ರಸ್ತೆ ಕಾಮಗಾರಿ ವಿಳಂಬ ಹಿನ್ನೆಲೆ; ಬಿಎಸ್​ಪಿ ಪಕ್ಷದಿಂದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ

ದೇವರು ವರ ಕೊಟ್ಟರು ಪೂಜಾರಿ ವರ ಕೊಡುತ್ತಿಲ್ಲ ಎನ್ನುವ ಹಾಗೆ ಅನುದಾನ ಮಂಜೂರು ಆಗಿದ್ದರೂ ಗುತ್ತಿಗೆದಾರ ಮಾತ್ರ ಇನ್ನೂ ರಸ್ತೆ ಕಾಮಗಾರಿ ಆರಂಭಿಸಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಹಾಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಆರಂಭಿಸದ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ವಹಿಸಬೇಕಿದೆ.

ಹದಗೆಟ್ಟಿರುವ ರಸ್ತೆ.

ಹದಗೆಟ್ಟಿರುವ ರಸ್ತೆ.

  • Share this:
ಆನೇಕಲ್ (ಮಾ. 18. ಗುರುವಾರ) : ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದ ಮುಖ್ಯ ರಸ್ತೆಯ ಕಾಮಗಾರಿ ವಿಳಂಬ ಆಗುತ್ತಿರುವುದನ್ನ ಖಂಡಿಸಿ ಭಾರತೀಯ ಸಮಾಜವಾದಿ ಪಕ್ಷದ ( ಬಿಎಸ್​ಪಿ) ಕಾರ್ಯಕರ್ತರು ಗುರುವಾರ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಬಿಎಸ್​ಪಿ ಪಕ್ಷದ ತಾಲೂಕು ಅಧ್ಯಕ್ಷ ವೈ ಚಿನ್ನಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಕೂಡಲೇ ರಸ್ತೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿದ್ದಾರೆ.

ಹೌದು, ಮುತ್ತಾನಲ್ಲೂರು ಮುಖ್ಯರಸ್ತೆಗೆ ಡಾಂಬರೀಕರಣಗೊಂಡು ಹತ್ತಾರು ವರ್ಷಗಳು ಕಳೆದಿವೆ. ಸದ್ಯ ಡಾಂಬರು ಮಾಯವಾಗಿ ರಸ್ತೆ ತುಂಬೆಲ್ಲ ಕಲ್ಲು ಮಣ್ಣು ತುಂಬಿದೆ. ಪ್ರತಿದಿನ ಈ ರಸ್ತೆಯಲ್ಲಿ ಓಡಾಡುವ ಗ್ರಾಮಸ್ಥರು ಧೂಳಿನಿಂದ ಹೈರಾಣಾಗಿದ್ದಾರೆ. ಮುಂಜಾನೆ ಶಾಲೆಗಳಿಗೆ ಹೋಗುವ ಮಕ್ಕಳು ಸಹ ಹದಗೆಟ್ಟ ರಸ್ತೆಯಲ್ಲಿ ಹೋಗಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗಾಗಲೇ ಮುಖ್ಯ ರಸ್ತೆಯ ಕಾಮಗಾರಿಗೆ ವಿಶೇಷ ಅನುದಾನದಡಿಯಲ್ಲಿ 1.36 ಕೋಟಿ ರೂಪಾಯಿ ಹಣ ಮಂಜೂರಾಗಿದ್ದು, ಟೆಂಡರ್ ಮತ್ತು ವರ್ಕ್ ಅರ್ಡರ್ ಸಹ ಆಗಿದೆ. ಆದರೆ ಗುತ್ತಿಗೆದಾರರು ಮಾತ್ರ ಕಾಮಗಾರಿ ಆರಂಭಿಸಿಲ್ಲ. ಯಾವ ಕಾರಣಕ್ಕೆ ಗುತ್ತಿಗೆದಾರರು ಮುಖ್ಯ ರಸ್ತೆಯ ಕಾಮಗಾರಿ ಆರಂಭಕ್ಕೆ ವಿಳಂಬ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಬಿಎಸ್​ಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಇನ್ನು ಕೇವಲ 15 ದಿನಗಳ ಒಳಗಾಗಿ ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದು, ಅಷ್ಟರೊಳಗಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು . ಇಲ್ಲವಾದರೆ ರಸ್ತೆ ಅಭಿವೃದ್ದಿಗೆ ಬಂದಿರುವ ಅನುದಾನ ವಾಪಸ್ಸು ಸರ್ಕಾರಕ್ಕೆ ಹೋಗುತ್ತದೆ.  ಹಾಗಾಗಿ ಟೆಂಡರ್ ಆಗಿರುವ ಮುಖ್ಯ ರಸ್ತೆಯ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ, ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಿಎಸ್​ಪಿ ತಾಲೂಕು ಅಧ್ಯಕ್ಷ ಚಿನ್ನಪ್ಪ ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: ಕೋವಿಡ್ 2ನೇ ಅಲೆ ನಿಯಂತ್ರಿಸಲು ಪೂರ್ವಸಿದ್ಧತೆ, ಪ್ರತಿದಿನ 3 ಲಕ್ಷ ಜನರಿಗೆ ಲಸಿಕೆ ಗುರಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಇನ್ನೂ ರಸ್ತೆ ಅಭಿವೃದ್ಧಿಯಾಗದೆ ಇರುವುದರಿಂದ ಧೂಳು ತುಂಬಿದ ರಸ್ತೆಯಲ್ಲಿ ಮಹಿಳೆಯರು ಮತ್ತು ಮಕ್ಕಳು, ವೃದ್ಧರು ಓಡಾಡಲು ಭಯಪಡುವಂತಾಗಿದೆ. ರಸ್ತೆ ಡಾಂಬರೀಕರಣಗೊಂಡು ಹಲವು ವರ್ಷಗಳೇ ಕಳೆದಿದ್ದು, ಸ್ಥಳೀಯ ಜನಪ್ರತಿನಿಧಿಗಳು ಮಾತ್ರ ರಸ್ತೆ ಅಭಿವೃದ್ಧಿಗೆ ಮನಸ್ಸು ಮಾಡುತ್ತಿಲ್ಲ. ರಾಜಕಾರಣಿಗಳು ತಮ್ಮ ಪ್ರತಿಷ್ಠೆ ಬದಿಗೊತ್ತಿ ರಸ್ತೆ ಅಭಿವೃದ್ಧಿ ಮಾಡಬೇಕು. ಇಲ್ಲವಾದರೆ ನಿತ್ಯ ಗ್ರಾಮಸ್ಥರು ಧೂಳು ತುಂಬಿದ ರಸ್ತೆಯಲ್ಲಿಯೇ ನಿತ್ಯ ಪರದಾಡಬೇಕಾಗಿದೆ. ವಾಹನ ಸವಾರರು ಕಷ್ಟಪಡಬೇಕಾಗಿದೆ. ಅಲ್ಲದೇ, ಹದಗೆಟ್ಟ ರಸ್ತೆಯಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.  ಹಾಗಾಗಿ ಅದಷ್ಟು ಶೀಘ್ರವಾಗಿ ರಸ್ತೆ ಕಾಮಗಾರಿ ಆರಂಭಿಸಬೇಕು. ಆ ಮೂಲಕ ಗ್ರಾಮಸ್ಥರಿಗೆ ಸೂಕ್ತ ಸೌಕರ್ಯ ಕಲ್ಪಿಸಬೇಕು ಎಂದು ಗ್ರಾಮದ ಮಹಿಳೆ ಪದ್ಮಮ್ಮ ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ದೇವರು ವರ ಕೊಟ್ಟರು ಪೂಜಾರಿ ವರ ಕೊಡುತ್ತಿಲ್ಲ ಎನ್ನುವ ಹಾಗೆ ಅನುದಾನ ಮಂಜೂರು ಆಗಿದ್ದರೂ ಗುತ್ತಿಗೆದಾರ ಮಾತ್ರ ಇನ್ನೂ ರಸ್ತೆ ಕಾಮಗಾರಿ ಆರಂಭಿಸಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಹಾಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಆರಂಭಿಸದ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ವಹಿಸಬೇಕಿದೆ.

  • ವರದಿ: ಆದೂರು ಚಂದ್ರು

Published by:HR Ramesh
First published: