HOME » NEWS » District » CAPTURED IN CCTV LEOPARD ROAMING FREELY LOCAL PEOPLES ANXIETY IN PUTTUR HK

ಪುತ್ತೂರಿನ ಜನವಸತಿ ಪ್ರದೇಶದಲ್ಲೇ ಚಿರತೆ ಓಡಾಟ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಸ್ಥಳೀಯರು

ಚಿರತೆ ಇದೇ ರೀತಿ ಜನವಸತಿ ಪ್ರದೇಶದಲ್ಲಿ ಓಡಾಡಿದಲ್ಲಿ ಮುಂದಿನ ದಿನಗಳಲ್ಲಿ ಇದರಿಂದ ಜನರ ಪ್ರಾಣಕ್ಕೂ ಕುತ್ತು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ತಕ್ಷಣವೇ ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹವೂ ಕೇಳಿ ಬರುತ್ತಿದೆ

news18-kannada
Updated:December 15, 2020, 7:13 PM IST
ಪುತ್ತೂರಿನ ಜನವಸತಿ ಪ್ರದೇಶದಲ್ಲೇ ಚಿರತೆ ಓಡಾಟ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಸ್ಥಳೀಯರು
ಚಿರತೆಯ ಓಡಾಟದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿರುವುದು
  • Share this:
ಪುತ್ತೂರು(ಡಿಸೆಂಬರ್​. 15): ಜನವಸತಿಯಿರುವ ಪ್ರದೇಶದಲ್ಲಿ,ಜನರು ಪ್ರತಿನಿತ್ಯ ಓಡಾಡುವ ರಸ್ತೆಯಲ್ಲಿ ಚಿರತೆಯೊಂದು ಅಲೆದಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೋಡಿಂಬಾಡಿ ಪೇಟೆಯ ಸಮೀಪ ಇರುವ ಜೀನರಾಜ್ ಜೈನ್ ಎಂಬವರ ಮನೆಯ ಮುಂಭಾಗದಲ್ಲಿ ಕಳೆದ ಎರಡು‌ ದಿನಗಳಿಂದ ಚಿರತೆಯೊಂದು ಅಲೆದಾಡುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಚಿರತೆಯ ಓಡಾಟದ ದೃಶ್ಯ ಮನೆ ಮಂದಿ ತಮ್ಮ ಭದ್ರತೆಗಾಗಿ ಹಾಕಿರುವ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲಿ ದಿನವೂ ಚಿರತೆ ಓಡಾಟ ಮಾಡುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಚಿರತೆ ಮೊದಲ ದಿನ ಬಂದ ವಿಡಿಯೋ ವೈರಲ್ ಆದರೂ ಅರಣ್ಯ ಇಲಾಖೆಯವರು ದಿವ್ಯ ಮೌನವಹಿಸಿದ್ದಾರೆ ಎಂದು ಊರಿನವರು ದೂರುತಿದ್ದಾರೆ. ಡಿಸೆಂಬರ್​ 14 ರಂದು ರಾತ್ರಿ ಗಂಟೆ 1.45ರ ಸಮಯಕ್ಕೆ ಹಾಗೂ ಇಂದು ಬೆಳಗ್ಗಿನ ಜಾವ 3.30ರ ಸಮಯಕ್ಕೆ ಓಡಾಟ ನಡೆಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಕಂಡು ಬಂದಿದೆ.

ಜೀನರಾಜ ಜೈನರ ಮನೆಯ ಹಿಂಭಾಗ ಕಾಡು ಇದ್ದು ಅಲ್ಲಿಂದ ಬಂದಿರುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಕೋಡಿಂಬಾಡಿ ಪೇಟೆಯಿಂದ ಅಂದಾಜು 150 ಮೀಟರ್ ದೂರದಲ್ಲೇ ಚಿರತೆ ಕಂಡುಬಂದಿದ್ದು . ಅಲ್ಲಿಂದ ಕೋಡಿಂಬಾಡಿ ಪೇಟೆ ಕಡೆ ಬಂದಿರುವ ಬಗ್ಗೆ ದೃಶ್ಯಗಳಲ್ಲಿ ಕಂಡು ಬಂದಿದೆ.

ಇದನ್ನೂ ಓದಿ : ಕೊರೋನಾ ಎಫೆಕ್ಟ್ ಈ ವರ್ಷ ಬೇಸಿಗೆ ರಜೆ ಅನುಮಾನ ; ಜನವರಿಯಲ್ಲಿ SSLC, PUC ತರಗತಿ ಆರಂಭ ಸಾಧ್ಯತೆ..!

ಚಿರತೆಯು ಎರಡು ದಿನಗಳಿಂದ ನಿರಂತರವಾಗಿ ರಾತ್ರಿ ಸಮಯದಲ್ಲಿ ಈ ಪರಿಸರದಲ್ಲಿ ಅಲೆದಾಡುತ್ತಿದ್ದರೂ, ಜನರಿಗೆ ಅಥವಾ ಸಾಕುಪ್ರಾಣಿಗಳಿಗೆ ಯಾವುದೇ ಹಾನಿ ಮಾಡಿದ ಬಗ್ಗೆ ವರದಿಯಾಗಿಲ್ಲ. ಅರಣ್ಯ ಇಲಾಖೆಗೆ ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರೂ, ಈವರೆಗೆ ಇಲಾಖೆ ಚಿರತೆಯನ್ನು ಹಿಡಿಯುವ ಪ್ರಯತ್ನಕ್ಕೆ ಮುಂದಾಗಿಲ್ಲ.

ಚಿರತೆ ಇದೇ ರೀತಿ ಜನವಸತಿ ಪ್ರದೇಶದಲ್ಲಿ ಓಡಾಡಿದಲ್ಲಿ ಮುಂದಿನ ದಿನಗಳಲ್ಲಿ ಇದರಿಂದ ಜನರ ಪ್ರಾಣಕ್ಕೂ ಕುತ್ತು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ತಕ್ಷಣವೇ ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹವೂ ಕೇಳಿ ಬರುತ್ತಿದೆ.
Published by: G Hareeshkumar
First published: December 15, 2020, 7:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories