ಕೊಪ್ಪಳದಲ್ಲಿ ನಾಳೆಯಿಂದ ಆರಂಭವಾಗಲಿದೆ ಬಸ್ ಸಂಚಾರ; ಇಡೀ ಬಸ್ ನಿಲ್ದಾಣ ಸ್ಯಾನಿಟೈಜ್
ಕೊರೋನಾ ಶೇ 5 ಕ್ಕಿಂತ ಕಡಿಮೆ ಇರುವ 16 ಜಿಲ್ಲೆಗಳಲ್ಲಿ ಬಸ್ ಸಂಚಾರಕ್ಕೆ ನಾಳೆಯಿಂದ ಅವಕಾಶ ನೀಡಲಾಗಿದೆ. ಇದರಿಂದಾಗಿ ಈಗ ಬಸ್ ನಿಲ್ದಾಣ ಹಾಗೂ ಬಸ್ ಗಳನ್ನು ಸ್ವಚ್ಛ ಮಾಡುವ ಕಾರ್ಯ ನಡೆದಿದೆ.
ಕೊಪ್ಪಳ; ಕೊರೋನಾ ಎರಡನೆಯ ಅಲೆಯು ತೀವ್ರವಾದ ಹಿನ್ನಲೆಯಲ್ಲಿ ಕಳೆದ 49 ದಿನಗಳಿಂದ ಬಂದ್ ಆಗಿದ್ದ ಬಸ್ ಗಳು ನಾಳೆಯಿಂದ ಆರಂಭವಾಗುತ್ತಿವೆ. ಕೊರೋನಾ ಶೇ 5 ಕ್ಕಿಂತ ಕಡಿಮೆ ಇರುವ 16 ಜಿಲ್ಲೆಗಳಲ್ಲಿ ಬಸ್ ಸಂಚಾರಕ್ಕೆ ನಾಳೆಯಿಂದ ಅವಕಾಶ ನೀಡಲಾಗಿದೆ. ಇದರಿಂದಾಗಿ ಈಗ ಬಸ್ ನಿಲ್ದಾಣ ಹಾಗೂ ಬಸ್ ಗಳನ್ನು ಸ್ವಚ್ಛ ಮಾಡುವ ಕಾರ್ಯ ನಡೆದಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಐದು ಡಿಪೋಗಳಲ್ಲಿ 410 ಬಸ್ ಗಳ ಮಾರ್ಗವಿದ್ದು ಅದರಲ್ಲಿ ನಾಳೆ 150 ಬಸ್ ಗಳು ಓಡಾಟ ಆರಂಭಿಸಲಿವೆ, ಕೊಪ್ಪಳ, ಕುಕನೂರು,ಯಲಬುರ್ಗಾ, ಕುಷ್ಟಗಿ ಹಾಗು ಗಂಗಾವತಿ ಡಿಪೋಗಳಿಂದ ಮುಂಜಾನೆಯಿಂದಲೇ ಬಸ್ ಸೇವೆ ಆರಂಭವಾಗಲಿವೆ. ಬಸ್ ನಲ್ಲಿ ಸಂಚರಿಸುವವರಿಗೆ ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್ ಹಾಕಲಾಗುವುದು, ಸಮಾಜಿಕ ಅಂತರದಲ್ಲಿ ಪ್ರಯಾಣಿಸಲು ಕಳೆದ ಬಾರಿಯೇ ಸೀಟುಗಳಿಗೆ ಮಾರ್ಕ ಹಾಕಲಾಗಿದೆ. ಇದೇ ಮಾರ್ಕ್ ಆಧಾರದಲ್ಲಿ ಜನರನ್ನು ಕುಳ್ಳಿರಸಲಾಗುವುದು, ಬಸ್ ಗಳ ಏರಲು, ಬಸ್ ನಿಲ್ದಾಣದಲ್ಲಿ ಸಮಾಜಿಕ ಅಂತರಕ್ಕಾಗಿ ಹಿಂದೆಯೇ ಮಾಡಿದ ಮಾರ್ಕ್ ಗಳು ಈಗಲೂ ಬಳಕೆಯಾಗಲಿವೆ.
ಒಂದುವರೆ ತಿಂಗಳಿನಿಂದ ಜನರ ಓಡಾಟವಿಲ್ಲದಿದ್ದರಿಂದ ಬಸ್ ನಿಲ್ದಾಣವನ್ನು ಸ್ವಚ್ಛ ಮಾಡಿ ಸ್ಯಾನಿಟೈಸರ್ ಹಾಕಲಾಗುತ್ತಿದೆ. ಇದೇ ರೀತಿ ಬಸ್ ಗಳಿಗೂ ಸಹ ಸ್ಯಾನಿಟೈಸರ್ ಹಾಕಿ ಸ್ವಚ್ಛ ಗೊಳಿಸಲಾಗುತ್ತಿದೆ. ಜಿಲ್ಲೆಯಿಂದ ನಾಳೆ ಬಸ್ ಗಳ ಓಡಾಟ ಆರಂಭವಾದರೂ ಬೆಂಗಳೂರು, ದೂರದ ಜಿಲ್ಲೆಗಳಿಗೆ ಬಸ್ ಗಳು ಹೋಗುವುದು ಅನುಮನ ಎನ್ನಲಾಗಿದೆ. ಮುಂಜಾನೆ ಆರಂಭವಾಗಿ ರಾತ್ರಿ ವೇಳೆಗೆ ವಾಪಸ್ಸಾಗುವ ಬಸ್ ಗಳು ಮಾತ್ರ ಓಡಾಟವಿರು ವದರಿಂದ ಅತ್ಯಂತ ಕಡಿಮೆ ಬಸ್ ಗಳು ಓಡಲಿವೆ.
ಈ ಮಧ್ಯೆ ಸಾರಿಗೆ ಸಿಬ್ಬಂದಿಗಳು 2 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಇಲ್ಲವೇ ಅವರು ಮೂರು ದಿನಗಳ ಹಿಂದೆ ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿ ನೆಗಟಿವ್ ರಿಪೋರ್ಟ್ ತರಬೇಕು, ಹೀಗೆಂದು ರಸ್ತೆ ಸಾರಿಗೆ ನಿಗಮಗಳಿಂದ ಆದೇಶ ಹೊರಡಿಸಲಾಗಿದೆ. ಈ ಆದೇಶವು ನಾಳೆ ಡ್ಯೂಟಿಗೆ ಹಾಜರಾಗಲಿರುವ ಸಿಬ್ಬಂದಿಗಳಿಗೆ ತೊಡಕಾಗಿದೆ. ರಸ್ತೆ ಸಾರಿಗೆ ಸಂಸ್ಥೆಯ ಈ ನಿಯಮವು ನಾಳೆ ಡ್ರೈವರ್ ಹಾಗು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ.
ಮುಖ್ಯವಾಗಿ ನಿನ್ನೆ ಸಂಜೆ ನಿಗಮಗಳಿಂದ ಆದೇಶ ಹೊರಡಿಸಿದ್ದು ಇಂದು ಸಿಬ್ಬಂದಿಗಳು ಡ್ಯೂಟಿಗಾಗಿ ಆರ್ ಟಿಪಿಎಸ್ಆರ್ ಟೆಸ್ಟ್ ಕೊಟ್ಟರೂ ನಾಳೆಗೆ ಬರುವುದು ಅನುಮಾನ, ಇದರಿಂದಾಗಿ ನಾಳೆಗೆ ಬಹುತೇಕ ಎರಡು ಡೋಸ್ ಲಸಿಕೆ ತೆಗೆದುಕೊಂಡವರು ಮಾತ್ರ ಬರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಕೊಪ್ಪಳ ವಿಭಾಗದಯಲ್ಲಿ ಶೇ 95 ರಷ್ಟು ಸಿಬ್ಬಂದಿಗೆ ಲಸಿಕೆ ಹಾಕಿಸಿದ್ದರೂ ಆದರೆ ಬಹುತೇಕರು ಒಂದೇ ಡೋಸ್ ತೆಗೆದುಕೊಂಡವರಾಗಿದ್ದಾರೆ, ಈ ಬಗ್ಗೆ ನಿಗಮಗಳು ಬೇಗ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ 40 ಲಕ್ಷ ಆದಾಯವನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಬರುತ್ತಿತ್ತು, ಒಂದುವರೆ ತಿಂಗಳನಿಂದ ಬಸ್ ಇಲ್ಲದೆ ಇರುವದರಿಂದ ಸುಮಾರು 23 ಕೋಟಿ ರೂಪಾಯಿ ಆದಾಯಕ್ಕೆ ಖೋತಾ ಆಗಿದೆ, ನಾಳೆಯಿಂದ ಬಸ್ ಆರಂಭವಾದರೂ ಪೂರ್ಣ ಪ್ರಮಾಣದ ಆದಾಯ ಬರುವುದಿಲ್ಲ ಇದಕ್ಕೆ ಕಾರಣ ಒಂದು ಕಡೆ ಶೇ 50 ಪ್ರಯಾಣಿಕರಿಗೆ ಅವಕಾಶ ಹಾಗೂ ಡಿಸೇಲ್ ದರ ಏರಿಕೆ. ಒಟ್ಟಾರೆಯಾಗಿ ನಾಳೆಯಿಂದ ಬಸ್ ಆರಂಭವಾಗಲಿದ್ದು ಬಸ್ ಪ್ರಯಾಣಕ್ಕೆ ಜನರ ಸ್ಪಂದನೆ ಹೇಗಿರುತ್ತೊ ಕಾದು ನೋಡಬೇಕು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ