ಬಿಟಿಡಿಎಯಲ್ಲಿ ಹಿಂದಿನ ಅಧಿಕಾರಾವಧಿಯಲ್ಲಿ ಅವ್ಯವಹಾರ: ಮಾಜಿ ಸಚಿವ ಮೇಟಿ ವಿರುದ್ಧ ಚರಂತಿಮಠ ಆರೋಪ

ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಹೆಚ್.ವೈ. ಮೇಟಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಿಟಿಡಿಎಯಲ್ಲಿ ಅಕ್ರಮಗಳು ನಡೆದಿವೆ ಎಂದು ಹಾಲಿ ಅಧ್ಯಕ್ಷ ವೀರಣ್ಣ ಚರಂತಿಮಠ ಆರೋಪ ಮಾಡಿದ್ದಾರೆ.

ವೀರಣ್ಣ ಚರಂತಿಮಠ (ಎಡಗಡೆ)

ವೀರಣ್ಣ ಚರಂತಿಮಠ (ಎಡಗಡೆ)

  • Share this:
ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧಿಕಾರವಧಿಯಲ್ಲಿ ಅಕ್ರಮಗಳು ನಡೆದಿವೆ. ಸೈಟ್ ಹಂಚಿಕೆ ಗೊಂದಲ, ಬಾಡಿಗೆ ಅಂಗಡಿಗಳನ್ನು ಬೇಕಾಬಿಟ್ಟಿ ಹಂಚಿದ್ದು, ಅದಕ್ಕೆ ಬಾಡಿಗೆ ಪತ್ರಗಳು ಇಲ್ಲ. ಸಾಕಷ್ಟು ಅವ್ಯವಹಾರ ಮಾಡಿದ್ದಾರೆ. ಅದಕ್ಕೆ ಕಡಿವಾಣ ಹಾಕಲು ಈಗಾಗಲೇ ಅಂತಹ ಅಧಿಕಾರಗಳನ್ನು ಎತ್ತಂಗಡಿ ಮಾಡಲಾಗಿದೆ ಎಂದು ಬಿಟಿಡಿಎ ಅಧ್ಯಕ್ಷ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಆರೋಪಿಸಿದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ 136ನೇ ಬೋರ್ಡ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಹಿಂದಿನ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್ ವೈ ಮೇಟಿ ವಿರುದ್ಧ ಹರಿಹಾಯ್ದರು.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾಧಿತಗೊಳಗಾಗುವ ಆರ್.ಎಲ್ 523 ರಿಂದ 525 ಮೀಟರ್​ವರೆಗಿನ ಯುನಿಟ್-3ರ ನಿರ್ಮಾಣದ ನೀಲನಕ್ಷೆ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲಿಯೇ ಅನುಮೋದನೆ ದೊರೆಯಲಿದೆ. ಬಿಟಿಡಿಎಗೆ ಯಾವುದೇ ಹಣಕಾಸಿನ ಕೊರತೆಯಿಲ್ಲ. ಈಗಾಗಲೇ ರಾಜ್ಯ ಸರ್ಕಾರಕ್ಕೆ 400ಕೋಟಿ ಬೇಡಿಕೆ ಕೊಟ್ಟಿದ್ದೇವೆ. ಈಗ ಕೊರಾನಾದಿಂದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ‌. ಆರ್ಥಿಕ ಪರಿಸ್ಥಿತಿ ಸುಧಾರಣೆ ಆದಂತೆ ಹಂತಹಂತವಾಗಿ ಅನುದಾನ ಬರಲಿದೆ. ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಕ್ಕೆ ಕೇಳಲಾದ ಅನುದಾನದಲ್ಲಿ 80 ಕೋಟಿ ಬಂದಿದೆ ಎಂದ್ರು.

ಇದನ್ನೂ ಓದಿ: ಬಯಲು ಶೌಚಕ್ಕೆ ಹೋದವರಿಗೆ ಹೂವಿನ ಹಾರ!; ವಿಜಯಪುರದಲ್ಲಿ ವಿನೂತನ ಅಭಿಯಾನ

ಯುನಿಟ್-3ರ ವ್ಯಾಪ್ತಿಯಲ್ಲಿ ಕೈಗೊಂಡ ಸಮೀಕ್ಷೆಯನ್ವಯ 2421 ಮಾಲಿಕರು ಹಾಗೂ 1163 ಬಾಡಿಗೆದಾರು ಸಂತ್ರಸ್ತರಾಗಿದ್ದು, ಈ ವ್ಯಾಪ್ತಿಯ ಸಂತ್ರಸ್ತರಿಗೆ ನವನಗರದ ಯುನಿಟ್-3ರಲ್ಲಿ ಪುನರ್ವಸತಿ ಕಲ್ಪಿಸಲು ಕಟ್ಟಡಗಳ ಸ್ವಾಧೀನ ಐತೀರ್ಪು ಆಗಿದ್ದು, ಪರಿಹಾರಧನ ಪಾವತಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಬರುವ ಸಂತ್ರಸ್ತರ ಪುನರ್ವಸತಿಗಾಗಿ 1640 ಎಕರೆ ಜಮೀನು ಬಾಗಲಕೋಟೆ ಮುಚಖಂಡಿ ತಾಂಡಾ ಹಾಗೂ ಸಿಗಿಕೇರಿ ಗ್ರಾಮಗಳಲ್ಲಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಈಗಾಗಲೇ 1224.05 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಉಳಿದ ಜಮೀನಿನ ಮಾಲಿಕರು ನ್ಯಾಯಾಲಯದಿಂದ ಸ್ವಾಧೀನ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದು, ಇಂತಹ ಜಮೀನುಗಳನ್ನು ನ್ಯಾಯಾಲಯದ ತೀರ್ಮಾನದ ನಂತರ ಕ್ರಮ ಕೈಗೊಳ್ಳಲಾಗುತ್ತಿದೆ. ಇವೆಲ್ಲವನ್ನೂ ಸೇರಿ ನೀಲನಕ್ಷೆ ತಯಾರಿಸಿದ್ದ, ಅನುಮೋದನೆ ನಂತರ ನಿರ್ಮಾಣ ಕಾರ್ಯಕೈಗೊಳ್ಳಲಾಗುವುದೆಂದು ತಿಳಿಸಿದರು.

ಯುನಿಟ್-3ರನ್ನು 300 ರಿಂದ 500 ಎಕರೆಗೆ 1 ಬ್ಲಾಕ್‍ದಂತೆ ಆಧುನಿಕ ಮಾದರಿಯ 5 ಬ್ಲಾಕ್‍ಗಳನ್ನೊಳಗೊಂಡ ಲೇಔಟ್ ಪ್ಲ್ಯಾನ್ ತಯಾರಿಸಿದ್ದು, ನಗರ ಯೋಜನಾ ಇಲಾಖೆಗೆ ಅನುಮೋದನೆಗೆ ಸಲ್ಲಿಸಲಾಗಿದೆ. ಅದು ಅನುಮೋದನೆ ಹಂತದಲ್ಲಿದ್ದು, 12.27 ಕೋಟಿ ರೂ. ಶುಲ್ಕ ಪಾತಿಸಿಗೆ ನಗರ ಯೋಜನಾ ಪ್ರಾಧಿಕಾರವು ತಿಳಿಸಿದ್ದು, ಈ ಶುಲ್ಕಕ್ಕೆ ವಿನಾಯಿತಿ ಕೋರಿ ಜಲಸಂಪನ್ಮೂಲ ಇಲಾಖೆ ಮುಖಾಂತರ ನಗರಾಭಿವೃದ್ದಿ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಸದರಿ ಪ್ರಸ್ತಾವನೆ ಪರಿಗಣಿಸಿ ಶುಲ್ಕ ವಿನಾಯಿತಿ ನೀಡಿದ್ದು, ಈಗ 9.45 ಕೋಟಿ ರೂ. ಪಾವತಿಸಲಾಗಿದೆ. ಯುನಿಟ್-3ರ ನೀಲನಕ್ಷೆಗೆ ಶೀಘ್ರವೇ ಅನುಮೋದನೆ ದೊರೆಯಲಿದೆ. ಸೈಟ್ ಬದಲಾವಣೆಗೆ ದೊಡ್ಡ ಸ್ಕ್ಯಾಂಡಲ್ ನಡೆದಿದೆ. ಬಡವರಿಗೆ ಎಲ್ಲೋ ಒಂದೆಡೆ ಜಾಗ ಕೊಟ್ಟು ಬಿಡುತ್ತಾರೆ. ತಮಗೆ ಬೇಕಾದವರಿಗೆ ಹಣ ಪಡೆದು ಒಳ್ಳೆಯ ಸೈಟ್ ಕೊಡುವುದು ನಡೆಯುತ್ತಿತ್ತು. ಅಂತಹದಕ್ಕೆ ತಡೆಹಿಡಿಲಾಗಿದ್ದು, ಅದರಲ್ಲಿ ಭಾಗಿಯಾದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ಏಜೆಂಟ್​ಗಳಿಲ್ಲದೆ ಕೆಲಸವಾಗುತ್ತಿಲ್ಲ ಎನ್ನುವ ದೂರುಗಳಿದ್ದವು. ಅದಕ್ಕೂ ಕಡಿವಾಣ ಹಾಕಲಾಗಿದೆ ಎಂದರು.

ಇದನ್ನೂ ಓದಿ: Ragini Dwivedi - ರಾಗಿಣಿ ವಿರುದ್ಧ ಕಠಿಣ ಸೆಕ್ಷನ್ ಅಡಿ ಪ್ರಕರಣ ದಾಖಲು; 20 ವರ್ಷ ಜೈಲುಶಿಕ್ಷೆ ಆದೀತು

ಬೋರ್ಡ್ ಸಭೆಯಲ್ಲಿ ಇದೇ ವಿಚಾರವನ್ನು ಬಿಟಿಡಿಎ ಮಾಜಿ ಅಧ್ಯಕ್ಷ ಜಿ ಎನ್ ಪಾಟೀಲ್ ಕೂಡ ಗಮನಸೆಳೆದರು. ಯುನಿಟ್-1ರ ಆರ್.ಎಲ್ 521 ಮೀಟರ್ ವ್ಯಾಪ್ತಿಯಲ್ಲಿ ಬರುವ 4585 ಯೋಜನಾ ಸಂತ್ರಸ್ತರನ್ನು ಸ್ಥಳಾಂತರಿಸಿ ನವನಗರದ ಯುನಿಟ್-1ರಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಯುನಿಟ್-1ರ ನವೀಕರಣ ಮತ್ತು ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು 133 ಕೋಟಿ ರೂ.ಗಳೊಂದಿಗೆ ನಗರಸಭೆಗೆ ಹಸ್ತಾಂತರಿಸಲಾಗಿತ್ತು, ಸರಕಾರದ ಆದೇಶದನ್ವು ಆ ಹಣವನ್ನು ಮರಳಿ ಅದರ ಮೇಲಿನ ಆಕರಿಸಿದ ಬಡ್ಡಿಯ ಸಮೇತ ಪ್ರಾಧಿಕಾರಕ್ಕೆ ಪಡೆದುಕೊಳ್ಳಲಾಗಿದೆ. ಸರಕಾರದ ಆದೇಶದನ್ವಯ 150 ಕೋಟಿ ರೂ.ಗಳಿಗೆ ಮೀರದಂತೆ ನವನಗರದ ಯುನಿಟ್-1ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಅನುಷ್ಠಾನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಯುನಿಟ್-2ರ ವ್ಯಾಪ್ತಿಯ ಸಂತ್ರಸ್ಥರ ಕುಟುಂಬಗಳನ್ನು ನವನಗರದ ಯುನಿಟ್-2ರಲ್ಲಿ ಪುನರ್ವಸತಿ ಕಲ್ಪಿಸಲು ಉದ್ದೇಶಿಸಿದ್ದು, ಬಿಟಿಡಿಎ ವ್ಯಾಪ್ತಿಯಲ್ಲಿ ಬರುವ 1333 ಎಕರೆ ಪ್ರದೇಶದಲ್ಲಿ ಈಗಾಗಲೇ 53 ಸೆಕ್ಟರ್‍ಗಳನ್ನು ಗುರುತಿಸಿದ್ದು, ಅದಕ್ಕೆ 42 ಸೆಕ್ಟರ್‍ಗಳನ್ನು ವಸತಿಗಾಗಿ, 6 ಸೆಕ್ಟರ್‍ಗಳನ್ನು ಸರಕಾರಿ, ಅರೆ ಸರಕಾರಿ, ಸಂಸ್ಥೆಗಳು ಇತ್ಯಾದಿಗಳಿಗೆ ಮೀಸಲಿಡಲಾಗಿದೆ. 36 ವಸತಿ ಸೆಕ್ಟರ್​ಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಮಳೆ ನೀರು ಚರಂಡಿ, ನೀರು ಸರಬರಾಜು, ಒಳಚರಂಡಿ, ವಿದ್ಯುದೀಕರಣ ಅಭಿವೃದ್ದಿ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ ಎಂದು ತಿಳಿಸಿದರು. ಇದೇ ವೇಳೆ, ಸಂತ್ರಸ್ತರಿಗೆ ಹಕ್ಕುಪತ್ರ ಹಂಚಿಕೆ ಮಾಡಲಾಯಿತು.

ಇದನ್ನೂ ಓದಿ: ತುಮಕೂರಿನಲ್ಲಿ ಕಳಪೆ ರಸ್ತೆ ಕಾಮಗಾರಿ;  4 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ನಾಲ್ಕೇ ತಿಂಗಳಲ್ಲಿ ಮಾಯ

ಸದಸ್ಯರಲ್ಲದವರು ಬಿಟಿಡಿಎ ಬೋರ್ಡ್ ಸಭೆಯಲ್ಲಿ ಭಾಗಿ!!

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ನಡೆದ 136ನೇ ಬೋರ್ಡ್ ಸಭೆಯಲ್ಲಿ ಬೋರ್ಡ್ ಸದಸ್ಯರಲ್ಲದವರೂ ಭಾಗಿಯಾಗಿದ್ದು ಕಂಡುಬಂದಿತು. ಬಿಜೆಪಿ ಮುಖಂಡ ಪ್ರಕಾಶ್ ತಪಶೆಟ್ಟಿ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ ಎನ್ ಪಾಟೀಲ್ ಭಾಗಿಯಾಗಿ ಸಭೆಯಲ್ಲಿ ಅಭಿಪ್ರಾಯ ಹಂಚಿಕೊಂಡರು. ಬೋರ್ಡ್ ಸದಸ್ಯರಲ್ಲದವರೂ ಸಭೆಯಲ್ಲಿ ಭಾಗಿಯಾಗೋಕೆ ಬರುತ್ತಾ ಎನ್ನುವ ಗುಸುಗುಸು ಮಾತುಗಳು ಕೇಳಿಬಂದವು.

ಮಾಜಿ ಅಧ್ಯಕ್ಷ ಜಿ ಎನ್ ಪಾಟೀಲ್, ಸೈಟ್ ಬದಲಾವಣೆಯಲ್ಲಿ ಕೆಲವು ಅಧಿಕಾರಿಗಳು ಸ್ಕ್ಯಾಂಡಲ್ ಮಾಡುತ್ತಾರೆ. ಅವರನ್ನು ಕಂಟ್ರೋಲ್ ಮಾಡುವುದು ಯಾರಿಗೂ ಸಾಧ್ಯವಾಗಿಲ್ಲ ಇದರ ಬಗ್ಗೆ ಡಿಟೇಲ್ ಆಗಿ ಚರ್ಚೆ ಆಗಬೇಕು. ತಿಪ್ಪೆ ಗುಂಡಿ ಸಾರಿಸಿ, ಅದನ್ನು ಬೋರ್ಡ್ ಸಭೆಗೆ ತಂದು ಹಚ್ಚುತ್ತಾರೆಂದು ಆರೋಪಿಸಿದರು.ಬೋರ್ಡ್ ಸಭೆಯಲ್ಲಿ ಯೂನಿಟ್ 3 ಸೈಟ್ ನಿರ್ಮಾಣ ನೀಲ ನಕ್ಷೆ, ಯೂನಿಟ್ 1, 2ರ ಅಭಿವೃದ್ಧಿ, 10 ವರ್ಷ ಸೈಟ್ ಮಾರಾಟಕ್ಕೆ ಅವಕಾಶ ಇಲ್ಲ. ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಮೊರಾರ್ಜಿ ವಸತಿ ಶಾಲೆಗೆ ತಲಾ 8 ಎಕರೆ ಜಾಗ ಉಚಿತವಾಗಿ ಕೊಡಲು ತೀರ್ಮಾನಿಸಲಾಗಿದೆ. ಒಟ್ಟಿನಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಸಂತ್ರಸ್ತರಿಗೆ ಸೂರು ಕೊಡುವ ಉದ್ದೇಶ ಹೊಂದಿದ್ದು, ಹಿಂದಿನ ಅಧಿಕಾರಾವಧಿಯಲ್ಲಿ ಆ ಉದ್ದೇಶ ಈಡೇರಿಲ್ಲ. ಈಗ ನಾವು ಪ್ರಾಮಾಣಿಕ ಪ್ರಯತ್ನ ಮಾಡಿ, ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡುತ್ತೇವೆ ಎಂದು ಸಭೆಯಲ್ಲಿ ಬಿಟಿಡಿಎ ಅಧ್ಯಕ್ಷ ವೀರಣ್ಣ ಚರಂತಿಮಠ ಸಭೆಯಲ್ಲಿ ಭರವಸೆ ನೀಡಿದರು.

ಬೋರ್ಡ್ ಸಭೆಯಲ್ಲಿ ಬಿಟಿಡಿಎ ಸದಸ್ಯರಾದ ಕುಮಾರ ಎಳ್ಳಿಗುತ್ತಿ, ಮೋಹನ ನಾಡಗೌಡ, ಶಿವಾನಂದ ಟವಳಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ನಗರಸಭೆ ಪೌರಾಯುಕ್ತರು, ಬಿಟಿಡಿಎ ಮುಖ್ಯ ಇಂಜಿನಿಯರ್ ಅಶೋಕ್ ವಾಸನದ ಸೇರಿದಂತೆ ಕೆಲವು ಅಧಿಕಾರಿಗಳು ಭಾಗಿಯಾಗಿದ್ದರು.

ವರದಿ: ರಾಚಪ್ಪ ಬಿ.
Published by:Vijayasarthy SN
First published: