ಕೊಡಗು : ಆತ ದಿನಸಿ ಅಂಗಡಿ ವ್ಯಾಪಾರಿ. ಜೊತೆಗೆ ನಿತ್ಯ ಏಳೆಂಟು ಕ್ರೇಟ್ ಹಾಲು ಕೂಡ ಸೇಲ್ ಮಾಡುತ್ತಿದ್ದ. ಆದರೆ ತಾನು ಇಳಿಸಿಕೊಳ್ಳುತ್ತಿದ್ದ ಹಾಲನ್ನು ಅಂಗಡಿಗೆ ತೆಗೆದುಕೊಳ್ಳುವಷ್ಟರಲ್ಲಿ ಎರಡು ಕ್ರೇಟ್ ಹಾಲು ಇಲ್ಲವಾಗಿಬಿಡುತಿತ್ತು. ಅಂಗಡಿಗೆ ಹಾಲು ತೆಗೆದುಕೊಳ್ಳಲು ಬಂದಾಗ ಆತನಿಗೆ ಅನುಮಾನ ಆಗಿಬಿಡುತಿತ್ತು. ಹಾಲು ಇಳಿಸಿ ಹೋದ ಲಾರಿಯವನು ವಾಪಸ್ ಕ್ರೇಟ್ ಗಳನ್ನು ತೆಗೆದುಕೊಳ್ಳಲು ಬಂದಾಗ 'ಖಾಲಿ ಕ್ರೇಟ್ ಯಾಕೆ ಹಾಕಿರೋದು' ಎಂದು ಅಂಗಡಿ ಮಾಲೀಕ ಕೇಳಿದ್ದ. ಲಾರಿಯವನು 'ಹಾಲನ್ನೇ ಇಳಿಸುತಿದ್ದೆ, ಖಾಲಿ ಕ್ರೇಟ್ ಇಳಿಸಿಲ್ಲ' ಎಂದು ಹೇಳಿದ್ದಾನೆ. ಆಗಲೇ ನೋಡಿ ಅಂಗಡಿ ಮಾಲೀಕನಿಗೆ ಅಚ್ಚರಿ, ಅನುಮಾನ ಮೂಡಿರೋದು. ಅಷ್ಟಕ್ಕೂ ಈ ಘಟನೆ ನಡೆದಿರೋದು ಕೊಡಗು ಜಿಲ್ಲೆ ಕುಶಾಲನಗರದಲ್ಲಿ.
ವೆಂಕಟೇಶ್ವರ ಥಿಯೇಟರ್ ಬಳಿಯ ಚಾಮುಂಡೇಶ್ವರಿ ದಿನಸಿ ಅಂಗಡಿಯಲ್ಲಿ. ಎರಡು ದಿನಗಳು ಹತ್ತಾರು ಲೀಟರ್ ಹಾಲು ಇಲ್ಲವಾಗಿಬಿಡುತಿತ್ತು. ಇದರಿಂದ ನಷ್ಟದ ಜೊತೆಗೆ ಅಚ್ಚರಿ ಅನುಭವಿಸಿದ ಅಂಗಡಿ ಮಾಲೀಕ ಅಂಗಡಿಯ ಎದುರು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾನೆ. ಆಗಲೇ ನೋಡಿ ಹಾಲು ಮಾಯವಾಗುತ್ತಿದ್ದದ್ದು ಹೇಗೆ ಎನ್ನೋದು ಬಯಲಾಗಿರೋದು. ಹೌದು ಕೂಡಿಗೆ ಡೈರಿಯಿಂದ ಬರುತ್ತಿದ್ದ ಹಾಲಿನ ಲಾರಿ ಅಂಗಡಿ ಮುಂದೆ ಮುಂಜಾನೆ ಹತ್ತಾರು ಕ್ರೇಟ್ ಹಾಲನ್ನು ಇಳಿಸಿ ಹೋಗುತ್ತಿತ್ತು. ಅತ್ತ ಲಾರಿಯಲ್ಲಿ ಹಾಲು ಇಳಿಸಿ ಹೋಗುತ್ತಿದ್ದಂತೆ ಎರಡು ಕ್ರೇಟ್ ಹಾಲನ್ನು ವ್ಯಕ್ತಿಯೊಬ್ಬ ಎಗರಿಸುತ್ತಿದ್ದ.
ಹಾಲು ಇಳಿಸಿ ಲಾರಿ ಅತ್ತ ಹೋಗುತಿದ್ದಂತೆ, ಇತ್ತ ವ್ಯಕ್ತಿಯೊಬ್ಬ ಮೈಗೆಲ್ಲಾ ಬೆಡ್ ಶೀಟ್ ಸುತ್ತಿಕೊಂಡು ಬೈಕ್ ಏರಿ ಬರುತ್ತಿದ್ದ. ಯಾರಿಗೂ ಅನುಮಾನ ಬಾರದಿರಲಿ ಎಂದು ಸ್ವಲ್ಪ ದೂರದಲ್ಲಿ ಮತ್ತೊಂದು ರಸ್ತೆಯಲ್ಲಿ ತನ್ನ ಬೈಕ್ ನಿಲ್ಲಿಸಿ ನಡೆದು ಬರುತ್ತಿದ್ದ. ಹೀಗೆ ಬಂದವನೇ ಅತ್ತ ಇತ್ತ ನೋಡಿ, ಯಾರು ಬರುತ್ತಿಲ್ಲ ಎನ್ನೋದನ್ನು ಖಚಿತಪಡಿಸಿಕೊಂಡು ಬ್ಯಾಗ್ ಒಂದಕ್ಕೆ ಎರಡು ಕ್ರೇಟ್ ಗಳ ಅಷ್ಟೂ ಹಾಲನ್ನು ತುಂಬಿಸಿಕೊಂಡು ಆತ ಅಲ್ಲಿಂದ ಕಾಲು ಕೀಳುತ್ತಿದ್ದ. ಹೀಗೆ ಎರಡು ದಿನಗಳು ಹಾಲು ಮಾಡಿದ್ದಾನೆ.
ಇದನ್ನೂ ಓದಿ: ವಿದ್ಯುತ್ ತಂತಿ ಎಳೆದೊಯ್ಯಲು ರೈತರ ಫಸಲನ್ನು ಹಾಳು ಮಾಡಿದ ಪವರ್ ಗ್ರೀಡ್ ಕಂಪನಿ: ಸಂಕಷ್ಟಕ್ಕೆ ಸಿಲುಕಿದ ರೈತ
ಎರಡು ದಿನಗಳಿಂದ ಹಾಲು ಕಳವಾಗುತ್ತಿದ್ದರಿಂದ ಅಂಗಡಿ ಮಾಲೀಕ ಎದುರು ಮನೆಯಲ್ಲಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾಗಲೇ ಹಾಲು ಕಳವು ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಹಾಲು ಕಳವು ಮಾಡುತ್ತಿದ್ದವನು ತಲೆಗೆ ಹೆಲ್ಮೆಟ್ ಹಾಕಿಕೊಂಡು ಬರುತ್ತಿದ್ದರಿಂದ ಆತ ಯಾರು ಎನ್ನೋದು ತಿಳಿದು ಬಂದಿಲ್ಲ. ಸದ್ಯ ಅಂಗಡಿ ಮಾಲೀಕ ಘಟನೆ ಸಂಬಂಧ ಕುಶಾಲನಗರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಆದರೆ ಹಾಲು ಕಳವು ಮಾಡುತಿದ್ದಾತ ತಾನು ಏರಿ ಬರುತ್ತಿದ್ದ ಬೈಕ್ ನಂಬರನ್ನು ಪೊಲೀಸರು ಪತ್ತೆ ಹಚ್ಚುತಿದ್ದಾರೆ.
ಬೈಕ್ ನಂಬರ್ ಸ್ಪಷ್ಟವಾಗಿ ಗೊತ್ತಾದಲ್ಲಿ ಎರಡು ಕ್ರೇಟ್ ಗಳಲ್ಲಿನ ಹತ್ತಾರು ಲೀಟರ್ ಹಾಲು ಕದಿಯುತ್ತಿದ್ದ ಭೂಪ ಯಾರು ಅನ್ನೋದು ಗೊತ್ತಾಗಲಿದೆ. ಒಟ್ಟಿನಲ್ಲಿ ಕಳ್ಳತನ ಮಾಡುವವನು ಒಂದಲ್ಲಾ ಒಂದು ರೀತಿಯಲ್ಲಿ ತನ್ನ ಕುರುಹುಗಳನ್ನು ಬಿಟ್ಟಿರುತ್ತಾನೆ ಎನ್ನೋದಂತು ಸತ್ಯ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ