ಆರು ತಿಂಗಳ ಬಳಿಕ ಮಹಾರಾಷ್ಟ್ರಕ್ಕೆ ವಿಜಯಪುರ ಜಿಲ್ಲೆಯಿಂದ ಬಸ್ ಸಂಚಾರ ಆರಂಭ : ಗಡಿ ಜಿಲ್ಲೆಯ ಪ್ರಯಾಣಿಕರಲ್ಲಿ ಸಂತಸ

ಇಂದು ವಿಜಯಪುರ ಜಿಲ್ಲೆಯ ನಾನಾ ಭಾಗಗಳಿಂದ ಸಾಂಗಲಿ, ಮಿರಜ್​​, ಸೋಲಾಪುರ ಪ್ರದೇಶಗಳಿಗೆ ಸುಮಾರು 5 ಬಸ್​ಗಳು ಸಂಚಾರ ಆರಂಭಿಸಿವೆ. ನಾಳೆಯಿಂದ ಪುಣೆ ಮತ್ತು ಮುಂಬೈ ನಗರಗಳಿಗೆ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ

news18-kannada
Updated:September 15, 2020, 11:00 PM IST
ಆರು ತಿಂಗಳ ಬಳಿಕ ಮಹಾರಾಷ್ಟ್ರಕ್ಕೆ ವಿಜಯಪುರ ಜಿಲ್ಲೆಯಿಂದ ಬಸ್ ಸಂಚಾರ ಆರಂಭ : ಗಡಿ ಜಿಲ್ಲೆಯ ಪ್ರಯಾಣಿಕರಲ್ಲಿ ಸಂತಸ
ವಿಜಯಪುರ ಬಸ್​ ನಿಲ್ದಾಣ
  • Share this:
ವಿಜಯಪುರ(ಸೆಪ್ಟೆಂಬರ್​​. 15): ಕಳೆದ ಮಾರ್ಚ್ 23 ರಿಂದ ಮಹಾರಾಷ್ಟ್ರಕ್ಕೆ ಬಂದ್ ಆಗಿದ್ದ ಬಸ್ ಸಂಚಾರ ಇಂದಿನಿಂದ ಮತ್ತೆ ಆರಂಭವಾಗಿದೆ. ವಿಜಯಪುರ ಜಿಲ್ಲೆಗೆ ಇಂದು ಮಹಾರಾಷ್ಟ್ರದ ಔರಂಗಾಬಾದ್ ನಿಂದ ಸರಕಾರಿ ಬಸ್ ಬಂದ ತಕ್ಷಣ ಇಲ್ಲಿಂದಲೂ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಆರಂಭಿಸಲಾಗಿದೆ. ಈ ಮೂಲಕ ಈ ವರೆಗೆ ಸ್ವಂತ ವಾಹನಗಳಲ್ಲಿ ತೆರಳಲು ಕಷ್ಟ ಪಡಬೇಕಿದ್ದ ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರು ನೆಮ್ಮದಿನ ನಿಟ್ಟುಸಿರು ಬಿಟ್ಟಂತಾಗಿದೆ. ವಿಜಯಪುರದ ಜಿಲ್ಲೆಯ ನಾಲ್ಕು ತಾಲೂಕುಗಳು ಮಹಾರಾಷ್ಟ್ರದ ಗಡಿಯನ್ನು ಒಳಗೊಂಡಿವೆ. ತಿಕೋಟಾ, ವಿಜಯಪುರ, ಚಡಚಣ ಮತ್ತು ಇಂಡಿ ತಾಲೂಕುಗಳಿಗೆ ಮಹಾರಾಷ್ಟ್ರದ ಗಡಿ ಹೊಂದಿಕೊಂಡಿದ್ದು, ಈ ಭಾಗದ ಜನ ಮಹಾರಾಷ್ಟ್ರದೊಂದಿಗೆ ಮತ್ತು ಮಹಾರಾಷ್ಟ್ರದ ಜನ ಕರ್ನಾಟಕದೊಂದಿಗೆ ಒಡನಾಟ ಹೊಂದಿದ್ದಾರೆ. ಎರಡು ಭಾಗಗಳ ಜನ ಕೇವಲ ವ್ಯಾಪಾರ ವಹಿವಾಟು ಅಷ್ಟೇ ಅಲ್ಲ, ವೈವಾಹಿಕ ಸಂಬಂಧಗಳನ್ನು ಹೊಂದಿದ್ದಾರೆ. 

ಅಷ್ಟೇ ಅಲ್ಲ, ಇಲ್ಲಿನ ಜನ ಮಹಾರಾಷ್ಟ್ರದ ಮಿರಜ್​​, ಸಾಂಗಲಿ, ಸೋಲಾಪುರಗಳಿಗೆ ಚಿಕಿತ್ಸೆಗಾಗಿಯೂ ತೆರಳುತ್ತಿರುತ್ತಾರೆ. ಅತ್ತ ಮಹಾರಾಷ್ಟ್ರದ ಗಡಿಯಲ್ಲಿರುವ ಗ್ರಾಮೀಣ ಭಾಗದ ಜನ ವಿಜಯಪುರ ನಗರಕ್ಕೆ ವೈದ್ಯಕೀಯ ಸೌಲಭ್ಯಕ್ಕಾಗಿ ಆಗಮಿಸುತ್ತಿರುತ್ತಾರೆ.  ಬಹುತೇಕ ಜನರು ಬಸ್​​ನಲ್ಲಿಯೇ ಸಂಚರಿಸುವುದರಿಂದ ಈ ಸಂಬಂಧ ಮತ್ತು ವ್ಯವಹಾರಗಳು ಕಳೆದ 176 ದಿನಗಳಿಂದ ಬಹುತೇಕ ನಿಂತು ಹೋಗಿದ್ದವು.

ಇಂದು ವಿಜಯಪುರ ಜಿಲ್ಲೆಯ ನಾನಾ ಭಾಗಗಳಿಂದ ಸಾಂಗಲಿ, ಮಿರಜ್​​, ಸೋಲಾಪುರ ಪ್ರದೇಶಗಳಿಗೆ ಸುಮಾರು 5 ಬಸ್​ಗಳು ಸಂಚಾರ ಆರಂಭಿಸಿವೆ. ನಾಳೆಯಿಂದ ಪುಣೆ ಮತ್ತು ಮುಂಬೈಗಳಿಗೂ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ.

ಈಶಾನ್ಯ ಸಾರಿಗೆ ಸಂಸ್ಥೆ ಮೂಲಗಳ ಪ್ರಕಾರ ವಿಜಯಪುರ ಜಿಲ್ಲೆಯಿಂದ ಮಾರ್ಚ್​​ 23 ಕ್ಕೂ ಮುಂಚೆ ಪ್ರತಿನಿತ್ಯ 150 ನಾನಾ ಬಸ್​​ಗಳು ಸಂಚರಿಸುತ್ತಿದ್ದವು. ಸುಮಾರು 7 ಸಾವಿರ ಜನ ಪ್ರಯಾಣ ಮಾಡುತ್ತಿದ್ದರು. ಅಲ್ಲದೇ, ಪ್ರತಿನಿತ್ಯ  10 ರಿಂದ 12 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಆದರೆ, ಕಳೆದ ಸುಮಾರು 6 ತಿಂಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಈಶಾನ್ಯ ಸಾರಿಗೆ ಸಂಸ್ಥೆಗೆ ಆದಾಯವೂ ಕಡಿತವಾಗಿತ್ತು.  ಅಲ್ಲದೇ, ಜನರು ಪರದಾಡುವಂತಾಗಿತ್ತು.

ಇದನ್ನೂ ಓದಿ : ಮುಷ್ಕರ ನಿರತ ವೈದ್ಯರ ಜೊತೆಗಿನ‌ ಸರ್ಕಾರದ ಸಭೆ ವಿಫಲ ; ಶುಕ್ರವಾರ ಮತ್ತೆ ವೈದ್ಯರ ಜೊತೆ ಸಚಿವರ ಸಭೆ

ವಿಜಯಪುರ ಜಿಲ್ಲೆಯಿಂದ ಮಹಾರಾಷ್ಟ್ರದ ಪ್ರಮುಖ ಸ್ಥಳಗಳಾದ ಮಿರಜ್, ಸಾಂಗಲಿ, ಇಟಲಕರಂಜಿ, ರತ್ನಗಿರಿ,ಗುಡ್ಡಾಪುರ, ಸಾತಾರ, ಚಿಪಳೂಣ, ಸೋಲಾಪುರ, ಪುಣೆ, ಮುಂಬೈ, ಶಿರಡಿ, ತುಳಜಾಪುರ ಮುಂತಾದ ನಗರಗಳಿಗೆ ಬಸ್​​ ಗಳು ಸಂಚರಿಸುತ್ತಿದ್ದವು.
ಇಂದಿನಿಂದ ಹಂತ ಹಂತವಾಗಿ ಮತ್ತೆ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಆರಂಭವಾಗಿದ್ದು, ಉಭಯ ರಾಜ್ಯಗಳ ಬಡ ಮತ್ತು ಮಧ್ಯಮ ವರ್ಗಗಳ ಜನರಲ್ಲಿ ಸಂತಸ ಮನೆ ಮಾಡಿದೆ. ನಾಳೆಯಿಂದ ಪುಣೆ, ಮುಂಬೈ ಮುಂತಾದ ನಗರಗಳಿಗೆ ಬಸ್ ಸಂಚಾರ ಆರಂಭವಾಗುವ ನಿರೀಕ್ಷೆಯಿದ್ದು, ಪ್ರಾಯಾಣಿಕರ ಸಂಖ್ಯೆ ಹೆಚ್ಚಾದಂತೆ ಬಸ್​ಗಳ ಸಂಖ್ಯೆಯನ್ನು ಹೆಚ್ಚಿಸಲು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿರ್ಧರಿಸಿದೆ ಎಂದು ಮೂಲಗಳು ನ್ಯೂಸ್ 18 ಕನ್ನಡಕ್ಕೆ ತಿಳಿಸಿವೆ.
Published by: G Hareeshkumar
First published: September 15, 2020, 10:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading