ಕೋವಿಡ್ ನಿಯಮ ಉಲ್ಲಂಘಿಸಿ 2 ಕಿ.ಮೀ. ರಾಷ್ಟ್ರಧ್ವಜ ಮೆರವಣಿಗೆ; ಲಾಡ್ ಬೆಂಬಲಿಗರ ವಿರುದ್ಧ ಪ್ರಕರಣ

COVID 19 Rules: ಕರ್ನಾಟಕ ಸೇರಿದಂತೆ ದೇಶಾದ್ಯಂತ ಮೂರನೇ ಅಲೆಯ ಭೀತಿ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೋವಿಡ್​ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರಕಾರಗಳು ಹೇಳುತ್ತಿವೆ. ಆದರೆ ಜನರಿಗೆ ಒಂದು ಕಾನೂನು, ಜನಪ್ರತಿನಿಧಿಗಳಿಗೆ ಒಂದು ಕಾನೂನು ಎಂಬಂತೆ ಬಿಂಬಿತವಾಗುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಬ್ಬಳ್ಳಿ: ಸಾವಿರಾರು ಜನ ಭಾಗಿಯಾಗಿ ಎರಡು ಕಿಲೋ ಮೀಟರ್ ಉದ್ದದ ರಾಷ್ಟ್ರಧ್ವಜ ಮೆರವಣಿಗೆ ಮಾಡಿದ್ದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾಜಿ ಸಚಿವ ಸಂತೋಶ್ ಲಾಡ್ ನೇತೃತ್ವದಲ್ಲಿ ಧ್ವಜದ ಮೆರವಣಿಗೆ ನಡೆದಿತ್ತು. ಆದರೆ ಕೇವಲ ಲಾಡ್ ಬೆಂಬಲಿಗರ ಮೇಲೆ ಮಾತ್ರ ಪ್ರಕರಣ ದಾಖಲಿಸಿದ್ದು, ಪೊಲೀಸರ ಕ್ರಮಕ್ಕೆ ಜನತೆ ಅಚ್ಚರಿ ವ್ಯಕ್ತಪಡಿಸಿದೆ.

ಪೂರ್ವಾನುಮತಿ ಇಲ್ಲದೇ ಬೃಹತ್ ಗಾತ್ರದ ರಾಷ್ಟ್ರದ ಧ್ವಜದ ಮೆರವಣಿಗೆ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಸಂತೋಶ್ ಲಾಡ್ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಅಡಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ವಾತಂತ್ರ್ಯೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದಲ್ಲಿ ನಿನ್ನೆ ಎರಡು ಕಿಲೋ ಮೀಟರ್ ಉದ್ದದ ರಾಷ್ಟ್ರ ಧ್ವಜದ ಮೆರವಣಿಗೆ ಮಾಡಲಾಗಿತ್ತು. ಸಂತೋಶ್ ಲಾಡ್ ಬೆಂಬಲಿಗರಾದ ಮಂಜುನಾಥ ಮುರಳಿ, ಶಾನಪ್ಪಗೌಡ ಪಾಟೀಲ, ಹರಿಶಂಕರ ಮಠದ, ಅಜ್ಮತ್ತುಲ್ಲಾ ಜಾಗೀರದಾರ, ಸಿದ್ಧು ತಲಬಾಗಿಲು, ಸುಧೀರ್ ಬೋಳಾರ, ಬಾಳು ಖಾನಾಪುರ, ಗಂಗಾಧರ ಚಿಕ್ಕಮಠ, ರಾಮನಗೌಡ ಪಾಟೀಲ, ಗಿರೀಶ್ ಸೂರ್ಯವಂಶಿ, ಮೈನುದ್ದೀನ್ ಖಾಸೀಮನವರ, ಪ್ರವೀಣ್ ಸೂರ್ಯವಂಶಿ, ಬಾಬಾಜಾನ್ ತೆರೆಗಾಂವ ಹಾಗೂ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೊರೋನಾ ನಿಯಮಾವಳಿ ಉಲ್ಲಂಘಿಸಿ ಎರಡು ಕಿಲೋ ಮೀಟರ್ ಉದ್ದದ ರಾಷ್ಟ್ರ ಧ್ವಜದ ಮೆರವಣಿಗೆ ಮಾಡಲಾಗಿತ್ತು. ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಮರೆತು ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.  ಮಾಜಿ ಸಚಿವ ಸಂತೋಶ್ ಲಾಡ್ ಸಹ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆದರೆ ಮಾಜಿ ಸಚಿವ ಸಂತೋಶ್ ಲಾಡ್ ನೇತೃತ್ವದಲ್ಲಿಯೇ ಬೃಹತ್ ಗಾತ್ರದ ಧ್ವಜದ ಮೆರವಣಿಗೆ ಮಾಡಲಾಗಿತ್ತು. ಲಾಡ್ ಉಪಸ್ಥಿತರಿದ್ದರೂ ಅವರ ಬೆಂಬಲಿಗರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿರೋದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸರು ಮಾಜಿ ಸಚಿವನ ರಕ್ಷಣೆಗೆ ಮುಂದಾಗಿದ್ದಾರೆ ಅನ್ನೋ ಆರೋಪಗಳೂ ಕೇಳಿ ಬಂದಿವೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಮೂರನೇ ಅಲೆಯ ಭೀತಿ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೋವಿಡ್​ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರಕಾರಗಳು ಹೇಳುತ್ತಿವೆ. ಆದರೆ ಜನರಿಗೆ ಒಂದು ಕಾನೂನು, ಜನಪ್ರತಿನಿಧಿಗಳಿಗೆ ಒಂದು ಕಾನೂನು ಎಂಬಂತೆ ಬಿಂಬಿತವಾಗುತ್ತಿದೆ. ರಾಜಕಾರಣಿಗಳು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರುವ ಸಂದರ್ಭಗಳು ಪದೇ ಪದೇ ಕಂಡುಬರುತ್ತಿದೆ. ಜನಪ್ರತಿನಿಧಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ ಮತ್ತು ಇಂತವುಗಳಿಂದ ಪಾಸಿಟಿವ್​ ಪ್ರಕರಣಗಳು ಹೆಚ್ಚುವ ಸಾಧ್ಯತೆಯಿದೆ.

ರಾಜ್ಯದಲ್ಲೂ ಕೋವಿಡ್​ ಪ್ರಕರಣಗಳು ಹೆಚ್ಚು ಸಾಧ್ಯತೆ ಹಿನ್ನೆಲೆಯಲ್ಲಿ ಹಲವು ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ. ಮುಖ್ಯವಾಗಿ ಕೇರಳ ಕರ್ನಾಟಕ ಮತ್ತು ಮಹಾರಾಷ್ಟ್ರ ಕರ್ನಾಟಕ ಗಡಿ ಭಾಗದಲ್ಲಿ ನೆಗೆಟಿವ್​ ವರದಿಯಿಲ್ಲದೇ ಪ್ರವೇಶ ಮಾಡುವಂತಿಲ್ಲ ಎಂಬ ನಿರ್ಬಂಧ ಹೇರಿದೆ. ಅದರ ನಡುವೆ ಜನಪ್ರತಿನಿಧಿಗಳ ಉಡಾಫೆ ವರ್ತನೆ ಕೊರೋನಾ ವೈರಸ್​ನ್ನು ಮತ್ತೆ ಆಹ್ವಾನಿಸುವಂತಿದೆ ಎಂಬುದು ಜನಾಭಿಪ್ರಾಯ ವಾಗಿದೆ.

ಇದನ್ನೂ ಓದಿ: ತಾಲಿಬಾನ್ ಸಂಘಟನೆಯ ಮುಖಂಡರು ಯಾರು..? ಪ್ರಬಲ ಸಂಘಟನೆಯಾಗಿ ರೂಪುಗೊಂಡಿದ್ದು ಹೇಗೆ..?

ಆಗಸ್ಟ್​ 16ರಿಂದ ಮತ್ತೆ ಲಾಕ್​ಡೌನ್​ ಆಗಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಪ್ರಕರಣಗಳ ಸಂಖ್ಯೆ ಇನ್ನೂ ಅತಿರೇಖಕ್ಕೆ ಹೋಗಿರದ ಹಿನ್ನೆಲೆ, ಲಾಕ್​ಡೌನ್​ ನಿರ್ಧಾರದಿಂದ ಸರಕಾರ ಹಿಂದೆ ಸರಿದಿದೆ. ಇನ್ನೆರಡು ವಾರಗಳ ನಂತರ ಪ್ರಕರಣ ಹೆಚ್ಚಾದಲ್ಲಿ ಮಾತ್ರ ಸರಕಾರ ಲಾಕ್​ಡೌನ್​ ಹೇರಿಕೆಗೆ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ, ಈಗಾಗಲೇ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮನೆ ಬಾಗಿಲಿಗೆ ವೈದ್ಯರ ತಂಡ ಕಳಿಸುವ ಯೋಜನೆಗೆ ಸರಕಾರ ಚಾಲನೆ ನೀಡಿದೆ. 4ರಿಂದ 5 ಸಿಬ್ಬಂದಿಯಿರುವ ಸುಮಾರು 20ಕ್ಕೂ ಹೆಚ್ಚು ತಂಡಗಳು ನಗರದ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
Published by:Sharath Sharma Kalagaru
First published: