ಚಡಚಣ ಸಹೋದರರ ಸಾವು ಪ್ರಕರಣ ; ಸಿಬಿಐಗೆ ತನಿಖೆ ವಹಿಸುವಂತೆ ವಿಮಲಾಬಾಯಿ ಒತ್ತಾಯ

ಈ ಪ್ರಕರಣ ಈಗ ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಆಗ್ರಹಿಸಿದ್ದಾರೆ

ಚಡಚಣ ಸಹೋದರರ ತಾಯಿ ವಿಮಲಾಬಾಯಿ

ಚಡಚಣ ಸಹೋದರರ ತಾಯಿ ವಿಮಲಾಬಾಯಿ

 • Share this:
  ವಿಜಯಪುರ(ಅಕ್ಟೋಬರ್​. 02): ಭೀಮಾ ತೀರದ ಚಡಚಣ ಸಹೋದರರ ಕೊಲೆ ಆರೋಪ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಚಡಚಣ ಸಹೋದರರ ತಾಯಿ ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಮತ್ತೊಮ್ಮೆ ಒತ್ತಾಯಿಸಿದ್ದಾರೆ. ವಿಜಯಪುರದಲ್ಲಿ ಅಪರ ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಮ್ಮ ಮಕ್ಕಳಾದ ಧರ್ಮರಾಜ ಚಡಚಣ ಮತ್ತು ಗಂಗಾಧರ ಚಡಚಣ ಕೊಲೆ ಆರೋಪ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಈಗಾಗಲೇ ಈ ನಿಟ್ಟಿನಲ್ಲಿ ತಾವು ಸಿಎಂ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ನಾಯಕರನ್ನು ಭೇಟಿ ಮಾಡಿ ಆಗ್ರಹಿಸಿದ್ದಾಗಿ ತಿಳಿಸಿದರು. 2017ರ ಅಕ್ಟೋಬರ್​ 30 ರಂದು ತಮ್ಮ ಮಗ ಧರ್ಮರಾಜ ಚಡಚಣನನ್ನು ನಕಲಿ ಎನ್​​​ಕೌಂಟರ್ ನಲ್ಲಿ ಪೊಲೀಸರು ಸಾಯಿಸಿದ್ದಾರೆ. ಅಲ್ಲದೇ, ಮತ್ತೊಬ್ಬ ಮಗ ಗಂಗಾಧರ ಚಡಚಣನನ್ನು ನಿಗೂಢವಾಗಿ ಕೊಲೆ ಮಾಡಿ ಶವ ಸಿಗದಂತೆ ಮಾಡಿದ್ದಾರೆ. ಈ ಕುರಿತು ಈಗಾಗಲೇ ಸಿಒಡಿ ತನಿಖೆ ಕೈಗೊಂಡಿದೆ.

  ಈ ಪ್ರಕರಣದಲ್ಲಿ ಮತ್ತಷ್ಟು ಜನ ಶಾಮೀಲಾಗಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

  2017 ರ ಅಕ್ಟೋಬರ್​ 30ರಂದು ನಡೆದ ಈ ಪ್ರಕರಣದ ತನಿಖೆಯನ್ನು ಅಂದು ಸಿಒಡಿಗೆ ವಹಿಸಿತ್ತು. ಈ ಪ್ರಕರಣ ದಾಖಲಾದ ನಂತರ 15 ಜನ ಆರೋಪಿತರನ್ನು ಬಂಧಿಸಿದ ಸಿಒಡಿ ವಿಚಾರಣೆ ನಡೆಸಿತ್ತು. ಅಲ್ಲದೇ, ಈ ಕುರಿತು ತನಿಖೆಯನ್ನು ಕೈಗೊಂಡಿದ್ದ ಸಿಒಡಿ ಅಧಿಕಾರಿಗಳ ತಂಡ ತನಿಖಾ ವರದಿಯನ್ನು ಮತ್ತು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಭೀಮಾ ತೀರದ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ, ಅಂದಿನ ಚಡಚಣ ಠಾಣೆಯ ಸಿಪಿಐ ಎಂ. ಬಿ. ಅಸೋಡೆ, ಪಿ ಎಸ್ ಐ ಗೋಪಾಲ ಹಳ್ಳೂರ, ಮೂವರು ಪೊಲೀಸ್ ಕಾನ್ಸ್​ಟೇಬಲ್​​​ಗಳು ಸೇರಿ ಒಟ್ಟು 15 ಜನರ ವಿರುದ್ಧ ಆರೋಪ ಹೊರಿಸಲಾಗಿದ್ದು, ಈ ಕುರಿತು ಪ್ರಕರಣ ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

  ಈ ಮಧ್ಯೆ, ಈ ಪ್ರಕರಣದ ಎಲ್ಲ 15 ಆರೋಪಿಗಳು ಈಗಾಗಲೇ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಈ ಪ್ರಕರಣ ಈಗ ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಆಗ್ರಹಿಸಿದ್ದಾರೆ.

  ಇದನ್ನೂ ಓದಿ : ಯಮಲೋಕದಿಂದ ವಾಪಸ್​ ಬಂದ ಅನುಭವ; ಕೊರೋನಾ ಚೇತರಿಕೆ ಬಳಿಕ ಮಾಲೀಕಯ್ಯ ಗುತ್ತೇದಾರ್​ ಮಾತು

  ಸಿಒಡಿ ತನಿಖೆ ಸರಿಯಾಗಿ ನಡೆದಿಲ್ಲ ಎಂದು ಅಸಮಾಧಾನ ಹೊರ ಹಾಕಿರುವ ಅವರು, ಪ್ರಕರಣದ ಸಾಕ್ಷಿಗಳಿಗೆ ಪ್ರಮುಖ ಆರೋಪಿಗಳು ಸಾಕ್ಷಿ ಹೇಳದಂತೆ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಜೀವಕ್ಕೆ ಅಪಾಯವಾದರೆ ಆರೋಪಿಗಳೇ ಕಾರಣವೆಂದು ಎಂದು ಎಚ್ಚರಿಕೆ ನೀಡಿದ್ದಾರೆ.

  ಅಂದು ನಡೆದ ಘಟನೆಯ ಬಗ್ಗೆ ಅಂದಿನ ಧರ್ಮರಾಜ ಚಡಚಣನ ಕಾರು ಚಾಲಕ ಸಚಿನ್ ಚವ್ಹಾಣ ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ. ಆತನೂ ಕೂಡ ಚಡಚಣ ಸಹೋದರರ ತಾಯಿ ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಅವರ ಹೇಳಿಕೆಯನ್ನು ಸಮರ್ಥಿಸಿದ್ದಾರೆ.  ಅಲ್ಲದೇ, ಚಡಚಣ ಸಹೋದರರ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
  Published by:G Hareeshkumar
  First published: