ವಿಜಯಪುರ(ಡಿ. 14): ಬಸವ ನಾಡಿನಲ್ಲಿ ಸೋಮವಾರ ಬೆಳಿಗ್ಗೆಯಿಂದಲೆ ಸದ್ದುಗದ್ದಲವಿಲ್ಲದೆ ಬಸ್ ಸಂಚಾರ ಒಂದೊಂದಾಗಿ ಆರಂಭವಾಗಿದೆ. ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ನಿರತರಾಗಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ನಾಲ್ಕನೇ ದಿನವೂ ಸ್ಥಗಿತಗೊಂಡಿತ್ತು. ಅಲ್ಲದೇ, ಸಾರಿಗೆ ಇಲಾಕೆ ನೌಕರರೂ ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ, ವಿಜಯಪುರ ಜಿಲ್ಲೆಯಲ್ಲಿ ಬಸ್ ಬಂದ್ ಆಗಿದ್ದರೂ ಕೂಡ ಸಿಬ್ಬಂದಿ ಮಾತ್ರ ಪ್ರತಿಭಟನೆ ನಡೆಸದೆ ಶಾಂತಿಯುತವಾಗಿ ಮುಷ್ಕರಕ್ಕೆ ಬೆಂಬಲ ನೀಡಿದ್ದರು. ಮುಷ್ಕರದ ಹಿನ್ನೆಲೆಯಲ್ಲಿ ಬಸ್ ಓಡಿಸಲು ವಿಜಯಪುರ ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಹಿರಿಯ ಅಧಿಕಾರಿಗಳೊಂದಿಗೆ ಸತತವಾಗಿ ಪ್ರಯತ್ನ ಮಾಡುತ್ತಲೇ ಇದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಪ್ರತಿನಿತ್ಯ 621 ಬಸ್ ಗಳು ನಾನಾ ಶೆಡ್ಯೂಲ್ ಗಳಲ್ಲಿ ರೂಟ್ ನಲ್ಲಿ ಸಂಚಾರ ಮಾಡುತ್ತವೆ. ಪ್ರತಿನಿತ್ಯ ರೂ. 65 ರಿಂದ ರೂ. 70 ಲಕ್ಷ ಆದಾಯ ಬರುತ್ತದೆ. ಮೊದಲ ದಿನ ರಾಜ್ಯಾದ್ಯಂತ ಬಸ್ ಮುಷ್ಕರವಿದ್ದರೂ ಸಮನ್ವಯತೆ ಸಾಧಿಸಿ ವಿಜಯಪುರ ಜಿಲ್ಲೆಯಲ್ಲಿ ಶೇ. 70 ರಷ್ಟು ಬಸ್ಸುಗಳನ್ನು ಓಡಿಸಿದ್ದರು. ಇದರಿಂದಾಗಿ ಇಲಾಖೆಗೆ ಸಾಕಷ್ಟು ಆದಾಯವೂ ಬಂದಿತ್ತು. ಎರಡನೇ ದಿನವೂ ಕೂಡ ಮುಷ್ಕರದ ಹೊರತಾಗಿಯೂ ಬಸ್ ಓಡಿಸಿ ಇಲಾಖೆಗೆ ಸುಮಾರು ರೂ. 16 ಲಕ್ಷ ಆದಾಯ ತಂದಿದ್ದಾರೆ. ಮೂರನೇ ದಿನವೂ ಅಷ್ಟೇ ಹಗಲು ಹೊತ್ತಿನಲ್ಲಿ ಮತ್ತು ರಾತ್ರಿ ಹೊತ್ತಿನಲ್ಲಿ ತಲಾ 20 ರಂತೆ 40 ಬಸ್ಸುಗಳನ್ನು ಓಡಿಸಿ ಪ್ರಯಾಣಿಕರಲ್ಲಿ ಕೊಂಚ ಮಟ್ಟಿಗೆ ನೆಮ್ಮದಿ ತಂದಿದ್ದರು. ಅಲ್ಲದೇ, ನೌಕರರ ಯೂನಿಯನ್ ಗಳ ಜೊತೆ ಸತತವಾಗಿ ಸಂಪರ್ಕ ಹೊಂದಿ ಸಭೆಗಳನ್ನು ನಡೆಸುವ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗದಂತೆ ಕ್ರಮ ಕೈಗೊಂಡಿದ್ದರು.
ಇದನ್ನೂ ಓದಿ: ಯೋಗೇಶ್ ಗೌಡ ಹತ್ಯೆ ಪ್ರಕರಣ: ಕೊಲೆ ಆರೋಪಿಯನ್ನೇ ಮುಗಿಸಲು ಸ್ಕೆಚ್ ಹಾಕಿದ್ರಾ ಮಾಜಿ ಸಚಿವರ ತಂಡ?
ಇಂದು ಬೆಳಿಗ್ಗೆಯೂ ಅಷ್ಟೇ, ಡಿಪೋ ಮ್ಯಾನೇಜರ್, ಡಿಟಿಓ ಮತ್ತು ಇತರ ಅಧಿಕಾರಿಗಳೊಂದಿಗೆ ಸ್ವತಃ ಫಿಲ್ಡಿಗಿಳಿದ ನಾರಾಯಣಪ್ಪ ಕುರುಬರ ಅವರು ಬಸ್ಸುಗಳನ್ನು ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಿಗ್ಗೆ ಸುಮಾರು 8 ಬಸ್ಸುಗಳು ಮಹಾರಾಷ್ಟ್ರದ ಔರಂಗಾಬಾದ್, ಸೋಲಾಪುರ, ಆಂಧ್ರ ಪ್ರದೇಶದ ಶ್ರೀಶೈಲಂ, ಸಿಂದಗಿ ಸೇರಿದಂತೆ ನಾನಾ ಕಡೆ ಪ್ರಯಾಣ ಬೆಳೆಸಿವೆ. ಈ ಮೂಲಕ ಸಿಬ್ಬಂದಿಯೂ ಒಬ್ಬೊಬ್ಬರಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಆಸ್ಥೆ ವಹಿಸಿದ್ದಾರೆ.
ಇದೀಗ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮತ್ತು ಸೆಟಲೈಟ್ ಬಸ್ ನಿಲ್ದಾಣಗಳಿಗೆ ಪ್ರಯಾಣಿಕರೂ ನಿಧಾನವಾಗಿ ಬರತೊಡಗಿದ್ದು, ಬಸ್ಸುಗಳೂ ಒಂದೊಂದಾಗಿ ಸಂಚಾರ ಆರಂಭಿಸುತ್ತಿವೆ. ನಿನ್ನೆ ಮೊಕ್ಕಾಂ ಹೋಗಿದ್ದ ಬಸ್ಸುಗಳು ನಾನಾ ಗ್ರಾಮಗಳಿಂದ ವಾಪಸ್ ಬಂದಿವೆ. ವಿಜಯಪುರ ನಗರದಲ್ಲಿ ಸಿಟಿ ಬಸ್ ಕೂಡ ಒಂದೊಂದಾಗಿ ಆರಂಭವಾಗಿವೆ. ಜನರೂ ಕೂಡ ಬಸ್ಸುಗಳಲ್ಲಿ ಸಂಚರಿಸಲು ಉತ್ಸುಕರಾಗಿದ್ದಾರೆ.
ನಿನ್ನೆ ನೌಕರರ ಸಂಘದ ಪದಾಧಿಕಾರಿಗಳು ಸಚಿವರೊಂದಿಗೆ ಸಭೆ ನಡೆಸಿ ಮುಷ್ಕರ ಅಂತ್ಯಗೊಳಿಸುವ ಬಗ್ಗೆ ಖಚಿತವಾದ ಹಿನ್ನೆಲೆಯಲ್ಲಿ ಸಂಜೆ 7 ರಿಂದ 8 ಗಂಟೆಯ ಅವಧಿಯಲ್ಲಿ ಸಾಕಷ್ಟು ಜನ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅಲ್ಲದೇ, ವಿಜಯಪುರ ಜಿಲ್ಲೆಯ ನಾನಾ ಬಸ್ ನಿಲ್ದಾಣಗಳಿಂದ 8 ಬಸ್ಸುಗಳೂ ಸಂಚಾರ ಆರಂಭಿಸಿದ್ದವು. ಹೊಸಪೇಟೆ ಮತ್ತು ಬಳ್ಳಾರಿಗಳಿಂದ ಬಂದಿದ್ದ ಬಸ್ಸುಗಳು ಕೂಡ ಮರಳಿ ಹೊಸಪೇಟೆ ಮತ್ತು ಬಳ್ಳಾರಿಗೆ ತೆರಳಿದ್ದವು. ಅಲ್ಲದೇ, ಮಹಾರಾಷ್ಟ್ರದ ಉಸ್ಮಾನಾಬಾದ್ನಿಂದ ಬಂದಿದ್ದ ಬಸ್ಸು ಬೆಂಗಳೂರಿಗೆ ಪ್ರಯಾಣ ಬೆಳೆಸಿತ್ತು. ರಾತ್ರಿ 10.15ಕ್ಕೆ ಹೈದರಾಬಾದಿಗೂ ಬಸ್ ಹೋಗಿತ್ತು.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರದ ಹಿಂದೆ ಕಾಣದ ಶಕ್ತಿಗಳ ಷಡ್ಯಂತ್ರ; ಕಾರ್ಮಿಕರನ್ನು ದಿಕ್ಕು ತಪ್ಪಿಸುವವರ ವಿರುದ್ಧ ಅಶ್ವತ್ಹನಾರಾಯಣ ಕಿಡಿ
ಆದರೆ, ರಾತ್ರಿ ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕಿನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಮುಷ್ಕರ ಮುಂದುವರೆಯಲಿದೆ ಎಂದು ಹೇಳಿದ್ದರಿಂದ ಗೊಂದಲ ಉಂಟಾಗಿ ಸಿಬ್ಬಂದಿ ಮತ್ತೆ ಮರಳಿ ಮನೆಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಆದರೂ, ವಿಜಯಪುರ ಈಶಾನ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಮ್ಮ ಸಿಬ್ಬಂದಿ ಮನವೊಲಿಸಿ ನಿಧಾನವಾಗಿ ಒಂದೊಂದೆ ಬಸ್ಸುಗಳನ್ನು ನಾನಾ ಊರುಗಳಿಗೆ ಸೇವೆ ಆರಂಭಿಸುವ ಮೂಲಕ ಪ್ರಯಾಣಿಕರ ತೊಂದರೆಯನ್ನು ತಪ್ಪಿಸಲು ಶತಪ್ರಯತ್ನ ಮಾಡುತ್ತಿದ್ದಾರೆ.
ಈ ಮಧ್ಯೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪೊಲೀಸ್ ಭದ್ರತೆಯೊಂದಿಗೆ ಬಸ್ಸುಗಳು ಸಂಚರಿಸುತ್ತಿದ್ದರೆ, ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಬಸ್ಸುಗಳು ಯಾವುದೇ ಭದ್ರತೆ ಇಲ್ಲದೆ ಸಂಚಾರ ಆರಂಭಿಸಿರುವುದು ಮತ್ತು ಈವರೆಗೆ ಇಲ್ಲಿನ ಸಿಬ್ಬಂದಿ ಯಾವುದೇ ರೀತಿಯಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ನಡೆಸದಿರುವುದು ಇವರ ಶಾಂತಿಪ್ರಿಯತೆಗೆ ಸಾಕ್ಷಿಯಾಗಿದೆ.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ