ದಕ್ಷಿಣ ಕನ್ನಡ: ಒಣ ಹಣ್ಣುಗಳಲ್ಲಿ ಅತ್ಯಂತ ಮಹತ್ವ ಹೊಂದಿರುವ ಗೇರು ಬೀಜದ ಬಗ್ಗೆ ಹೆಚ್ಚಾಗಿ ತಿಳಿದವರು ಮಾತ್ರ ಗೇರು ಕೃಷಿಯಲ್ಲಿ ತೊಡಿಗಿಸಿಕೊಂಡಿದ್ದಾರೆ. ದೇಶದಲ್ಲಿ ಗೇರು ಕೃಷಿಯ ಇತಿಹಾಸ, ಗೇರು ಸಸಿಗಳಲ್ಲಿನ ವಿವಿಧ ತಳಿಗಳು, ಗೇರು ಕೃಷಿಗೆ ಬೇಕಾದ ವ್ಯವಸ್ಥೆಗಳು, ಮಾರುಕಟ್ಟೆ ಹೀಗೆ ಎಲ್ಲವನ್ನೂ ಪರಿಚಯಿಸುವ ವಿಶೇಷ ಮ್ಯೂಸಿಯಂ ಒಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಿದ್ಧಗೊಂಡಿದೆ. ರಾಷ್ಟ್ರಮಟ್ಟದಲ್ಲೇ ಗೇರು ಪ್ರಪಂಚದ ಆಳ, ಹರಿವನ್ನು ಅನಾವರಣ ಮಾಡುವ ಸರಕಾರಿ ಕ್ಷೇತ್ರದ ಏಕೈಕ ಸಮಗ್ರ ಮ್ಯೂಸಿಯಂ ಎನ್ನುವ ಕೀರ್ತಿಗೂ ಇದು ಪಾತ್ರವಾಗಿದೆ.
ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಗೇರು ಕೃಷಿಗೆ ಹೆಚ್ಚಿನ ಬೇಡಿಕೆ ಬರುತ್ತಿರುವುದು ಕಂಡು ಬರುತ್ತಿದೆ. ಬೆಟ್ಟ-ಗುಡ್ಡಗಳಲ್ಲಿ ತನ್ನಷ್ಟಕ್ಕೆ ಬೆಳೆಯುತ್ತಿದ್ದ ಗೇರು ಸಸಿಗಳನ್ನು ಇಂದು ಇತರ ಕೃಷಿಗಳಂತೆ ವ್ಯವಸ್ಥಿತವಾಗಿ ಬೆಳೆಸಲಾಗುತ್ತಿದೆ. ಭಾರತದ ನೆಲಕ್ಕೆ ಪೋರ್ಚುಗೀಸರ ಮೂಲಕ ಬಂದ ಗೇರು , ಗೋವಾದಲ್ಲಿ ಈ ಕೃಷಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಯಿತು. ಬಳಿಕದ ದಿನಗಳಲ್ಲಿ ಗೇರು ದೇಶದ ಕರಾವಳಿಯುದ್ಧಕ್ಕೂ ಸಾಮಾನ್ಯವಾಗಿ ಬೆಳೆಯುವ ಕೃಷಿಯಾಗಿಯೂ ಬದಲಾಗಿದೆ. ಭಾರತದಲ್ಲಿ ಗೇರು ಕೃಷಿಯ ಇತಿಹಾಸ, ಗೇರು ಕೃಷಿಯಲ್ಲಿನ ಸಂಶೋಧನೆಗಳು, ಮಾರುಕಟ್ಟೆಯ ವ್ಯವಸ್ಥೆಗಳು ಹೀಗೆ ಗೇರು ಕೃಷಿಯ ಬೆಳವಣಿಗೆಯಲ್ಲಿ ಆದ ಹಲವು ಮಜಲುಗಳನ್ನು ಹಲವು ನಿದರ್ಶನಗಳ ಮೂಲಕ ಸಾದರಪಡಿಸುವ ವಿಶಿಷ್ಟ ಮ್ಯೂಸಿಯಂ ಒಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಿದ್ಧಗೊಂಡಿದೆ.
ಪುತ್ತೂರಿನ ಗೇರು ಸಂಶೋಧನಾ ಕೇಂದ್ರದಲ್ಲಿ ಈ ಗೇರು ಕೃಷಿಯ ಕುರಿತು ಮಾಹಿತಿ ನೀಡುವ ರಾಷ್ಟ್ರದಲ್ಲೇ ಪ್ರಥಮ ಮ್ಯೂಸಿಯಂ ಅನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಕೃಷಿ ವಿಜ್ಞಾನ ಯೋಜನಾ ಅಡಿಯಲ್ಲಿ ಕೇಂದ್ರ ಸರಕಾರವು ನೀಡುವ ಅನುದಾನವನ್ನು ಬಳಸಿಕೊಂಡು ಈ ಮ್ಯೂಸಿಯಂ ಅನ್ನು ಸಿದ್ಧಪಡಿಸಿಲಾಗಿದೆ. ಒಟ್ಟು ಬಂದ 2 ಕೋಟಿ ರೂಪಾಯಿ ಅನುದಾನದಲ್ಲಿ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗಿದೆ. 3 ವರ್ಷಗಳ ಹಿಂದೆ ಆರಂಭಗೊಂಡ ಈ ಮ್ಯೂಸಿಯಂನ ಪ್ರವೇಶ ಹಂತದಲ್ಲಿ ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತೋರಿಸುವ ದೃಶ್ಯಾವಳಿ ತೋರಿಸಲಾಗಿದ್ದು, ಮ್ಯೂರಲ್ ಪೈಟಿಂಗ್ ಮೂಲಕ ಗೇರು ಬೆಳೆಯ ಇತಿಹಾಸ, ಭಾರತಕ್ಕೆ ಬಂದ ರೀತಿ, ಬೆಳೆದ ರೀತಿ, ವೈಜ್ಞಾನಿಕ ಬೆಳವಣಿಗೆ, ಮಾರುಕಟ್ಟೆ ಅಭಿವೃದ್ಧಿಗಳನ್ನು ತೋರಿಸಲಾಗಿದೆ. ಗೇರು ಕೃಷಿಯ ವಿವಿಧ ಮಜಲುಗಳನ್ನು ಬಿಂಬಿಸಲಾಗಿದೆ. ಇದರಲ್ಲಿ ಕೆಲವು ರೇಖಾಚಿತ್ರ ಮಾದರಿಯಲ್ಲಿದ್ದರೆ, ಬಹುತೇಕ ವಿವರಣೆಗಳನ್ನು ಮಾಡೆಲ್ ಸಹಿತ ತೋರಿಸಲಾಗಿದೆ. ಗಾಜಿನ ಗೂಡಿನೊಳಗೆ, ಡಿಜಿಟಲ್ ಮಾದರಿಯಲ್ಲಿ ಅನೇಕ ಹಂತಗಳನ್ನು ವಿವರಿಸಲಾಗಿದೆ. ಸುಂದರ ಬೆಳಕಿನ ವಿನ್ಯಾಸವನ್ನೂ ಮ್ಯೂಸಿಯಂಗೆ ನೀಡಲಾಗಿದೆ ಎನ್ನುತ್ತಾರೆ ಪುತ್ತೂರು ಗೇರು ಸಂಶೋಧನಾ ಕೇಂದ್ರದ ಮಾಜಿ ಪ್ರಭಾರ ನಿರ್ದೇಶಕ ಹಾಗೂ ವಿಜ್ಞಾನಿಯಾಗಿರುವ ಡಾ. ಎಂ.ಜಿ.ನಾಯಕ್.
ಇದನ್ನು ಓದಿ: ಸದನದಲ್ಲಿ ಸಿಡಿ ಗದ್ದಲ; ವಿಷಯ ಮಂಡನೆ ಮಾಡಿದ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಸ್ಟೇ ತಂದ ಸಚಿವರು
ದೇಶದ ಎಲ್ಲಾ ಗೇರು ಸಂಶೋಧನಾ ಕೇಂದ್ರಗಳ ಕೇಂದ್ರ ಸ್ಥಾನವಾಗಿರುವ ಪುತ್ತೂರು ಗೇರು ಸಂಶೋಧನಾ ಕೇಂದ್ರದ ಸ್ಥಾಪನೆ, ಕೇಂದ್ರದ ಸಾಧನೆ, ಕೇಂದ್ರದ ಮೂಲಕ ನಡೆದ ಗೇರು ತಳಿ ಸಂಶೋಧನೆಗಳು, ತಳಿ ಆವಿಷ್ಕಾರಗಳು, ತಳಿಗಳ ಸ್ವಭಾವ ಇತ್ಯಾದಿಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ದೃಶ್ಯ ಹಾಗೂ ಮಾಡೆಲ್ ಗಳು ಇಲ್ಲಿವೆ. ದೇಶದ ಯಾವ ಭಾಗಕ್ಕೆ ಯಾವ ತಳಿ ಹೊಂದಿಕೊಳ್ಳತ್ತದೆ ಎಂಬ ವಿವರವೂ ಇಲ್ಲಿದ್ದು, ಸಸ್ಯಾಭಿವೃದ್ಧಿಯನ್ನು ಮಾಡೆಲ್ ಮೂಲಕವೇ ಪ್ರಸ್ತುತಪಡಿಸಲಾಗಿದೆ. ಗೇರು ಕೃಷಿಗೆ ಬೇಕಾದ ಭೂಮಿ ತಯಾರಿ ಹೇಗೆ, ಅಂತರ ಎಷ್ಟಿರಬೇಕು, ಗೊಬ್ಬರ ವಿಧಾನ, ನೀರಾವರಿ ವ್ಯವಸ್ಥೆ ಹೇಗೆ, ನಿರ್ವಹಣೆ ಕ್ರಮ ಏನು ಎಂಬಿತ್ಯಾದಿ ವಿವಿರಗಳೂ ಇಲ್ಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ