ಮಹದಾಯಿ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸದಿದ್ದರೆ ರೈತರಿಂದ ಬೆಂಗಳೂರು ಚಲೋ ನಡೆಸುವ ಎಚ್ಚರಿಕೆ!
ರಾಜ್ಯದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಮಹದಾಯಿ ಯೋಜನೆ ಜಾರಿಗೆ ನ್ಯಾಯಾಧಿಕರಣದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕರ್ನಾಟಕದ ಪಾಲಿಗೆ 13.5 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಆದರೆ ರಾಜ್ಯ ಸರ್ಕಾರ ಇನ್ನೂ ಕಾಮಗಾರಿಗೆ ಚಾಲನೆ ನೀಡಿಲ್ಲ.
ಹುಬ್ಬಳ್ಳಿ (ಫೆಬ್ರವರಿ 03); ಮಹದಾಯಿ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸದಿದ್ದರೆ ರೈತರಿಂದ ಬೆಂಗಳೂರು ಚಲೋ ಹೋರಾಟ ನಡೆಸಲಾಗುವುದು ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೊಬರದಮಠ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಇಚ್ಛಾಶಕ್ತಿ ತೋರಿಸುತ್ತಿಲ್ಲಾ ಎಂದು ಕಿಡಿ ಕಾರಿದ್ದಾರೆ. ರಾಜ್ಯದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಮಹದಾಯಿ ಯೋಜನೆ ಜಾರಿಗೆ ನ್ಯಾಯಾಧಿಕರಣದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕರ್ನಾಟಕದ ಪಾಲಿಗೆ 13.5 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಕಾಮಗಾರಿಗೆ ಚಾಲನೆ ನೀಡಿಲ್ಲ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ರೈತರಿಗೆ ತೀರಾ ಬೇಸರವಾಗಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಂಡು ಕಾಮಗಾರಿ ತ್ವರಿತ ಗತಿಯಲ್ಲಿ ನಡೆಸದಿದ್ದರೆ ಮತ್ತೊಂದು ಸುತ್ತಿನ ಉಗ್ರ ಹೋರಾಟ ನಡೆಯಲಿದೆ ಎಂದವರು ಹೇಳಿದ್ದಾರೆ.
ಇತೀಚೆಗೆ ಗೋವಾ ವಿಧಾನ ಮಂಡಲ ಅಧಿವೇಶನದಲ್ಲಿ ಕರ್ನಾಟಕಕ್ಕೆ ಖಡಕ್ ಎಚ್ಚರಿಕೆ ನೀಡಿದ್ದ ಅಲ್ಲಿನ ಮುಖ್ಯಮಂತ್ರಿ ಪ್ರಮೋದದ ಸಾವಂತ್, "ಮಹದಾಯಿ ಯೋಜನೆಯಿಂದಾಗಿ ಗೋವಾದ ಪರಿಸರ ಹಾನಿಯಾಗುತ್ತದೆ. ಅಲ್ಲದೆ, ಮಹದಾಯಿ ಗೋವಾದ ಜೀವನದಿಯಾಗಿದ್ದು, ಪಕ್ಷಭೇದ ಇಲ್ಲದೆ ಹೋರಾಡಿ ನಾವು ಅದನ್ನು ಉಳಿಸಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ನೀರು ಕೊಡುವುದಿಲ್ಲ" ಎಂದಿದ್ದರು.
ಆದರೆ, ಬೆಂಗಳೂರಿನಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, "ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಮ್ಮ ರಾಜಕೀಯ ಲಾಭಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ. ಆದರೆ, ಶೀಘ್ರದಲ್ಲೇ ಮಹದಾಯಿ ಯೋಜನೆಯನ್ನು ಆರಂಭಿಸಲಾಗುವುದು" ಎಂದು ಮಾತು ನೀಡಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಮತ್ತೆ ಮಹದಾಯಿ ಸಮಸ್ಯೆ ತಲೆದೋರಿದೆ. ಅಲ್ಲದೆ, ಈ ಯೋಜನೆಯನ್ನು ಶೀಘ್ರದಲ್ಲೇ ಮುಗಿಸುವಂತೆಯೂ ಒತ್ತಯಗಳು ಕೇಳಿ ಬರುತ್ತಿವೆ.
ತೈಲ ಬೆಲೆ ಏರಿಕೆ ಖಂಡಿಸಿ ಆಟೋ ಚಾಲಕರ ಸಂಘದಿಂದ ಪ್ರತಿಭಟನೆ:
ತೈಲ ಬೆಲೆ ಏರಿಕೆ ಖಂಡಿಸಿ ಹುಬ್ಬಳ್ಳಿಯಲ್ಲಿ ಆಟೋ ಚಾಲಕರ ಸಂಘದಿಂದ ಪ್ರತಿಭಟನೆ ನಡೆಯಿತು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಆಟೋ ಚಾಲಕರು ಪ್ರತಿಭಟನಾ ಮೆರವಣಿಗೆ ಮಾಡಿದ್ರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ರು. ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೊರೋನಾ ಲಾಕ್ ಡೌನ್ ನಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗ ಪೆಟ್ರೋಲ್ ಡೀಜಲ್ ಬೆಲೆ ಏರಿಕೆಯಿಂದ ಮತ್ತಷ್ಟು ಆರ್ಥಿಕ ಹೊರೆ ಎದುರಿಸಬೇಕಾಗಿದೆ. ಕೇಂದ್ರ ಸರ್ಕಾರ ಕೂಡಲೆ ತೈಲ ಬೆಲೆ ಏರಿಕೆ ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ