ಶಿವಮೊಗ್ಗ (ಜನವರಿ 13); ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 16 ರಂದು ಭದ್ರಾವತಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ. ಭದ್ರಾವತಿ ನಗರದ ಬುಳ್ಳಾಪುರದಲ್ಲಿ ಸಿಆರ್ಪಿಎಫ್ ಅಡಿ ಬರುವ ರಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ಬೆಟಾಲಿಯನ್ ಭದ್ರಾವತಿಯಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಅದರ ಗುದ್ದಲಿ ಪೂಜೆ ಕಾರ್ಯವನ್ನು ಜನವರಿ 16 ರಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ನೆರವೇರಿಸಲಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ನಡೆಯುವ ಬುಳ್ಳಾಪುರಕ್ಕೆ ತೆರಳಿ ಗುದ್ದಲಿ ಪೂಜೆ ನೆರವೇರಿಸುವ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಮಿತ್ ಶಾ 16 ರಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಭದ್ರಾವತಿಗೆ ಆಗಮಿಸಲಿದ್ದಾರೆ. ಇನ್ನು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಭದ್ರಾವತಿಯಲ್ಲಿ ಸ್ಥಾಪನೆಯಾಗಲಿರುವ ಬೆಟಾಲಿಯನ್ ಗೆ 445 ಜನಕ್ಕೆ ನೇಮಕ ಸಹ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ 17 ಕ್ಕೆ ಅಮಿತ್ ಶಾ ಆಗಮಿಸುತ್ತಾರೆ ಎಂದು ಹೇಳಲಾಗುತ್ತಿತ್ತು, ಅದರೆ ಈಗ 16 ರಂದೇ ಆಗಮಿಸುತ್ತಿದ್ದಾರೆ. ಜನವರಿ 16 ರಂದು ಬೆಳಗ್ಗೆ ದೆಹಲಿಯಿಂದ 8-30ಕ್ಕೆ ಹೊರಡಲಿದ್ದಾರೆ. 11-15 ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. 12-30ಕ್ಕೆ ಭದ್ರಾವತಿಗೆ ಬರಲಿದ್ದಾರೆ. 12-45 ಕ್ಕೆ ಗುದ್ದಲೆ ಪೂಜೆ ನೆರವೇರಿಸಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಭದ್ರಾವಯಿತಿಂದ ಬೆಳಗಾವಿ ಮತ್ತು ಬಾಗಲಕೋಟೆಗೆ ತೆರಳಲಿದ್ದಾರೆ.
ಇದನ್ನೂ ಓದಿ: H Nagesh: ಸಚಿವ ಹೆಚ್. ನಾಗೇಶ್ ಮನವೊಲಿಕೆ ಯಶಸ್ವಿ; ರಾಜೀನಾಮೆಗೆ ಸೂಚಿಸಿದ ಸಿಎಂ ಯಡಿಯೂರಪ್ಪ
ಭದ್ರಾವತಿಯ ಬುಳ್ಳಾಪುರದಲ್ಲಿ ಕ್ಷಿಪ್ರ ಕಾರ್ಯ ಪಡೆ (ಆರ್ಎಎಫ್) ಬೆಟಾಲಿಯನ್ ಸ್ಥಾಪನೆ ಮಾಡಲಾಗುತ್ತಿದೆ. ದಕ್ಷಿಣ ಭಾರತದ ಪ್ರಮುಖ ಬೆಟಾಲಿಯನ್ಗಳಲ್ಲಿ ಇದು ಒಂದಾಗಲಿದೆ ಎಂದು ತಿಳಿಸಿದರು. ತುರ್ತು ಸಂದರ್ಭಗಳಾದ ಭೂಕಂಪ, ನೆರೆ ಹಾವಳಿ, ಕೋಮು ಗಲಭೆ ವೇಳೆ ಆಂಧ್ರಪ್ರದೇಶ, ತಮಿಳುನಾಡಿನಿಂದ ಆರ್ಎಎಫ್ ತುಕಡಿಗಳನ್ನು ಕರೆಸಿಕೊಳ್ಳಲಾಗುತ್ತಿತ್ತು. ಅದರೆ ಇನ್ನು ಮುಂದೆ ಭದ್ರಾವತಿಯಿಂದಲೇ ಆರ್ ಎ ಎಫ್ ತುಕಡಿಗಳು ಆಗಮಿಸಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ