HOME » NEWS » District » CAUVERY RIVER IN FEAR OF RUNNING OUT OF WATER BY MISTAKE OF FOREST DEPARTMENT RSK HK

ಬ್ರಹ್ಮಗಿರಿ ಬೆಟ್ಟದಲ್ಲಿವೆ ನೂರಾರು ಇಂಗು ಗುಂಡಿಗಳು: ಬೆಟ್ಟ ಕುಸಿದರೆ ಕಾವೇರಿಯೇ ಬತ್ತುವ ಆತಂಕ

ಆಗಸ್ಟ್ ತಿಂಗಳಲ್ಲಿ ಬೆಟ್ಟ ಕುಸಿದಾಗ ಇಂಗು ಗುಂಡಿಗಳೇ ಕಾರಣ ಎನ್ನುವ ಸಾಕಷ್ಟು ಚರ್ಚೆಯಾಗಿತ್ತು. ಹೀಗಾಗಿ ಮಳೆ ಕಡಿಮೆಯಾಗುತ್ತಿದ್ದಂತೆ ಅರಣ್ಯ ಇಲಾಖೆ ಕೆಲವು ಇಂಗುಗುಂಡಿಗಳನ್ನು ಮಾತ್ರವೇ ಮುಚ್ಚಿದೆ

news18-kannada
Updated:December 3, 2020, 7:16 AM IST
ಬ್ರಹ್ಮಗಿರಿ ಬೆಟ್ಟದಲ್ಲಿವೆ ನೂರಾರು ಇಂಗು ಗುಂಡಿಗಳು: ಬೆಟ್ಟ ಕುಸಿದರೆ ಕಾವೇರಿಯೇ ಬತ್ತುವ ಆತಂಕ
ಬ್ರಹ್ಮಗಿರಿ ಬೆಟ್ಟ
  • Share this:
ಕೊಡಗು(ಡಿಸೆಂಬರ್. 03): ಯಾರದೋ ಕೆಲವರ ಮಾತು ಕೇಳಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ ತಪ್ಪಿಗೆ ಕನ್ನಡ ನಾಡಿನ ಜೀವನದಿ ಕಾವೇರಿ ದಿಕ್ಕು ಬದಲಿಸಿಬಿಡುತ್ತಾಳಾ ಎನ್ನುವ ಆತಂಕ ಶುರುವಾಗಿದೆ. ಇದು ಅಚ್ಚರಿ ಎನಿಸಿದರೂ ಅಲ್ಲಗಳೆಯುವ ವಿಷಯವೇನೂ ಅಲ್ಲ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟಿ ನಾಡಿನುದ್ದಕ್ಕೂ ಹರಿಯುವ ಕಾವೇರಿ ಉಗಮಸ್ಥಾನದ ಬ್ರಹ್ಮಗಿರಿ ಮತ್ತು ಗಜಗಿರಿ ಬೆಟ್ಟದಲ್ಲಿ 2017 ರಲ್ಲಿ 300 ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ತೆಗೆಯಲಾಗಿತ್ತು. ಪರಿಣಾಮವಾಗಿ 2018 ರಲ್ಲಿ ಭಾರೀ ಪ್ರಮಾಣದಲ್ಲಿ ಬಿರುಕುಬಿಟ್ಟಿದ್ದ ಗಜಗಿರಿ ಬೆಟ್ಟ 2020 ಆಗಸ್ಟ್ ತಿಂಗಳಲ್ಲಿ ಬಹುತೇಕ ಕುಸಿದು ಬಿದ್ದಿತ್ತು. ಬ್ರಹ್ಮಗಿರಿ ಮತ್ತು ಗಜಗಿರಿಬೆಟ್ಟದಲ್ಲಿ ಇನ್ನೂ ನೂರಾರು ಇಂಗು ಗುಂಡಿಗಳು ಹಾಗೇ ಇದ್ದು ಗಜಗಿರಿಬೆಟ್ಟ ಮುಂದಿನ ಮಳೆಗಾಲದಲ್ಲಿ ಮತ್ತೆ ಕುಸಿದು ಬೀಳುವುದರಲ್ಲಿ ಅನುಮಾನವಿಲ್ಲ. ಅಷ್ಟೇ ಅಲ್ಲ ಬ್ರಹ್ಮಗಿರಿ ಬೆಟ್ಟದಲ್ಲಿಯೂ ಇಂಗು ಗುಂಡಿಗಳಿದ್ದು, ಒಂದುವೇಳೆ ಅದು ಕುಸಿದಿದ್ದೇ ಆದಲ್ಲಿ ಕಾವೇರಿ ನದಿಯ ಮೂಲವೇ ಬತ್ತಿ ಹೋಗಬಹುದಾದ ಸಾಧ್ಯತೆ ಇದೆ.

ಬ್ರಹ್ಮಗಿರಿ ಬೆಟ್ಟ ಮಂಡ್ರೂಟ್ ಭಾಗಕ್ಕೆ ಕುಸಿದಿದ್ದೇ ಆದಲ್ಲಿ ಕಾವೇರಿ ನದಿ ಕನ್ನಡ ನಾಡಿನಲ್ಲಿ ಹರಿಯುವ ಬದಲು ಕೇರಳ ಭಾಗಕ್ಕೆ ಹರಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಪರಿಸರವಾದಿ ತಮ್ಮು ಪೂವಯ್ಯ.

ಅಷ್ಟಕ್ಕೂ ತಲಕಾವೇರಿಯಲ್ಲಿ ಜಲಮೂಲಗಳು ಬತ್ತಿಹೋಗುತ್ತಿದ್ದು, ಒರತೆ ಕಡಿಮೆಯಾಗಿದೆ. ಹೀಗಾಗಿ ಅರಣ್ಯ ಇಲಾಖೆ ಬ್ರಹ್ಮಗಿರಿ ಮತ್ತು ಗಜಗಿರಿ ಬೆಟ್ಟಗಳಲ್ಲಿ ಇಂಗು ಗುಂಡಿಗಳನ್ನು ತೆಗೆಯಬೇಕು. ಜೊತೆಗೆ ಗಿಡಗಳನ್ನು ನೆಟ್ಟು ಅರಣ್ಯ ಬೆಳೆಸುವಂತೆ ಸರ್ಕಾರಕ್ಕೆ ಕಾವೇರಿ ಹಿತರಕ್ಷಣಾ ಸಮಿತಿಯ ಎಂ.ಬಿ. ದೇವಯ್ಯ ಅವರು ಈ ಕುರಿತು 2015 ರ ನವೆಂಬರ್ ತಿಂಗಳಲ್ಲಿ ಪತ್ರ ಬರೆದಿದ್ದಾರೆ.

ಸರ್ಕಾರ ಕೂಡ ಇದಕ್ಕೆ ಒಪ್ಪಿ ಕ್ರಮಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಿದೆ. ಹೀಗಾಗಿ 2017 ರಲ್ಲಿ ಕೊಡಗಿನ ಅರಣ್ಯ ಇಲಾಖೆ ತಲಕಾವೇರಿಯ ಬ್ರಹ್ಮಗಿರಿ ಮತ್ತು ಗಜಗಿರಿ ಬೆಟ್ಟದಲ್ಲಿ ಜೆಸಿಬಿಯನ್ನು ಬಳಸಿ 13 ಅಡಿ ಉದ್ದ ಐದಡಿ ಅಗಲ ಮತ್ತು 6 ಅಡಿ ಆಳದ 300 ಕ್ಕೂ ಹೆಚ್ಚು ಗುಂಡಿಗಳನ್ನು ತೆಗೆದಿತ್ತು. ಇದೇ ಕಾರಣದಿಂದಲೇ 2018 ರಲ್ಲಿ ಗಜಗಿರಿ ಬೆಟ್ಟ ಬಹುತೇಕ ಬಿರುಕುಬಿಟ್ಟಿತ್ತು.

ಇದನ್ನೂ ಓದಿ : ತಕ್ಷಣವೇ ಶಾಲೆ ಆರಂಭಿಸಿ: ವಿಧಾನಪರಿಷತ್ ಸದಸ್ಯರ ಒಕ್ಕೊರಲ ಆಗ್ರಹ

2020 ರ ಆಗಸ್ಟ್ ನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದು ಅರ್ಚಕ ನಾರಾಯಣ್ ಆಚಾರ್ ಅವರ ಕುಟುಂಬವನ್ನು ಬಲಿ ಪಡೆದಿತ್ತು. ಗಜಗಿರಿ ಮತ್ತು ಬ್ರಹ್ಮಗಿರಿ ಬೆಟ್ಟದಲ್ಲಿ ಎರಡು ಹಂತದಲ್ಲಿ ಇಂಗು ಗುಂಡಿಗಳನ್ನು ತೆಗೆಯಲಾಗಿದೆ. ಈಗ ಬೆಟ್ಟ ಕುಸಿದಿರುವುದು ಮೊದಲ ಹಂತದಲ್ಲಿ ತೆಗೆದಿದ್ದ ಇಂಗು ಗುಂಡಿಗಳ ಜಾಗದಿಂದ. ಇದಕ್ಕಿಂತ ಮೇಲಿನ ಹಂತದಲ್ಲಿ ತೆಗೆದಿದ್ದ ಗುಂಡಿಗಳು ಈಗಲೂ ಹಾಗೆ ಇವೆ.
ಆಗಸ್ಟ್ ತಿಂಗಳಲ್ಲಿ ಬೆಟ್ಟ ಕುಸಿದಾಗ ಇಂಗು ಗುಂಡಿಗಳೇ ಕಾರಣ ಎನ್ನುವ ಸಾಕಷ್ಟು ಚರ್ಚೆಯಾಗಿತ್ತು. ಹೀಗಾಗಿ ಮಳೆ ಕಡಿಮೆಯಾಗುತ್ತಿದ್ದಂತೆ ಅರಣ್ಯ ಇಲಾಖೆ ಕೆಲವು ಇಂಗುಗುಂಡಿಗಳನ್ನು ಮಾತ್ರವೇ ಮುಚ್ಚಿದೆ. ಇನ್ನೂ ನೂರಾರು ಗುಂಡಿಗಳು ಹಾಗೇ ಇವೆ.
Published by: G Hareeshkumar
First published: December 3, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories