ಕೊಡಗು : ನಾಡಿನ ಜೀವ ನದಿ ಕಾವೇರಿ ಬತ್ತುತ್ತಿದ್ದು, ಕಾವೇರಿ ನೀರನ್ನೇ ಆಶ್ರಯಿಸಿರುವ ಜಿಲ್ಲೆಗಳು ಕುಡಿಯುವ ನೀರಿನ ಆಹಾಕಾರ ಎದುರಿಸುವ ಸ್ಥಿತಿ ಎದುರಾಗಿದೆ. ಹೌದು ಕೊಡಗಿನಲ್ಲಿ ಹುಟ್ಟಿ ನಾಲ್ಕು ಜಿಲ್ಲೆಗಳಲ್ಲಿ ಹರಿದು ನಾಡಿನ ಹಲವು ಜಿಲ್ಲೆಗಳ ಜೀವಜಲವಾಗಿರುವ ಕಾವೇರಿ ನದಿ ಬಹುತೇಕ ಬತ್ತುತ್ತಿದೆ. ದಕ್ಷಿಣ ಕಾಶ್ಮೀರ ಎಂದು ಹೆಸರುವಾಸಿಯಾಗಿದ್ದ ಕೊಡಗು ಜಿಲ್ಲೆಯಲ್ಲಿ ವರ್ಷದ ನಾಲ್ಕೈದು ತಿಂಗಳು ನಿರಂತರ ಮಳೆ ಸುರಿಯುತ್ತದೆ. ಅದರಲ್ಲೂ ಕಳೆದ ಮೂರು ವರ್ಷಗಳಿಂದ ಆಗಸ್ಟ್ ತಿಂಗಳಲ್ಲಿ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗುತ್ತಿದೆ. ಆದರೆ ಬೇಸಿಗೆ ಬಂತೆಂದರೆ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗೋದು ಕೂಡ ಕಾಮನ್ ಆಗಿತ್ತು. ಆದರೆ ಈ ಬಾರಿ ಕಳೆದ 50 ರಿಂದ 60 ವರ್ಷಗಳಲ್ಲೇ ಎಂದೂ ನೋಡಿರದಷ್ಟು ಪ್ರಮಾಣದಲ್ಲಿ ಕಾವೇರಿ ನದಿ ಬತ್ತುತ್ತಿದೆ ಎನ್ನೋದು ಸ್ಥಳೀಯರಾದ ಅಬ್ದುಲ್ಲಾ ಅವರ ಆತಂಕದ ನುಡಿ.
ಕಾವೇರಿ ನದಿಯಲ್ಲಿ ನೀರು ಅಲ್ಲಲ್ಲೇ ತಗ್ಗು ಪ್ರದೇಶಗಳಲ್ಲಿ ಮಾತ್ರವೇ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುವುದನ್ನು ಬಿಟ್ಟರೆ ಉಳಿದೆಡೆ ನದಿಯ ಒಡಲು ಬರಿದಾಗಿದೆ. ಸಾಕಷ್ಟು ಕಡೆಗಳಲ್ಲಿ ಕಲ್ಲುಬಂಡೆಗಳೇ ಕಾಣುತ್ತಿವೆ. ಹೀಗಾಗಿ ಕುಡಿಯಲು ಮತ್ತು ಕೃಷಿಗೆ ಕಾವೇರಿ ನೀರನ್ನೇ ನಂಬಿಕೊಂಡಿದ್ದ ನಾಲ್ಕೈದು ಜಿಲ್ಲೆಗಳ ಲಕ್ಷಾಂತರ ಜನರು ಸಮಸ್ಯೆಗೆ ಸಿಲುಕುವ ಸ್ಥಿತಿ ಎದುರಾಗಿದೆ. ಬೇರೆ ಜಿಲ್ಲೆಯ ಮಾತಿರಲಿ, ಕಾವೇರಿ ತವರು ಕೊಡಗಿನಲ್ಲೇ ಕುಡಿಯುವ ನೀರಿಗೆ ಆಹಾಕಾರ ಎದುರಾಗುವ ದಿನಗಳು ಅತ್ತಿರವಾಗಿವೆ.
ಕೊಡಗಿನ ಕುಶಾಲನಗರ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಹುಣುಸೂರು ಸೇರಿದಂತೆ ಹಲವು ಪಟ್ಟಣಗಳಲ್ಲಿ ಈಗಾಗಲೇ ಸ್ಥಳೀಯ ಆಡಳಿತಗಳು ಕಾವೇರಿ ನದಿಗೆ ಮರಳಿನ ಮೂಟೆಗಳಿಂದ ಕಟ್ಟೆಕಟ್ಟಿ ನೀರು ಸಂಗ್ರಹಿಸಿ ಪಟ್ಟಣಗಳಿಗೆ ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಪೂರೈಸುವುದಕ್ಕೆ ಸಿದ್ಧತೆ ಮಾಡಿಕೊಂಡಿರುವುದಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೇಶವ ಹೇಳಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊನೆಯಾಗದಿದ್ದರೆ ರಾಜ್ಯಕ್ಕೆ ಅಪಾಯ; ವಾಟಾಳ್ ನಾಗರಾಜ್
ಸಾಮಾನ್ಯವಾಗಿ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗುವುದಾದರೂ ಅದು ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಲ್ಲಿ ಕಡಿಮೆಯಾಗುತಿತ್ತು. ಆದರೆ ಈ ಬಾರಿ ಏಪ್ರಿಲ್ ಆರಂಭದಲ್ಲೇ ಕಾವೇರಿ ಒಡಲು ಬಹುತೇಕ ಬರಿದಾಗಿದ್ದು ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಲ್ಲಿ ಎನ್ನೆಂತಹ ಸ್ಥಿತಿ ನಿರ್ಮಾಣವಾಗುವುದೋ ಎನ್ನೋ ಆತಂಕ ಎದುರಾಗಿದೆ. ಇದು ಕೇವಲ ಕೊಡಗಿಗೆ ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಮೈಸೂರು ಮಂಡ್ಯ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ