ಹುಬ್ಬಳ್ಳಿ; ಹುಬ್ಬಳ್ಳಿ ನಗರದಲ್ಲಿ ಕ್ಯಾನ್ಸರ್ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡುವ ಆಸ್ಪತ್ರೆಯೊಂದನ್ನು ನಿರ್ಮಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಹುಬ್ಬಳ್ಳಿ ಕಿಮ್ಸ್ ನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸೇರಿದಂತೆ ಹೊಸ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಹುಬ್ಬಳ್ಳಿ ವಾಣಿಜ್ಯ ನಗರವಾಗಿದ್ದು, ಇದನ್ನು ಆರೋಗ್ಯ ನಗರವಾಗಿ ರೂಪಿಸಬೇಕಿದೆ. ಈ ಭಾಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಬೇಕಿದೆ. ಕಿದ್ವಾಯಿಯ ಸಹಭಾಗಿತ್ವದಲ್ಲಿ, ಅದೇ ಗುಣಮಟ್ಟದ ಹೊಸ ಆಸ್ಪತ್ರೆ ನಿರ್ಮಿಸಬೇಕಿದೆ. ಇದರಿಂದಾಗಿ ಉತ್ತರ ಕರ್ನಾಟಕದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದರು.
ಐರೋಪ್ಯ ದೇಶಗಳಲ್ಲಿ ಮತ್ತೆ ಲಾಕ್ ಡೌನ್ ಮಾಡಲಾಗಿದೆ. ನಮ್ಮ ದೇಶದಲ್ಲೂ ಕೋವಿಡ್ ಎರಡನೇ ಅಲೆ ಬರುತ್ತಿದೆ ಎಂಬ ಸುದ್ದಿ ಬಂದಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಆದರೆ ಕೊರೋನಾ ಇನ್ನೂ ಹೋಗಿಲ್ಲ. ಹುಬ್ಬಳ್ಳಿಯಲ್ಲಿ ಶೇ.90 ರಷ್ಟು ಜನರು ಮಾಸ್ಕ್ ಧರಿಸಿದ್ದು, ಬಹುತೇಕರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಇಡೀ ರಾಜ್ಯದ ಜನರು ಈ ನಿಯಮಗಳನ್ನು ಪಾಲಿಸಬೇಕು ಎಂದರು.
ಇದನ್ನು ಓದಿ: ಮಾನಸಿಕ ಸಮಸ್ಯೆಗಳಿಗೆ ಆರಂಭಿಕ ಹಂತದಲ್ಲೇ ಕೌನ್ಸಿಲಿಂಗ್ ಅಗತ್ಯ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಕೋವಿಡ್ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ನಿರಾಕರಿಸಿದ ಉದಾಹರಣೆ ಇದೆ. ಆದರೆ ಸರ್ಕಾರಿ ವೈದ್ಯರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಕಿಮ್ಸ್ ನಲ್ಲಿ ಗರ್ಭಿಣಿಯರಿಗೆ ಯಶಸ್ವಿಯಾಗಿ ಹಾಗೂ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ ಎಂದು ಶ್ಲಾಘಿಸಿದರು. ರಾಜ್ಯದಲ್ಲಿ 1 ಕೋಟಿ ಕೋವಿಡ್ ಪರೀಕ್ಷೆಗಳು ನಡೆದಿದ್ದು, ಕೋವಿಡ್ ರೋಗಿಗಳ ಚಿಕಿತ್ಸೆಗೆ 300 ಕೋಟಿ ರೂ.ಗೂ ಅಧಿಕ ಖರ್ಚು ಮಾಡಲಾಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ