್ದರೆ ಅಂತಹ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಘೋಷಣೆ  ಮಾಡಿದ್ದರು.

ಮನೆಯ ಯಜಮಾನನನ್ನು ಕಳೆದುಕೊಂಡಿರುವ ಕುಟುಂಬ

ಮನೆಯ ಯಜಮಾನನನ್ನು ಕಳೆದುಕೊಂಡಿರುವ ಕುಟುಂಬ

  • Share this:
ಚಾಮರಾಜನಗರ (ಸೆ.19) ಕೊರೋನಾ ಸೋಂಕು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಮೇಲೆ ದುಷ್ಪರಿಣಾಮ ಬೀರಿದ್ದು, ಅನೇಕ ಜನರ ಬದುಕನ್ನೇ ನಾಶ ಮಾಡಿದೆ. ನೂರಾರು ಕುಟುಂಬಗಳು ಮನೆಗೆ ದುಡಿಯುವ ವ್ಯಕ್ತಿಗಳನ್ನು  ಕಳೆದುಕೊಂಡು ಜೀವನೋಪಾಯಕ್ಕೆ ದಿಕ್ಕು ತೋಚದಂತಾಗಿವೆ. ಚಾಮರಾಜನಗರ ಜಿಲ್ಲೆಯೊಂದರಲ್ಲೆ 236 ಕುಟುಂಬಗಳು ಮನೆಗೆ  ಆಧಾರ ಸ್ಥಂಭವಾಗಿದ್ದವರನ್ನು ಕಳೆದುಕೊಂಡು ಸರ್ಕಾರ ಘೋಷಿಸಿದ್ದ ಪರಿಹಾರಕ್ಕಾಗಿ ಜಾತಕಪಕ್ಷಿಗಳಂತೆ ಕಾಯುತ್ತಿವೆ.

ಚಾಮರಾಜನಗರ ತಾಲೂಕು ಬಿಸಿಲವಾಡಿ ಗ್ರಾಮದ ಸಿದ್ದನಾಯಕ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿ. ಪತ್ನಿ, ಇಬ್ಬರು ಪುಟ್ಟಮಕ್ಕಳು, ವಯಸ್ಸಾದ ತಂದೆ ತಾಯಿ ಹೀಗೆ ಎಲ್ಲರ ಜವಬ್ದಾರಿ ಇವರ ಮೇಲಿತ್ತು.  ಇಡೀ ಕುಟುಂಬ ಸಿದ್ದನಾಯಕರ ದುಡಿಮೆಯನ್ನೇ ಅವಲಂಬಿಸಿತ್ತು, ಆದರೆ ಕಳೆದ ನಾಲ್ಕು ತಿಂಗಳ ಹಿಂದೆ ಸಿದ್ದನಾಯಕ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಅವರ ದುಡಿಮೆಯನ್ನೇ ನೆಚ್ಚಿಕೊಂಡಿದ್ದ ಅವರ ಕುಟುಂಬಕ್ಕೀಗ ದಿಕ್ಕುತೋಚದಂತಾಗಿದೆ. ಒಂದೊಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ಹಾಗೆಯೆ ಚಾಮರಾಜನಗರದ ಅಂಬೇಡ್ಕರ್ ಬಡಾವಣೆಯ  ಅಭಿಲಾಷ್  ಕಳೆದ ಮೂರು ತಿಂಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು.  ಸಣ್ಣಪುಟ್ಟ ಬಿಸಿನೆಸ್ ಮಾಡಿಕೊಂಡಿದ್ದ ಅಭಿಲಾಷ್  ವಯಸ್ಸಾದ ತಂದೆ ತಾಯಿಯನ್ನು ಅಗಲಿದ್ದಾರೆ.  ಈ ಕುಟುಂಬ ಜೀವನೋಪಾಯಕ್ಕಾಗಿ ಅಭಿಲಾಷ್ ಅವರನ್ನೇ ನೆಚ್ಚಿಕೊಂಡಿತ್ತು. ಆದರೆ ಕಳೆದ ಮೂರು ತಿಂಗಳ  ಹಿಂದೆ ಅಭಿಲಾಷ್  ಕೊರೋನಾ ಸೋಂಕಿಗೆ ತುತ್ತಾಗಿ ಅವರ ವಯಸ್ಸಾದ ತಂದೆ ತಾಯಿ ಈಗ ದಿಕ್ಕೇ ತೋಚದೆ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಇದನ್ನೂ ಓದಿ:Bengaluru Crime: ಮಹಜರು ವೇಳೆ ಮನೆಯಲ್ಲಿ ಡೆತ್​ ನೋಟ್ ಪತ್ತೆ, ಪರೋಕ್ಷವಾಗಿ ತಂದೆಯೇ ಸಾವಿಗೆ ಕಾರಣ ಎಂದು ಉಲ್ಲೇಖ

ಇದು ಕೇವಲ ಈ ಎರಡು ಕುಟುಂಬಗಳ ಕಥೆಯಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ 236 ಕುಟುಂಬಗಳು ಮನೆಗೆ ಆಧಾರ ಸ್ಥಂಭವಾಗಿದ್ದವರನ್ನು  ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.  ಜೀವನೋಪಾಯಕ್ಕೆ ಅನ್ಯದಾರಿ ಕಾಣದೆ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಮೊದಲನೇ ಅಲೆಯಲ್ಲಿ  132 ಜನ ಹಾಗು ಎರಡನೇ ಅಲೆಯಲ್ಲಿ 406 ಸೇರಿದಂತೆ ಈವರಗೆ ಒಟ್ಟು 538 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ನಾವು ಕೊರೋನಾದಿಂದ ಮೃತಪಟ್ಟವರ ಪಟ್ಟಿಯನ್ನು ಜಿಲ್ಲಾಧಿಕಾರಿ ಗಳಿಗೆ ಕಳುಹಿಸುತ್ತೇವೆ. ಪರಿಹಾರಕ್ಕಾಗಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಪರಿಹಾರ ಬಿಡುಗಡೆಗೆ ಕ್ರಮವಹಿಸುತ್ತಾರೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.

ಕೊರೋನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ  ಘೋಷಣೆ  ಮಾಡಿದ್ದ ಹಿನ್ನಲೆಯಲ್ಲಿ ಈ 538 ಕುಟುಂಬಗಳ ಪೈಕಿ 236 ಕುಟುಂಬಗಳಿಂದ ಈ ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆಯಾಗಿದೆ. ಆದರೆ ಇದುವರೆಗೂ ಪರಿಹಾರ ಮಾತ್ರ ಬಿಡುಗಡೆಯಾಗಿಲ್ಲ. ಮನೆಯಲ್ಲಿ ದುಡಿಯುವ ವ್ಯಕ್ತಿ ಕೊರೋನಾದಿಂದ ಸಾವನ್ನಪ್ಪಿದ್ದರೆ ಅಂತಹ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಘೋಷಣೆ  ಮಾಡಿದ್ದರು. ಇದು ಇಡೀ ದೇಶದ ಗಮನ ಸೆಳೆದಿತ್ತು.  ಈ ಹಣದಿಂದಾದರು ಹೇಗೋ ಬದುಕು ಕಟ್ಟಿಕೊಳ್ಳಬಹುದು ಎಂಬುದು ಕೊರೋನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳು ಕನಸು ಕಾಣುತ್ತಿವೆ.  ಆದರೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿ  ನಾಲ್ಕು ತಿಂಗಳಾದರೂ  ಇನ್ನೂ ಪರಿಹಾರ ಬಿಡುಗಡೆಯಾಗದೆ 236  ಕುಟುಂಬಗಳು ತೀರಾ ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ.

ಇದನ್ನೂ ಓದಿ:RRC Recruitment 2021: ಐಟಿಐ, 10th ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ..!

ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Latha CG
First published: