ಕಾರವಾರ; ಏಷ್ಯಾದ ಎರಡನೇ ಅತಿದೊಡ್ಡ ನೌಕಾನೆಲೆಯಾಗಿರುವ ಕಾರವಾರ ಅರ್ಗಾದ ಕದಂಬ ನೌಕಾನೆಲೆಗೆ ದೇಶದ ವಿವಿಧೆಡೆಯ ಸಂಸದರನ್ನೊಳಗೊಂಡ ತಂಡ ಇಂದು ಮಧ್ಯಾಹ್ನ ಭೇಟಿ ನೀಡಿದೆ. ಸಂಸತ್ತಿನ ರಕ್ಷಣಾ ಇಲಾಖೆಯ ಸಂಸದೀಯ ಸಮಿತಿಯ ಸದಸ್ಯರಾಗಿರುವ ಸಂಸದರುಗಳು, ನೌಕಾನೆಲೆಯಲ್ಲಿ ಪ್ರಗತಿಯಲ್ಲಿರುವ 2ನೇ ಹಂತದ ಕಾಮಗಾರಿಯ ಪರಿಶೀಲನೆ ಮತ್ತು ಅಧ್ಯಯನ, ನೌಕಾನೆಲೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಸಭೆ ನಡೆಸುವ ಉದ್ದೇಶದಿಂದ ಭೇಟಿ ನೀಡಿದ್ದಾರೆ. ಗೋವಾ ರಸ್ತೆ ಮಾರ್ಗವಾಗಿ ಆಗಮಿಸಿದ ಸಂಸದರ ತಂಡಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಭದ್ರತೆ ನೀಡಲಾಗಿತ್ತು. ಜತೆಗೆ ನೌಕಾಪಡೆಯ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಕೂಡ ಇದ್ದರು.
ಸಂಸತ್ತಿನ ರಕ್ಷಣಾ ಇಲಾಖೆಯ ಸಂಸದೀಯ ಸಮಿತಿಯಲ್ಲಿ ಒಟ್ಟು 21 ಲೋಕಸಭಾ ಸದಸ್ಯರು ಹಾಗೂ 10 ರಾಜ್ಯಸಭಾ ಸದಸ್ಯರಿದ್ದು, ಇದರಲ್ಲಿ ಮಾಹಿತಿಯ ಪ್ರಕಾರ ಎನ್.ಸಿ.ಪಿ ಮುಖಂಡ ಶರದ್ ಪವಾರ್, ಜುಯೆಲ್ ಓರಮ್ ನೆತೃತ್ವದಲ್ಲಿ ಸಮಿತಿಯ 20 ಸದಸ್ಯರು ಆಗಮಿಸಿದ್ದಾರೆ. ಶರದ್ ಪವಾರ್, ಜುಯೆಲ್ ಓರಮ್, ಅಜಯ್ ಭಟ್, ಡಾ.ರಾಮಶಂಕರ್ ಕಠೇರಿಯಾ, ಜುಗಲ್ ಕಿಶೋರ್ ಶರ್ಮ, ಡಾ.ಶ್ರೀಕಾಂತ್ ಏಕನಾಥ್ ಶಿಂಧೆ, ಪ್ರೇಮಚಂದ್ರ ಗುಪ್ತ, ಸಂಜಯ್ ರಾವತ್, ಕಾಮಖ್ಯ ಪ್ರಸಾದ್, ಸುಧಾನ್ಶು ತ್ರಿವೇದಿ, ರಾಜ್ಯ ಸಚಿವೆ ಶಶಿಕಲಾ ಜೊಲ್ಲೆ ಆಗಮಿಸಿದ್ದರು. ಆಂತರಿಕ ಭದ್ರತೆ ಹಿತದೃಷ್ಟಿಯಿಂದ ನೌಕಾನೆಲೆ ಒಳಗೆ ಮಾಧ್ಯಮದವರಿಗೆ ವಿಡಿಯೋ ಚಿತ್ರೀಕರಿಸಲು ನಿಷೇಧವಿತ್ತು. ಕೇವಲ ನೌಕಾಪಡೆಯ ಮುಖ್ಯದ್ವಾರದ ಬಳಿ ಮಾತ್ರ ಅವಕಾಶ ನೀಡಲಾಗಿತ್ತು.
ಇದನ್ನು ಓದಿ: ರಾಜಭವನ ಮುತ್ತಿಗೆಗೆ ಯತ್ನ; ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನನ್ನು ವಶಕ್ಕೆ ಪಡೆದ ಪೊಲೀಸರು
ಭೇಟಿಯ ಮುಖ್ಯ ಉದ್ದೇಶ ಏನು?
ಗೋವಾ ಮತ್ತು ಕಾರವಾರ ಕದಂಬ ನೌಕಾನೆಲೆಗೆ ಸಂಸದೀಯ ಸಮಿತಿ ಆಗಮಿಸಿದ ಮುಖ್ಯ ಉದ್ದೇಶ ಇಲ್ಲಿನ ನೌಕಾನೆಲೆಯ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಜೊತೆಗೆ ಇಲ್ಲಿ ನಡೆಯುತ್ತಿರುವ ಎರಡನೇ ಹಂತದ ಕಾಮಗಾರಿ ವೀಕ್ಷಣೆ ಹಾಗೂ ಎರಡನೇ ಹಂತದ ಕಾಮಗಾರಿಯಲ್ಲಿ ಮೂಲಸೌಕರ್ಯದ ವ್ಯವಸ್ಥೆ ಯಾವ ರೀತಿ ಇರಲಿದೆ ಎನ್ನುವ ಬಗ್ಗೆ ಇಲ್ಲಿನ ನೌಕಾನೆಲೆಯ ಪ್ಲ್ಯಾಗ್ ಆಫೀಸರ್ ಮಹೇಶ್ ಸಿಂಗ್ ಮತ್ತು ಹಿರಿಯ ಅಧಿಕಾರಿಗಳಿಂದ ತಿಳಿದುಕೊಂಡರು. ಈಗಾಗಲೇ ಕರಾವಳಿಯ ಸಮುದ್ರ ಮಾರ್ಗದಲ್ಲಿ ಭದ್ರತೆ ಸೇರಿದಂತೆ ಇನ್ನುಳಿದ ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ತಿಳಿದುಕೊಂಡರು. ನೇವಲ್ ಶಿಪ್ ರಿಪೇರಿ ಯಾರ್ಡ್ ನ ಆಧುನೀಕರಣ ಮತ್ತು ಭಾರತೀಯ ಯುದ್ದ ನೌಕೆ ವಿಕ್ರಮಾದಿತ್ಯದ ಸಾಮರ್ಥ್ಯ ಸೇರಿದಂತೆ ಎರಡನೇ ಪ್ರಾಜೆಕ್ಟ್ ಸೀಬರ್ಡ್ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳ ಪ್ರಗತಿಯ ಬಗ್ಗೆ ಅಧಿಕಾರಿಗಳು ನಿಯೋಗಕ್ಕೆ ವಿವರಿಸಿದರು.
ಮೆಚ್ವುಗೆ ವ್ಯಕ್ತಪಡಿಸಿದ ತಂಡ
ಕಾರವಾರ ಕದಂಬ ನೌಕಾನೆಲೆಗೆ ಆಗಮಿಸಿದ ಸಂಸದರ ತಂಡ ಕಾರವಾರ ನೌಕಾನೆಲೆ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿದರು. ಎರಡನೇ ಹಂತದ ಕಾಮಗಾರಿ ಬಗ್ಗೆ ಎಲ್ಲ ಮಾಹಿತಿ ತಿಳಿದುಕೊಂಡ ಬಳಿಕ ಯಾವ ಯಾವ ಕಂಪನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎನ್ನುವ ಬಗ್ಗೆ ಮಾಹಿತಿ ಪಡೆದು ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ವಿಕ್ರಮಾದಿತ್ಯ ಯುದ್ದ ನೌಕೆ ಏರಿದ ತಂಡದ ಸದಸ್ಯರು ಪೋಟೊ ತೆಗೆದುಕೊಂಡರು, ಮತ್ತು ಅಧಿಕಾರಿಗಳಿಂದ ಆಂತರಿಕ ಭದ್ರತೆ ಕುರಿತು ಚರ್ಚಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ