news18-kannada Updated:November 21, 2020, 5:34 PM IST
ಸಚಿವ ಜಗದೀಶ್ ಶೆಟ್ಟರ್
ಧಾರವಾಡ : ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಸಚಿವ ಸಂಪುಟದ ಉಪಸಮಿತಿ ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಪರಮಾಧಿಕಾರಿವಿದೆ ಎಂದು ಬೃಹತ್-ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರದ ವರಿಷ್ಠರನ್ನು ಭೇಟಿಯಾಗಿದ್ದು, ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕ ನಂತರವೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಸ್ಪಷ್ಟನೆ ನೀಡಿದರು. ಪಕ್ಷದಲ್ಲಿ ಯಾರಿಗೂ ಅನ್ಯಾಯ ಆಗುವುದಿಲ್ಲ. ನಮ್ಮಲ್ಲಿ ವರಿಷ್ಠರ ಪರಂಪರೆ ಮೊದಲಿನಿಂದಲೂ ಇದೆ. ಅವರ ಅಣತಿ ಹಾಗೂ ಮಾರ್ಗದರ್ಶನದಲ್ಲಿ ಎಲ್ಲವೂ ನಡೆಯಲಿದೆ. ಇಷ್ಟನ್ನು ಬಿಟ್ಟು ಏನು ಹೇಳುವುದಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಜಲಧಾರೆ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಸಚಿವರಾದ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸದ್ಯ ಮೂರ್ನಾಲ್ಕು ಸಭೆ ನಡೆದಿದೆ. ಡಿಪಿಆರ್ ಪೂರ್ಣಗೊಂಡಿದ್ದು, ಶೀಘ್ರವೇ ಜಲಧಾರೆ ಯೋಜನೆ ಜಾರಿಗೆ ಬರಲಿದೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ತಿಳಿಸಿದರು. ಇನ್ನೂ ಜಿಲ್ಲೆಯಲ್ಲಿ ವ್ಯರ್ಥವಾಗಿ ಹರಿಯುವ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳದ ಬಗ್ಗೆಯೂ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರ ವಿಶೇಷ ಆಸಕ್ತಿ ಮೇರೆಗೆ ಯೋಜನಾ ವರದಿ ಅಂತಿಮ ಹಂತದಲಿದ್ದು, ಶೀಘ್ರವೇ ಜಿಲ್ಲಾದ್ಯಂತ ಮಲಪ್ರಭಾ ನೀರು ಪೂರೈಸಲಿದೆ ಎಂದರು.
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಜೋರಾಗಿ ನಡೆಯುತ್ತಿದ್ದು, ಸಚಿವಾಕಾಂಕ್ಷಿಗಳು ಸಂಪುಟ ಸೇರಲು ಸಕಲ ಪ್ರಯತ್ನ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈ ಸಂಬಂಧ ದೆಹಲಿಗೆ ತೆರಳಿದ್ದು, ಅಲ್ಲಿದ ಬರಿಗೈಲಿ ವಾಪಸ್ಸಾಗಲಿದ್ದಾರೆ. ಸಿಎಂ ನೀಡಿರುವ ಪಟ್ಟಿಗೆ ಬಿಜೆಪಿ ಹೈಕಮಾಂಡ್ ಯಾವಾಗ ಗ್ರೀನ್ ಸಿಗ್ನಲ್ ನೀಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ವರದಿ; ಮಂಜುನಾಥ ಯಡಳ್ಳಿ
Published by:
HR Ramesh
First published:
November 21, 2020, 5:34 PM IST