ಕಾರವಾರ; ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿ ಇರುವ ಸಂಸದ ಅನಂತಕುಮಾರ ಹೆಗಡೆ ಅವರು ಇತ್ತೀಚೆಗೆ ಬಿಎಸ್ಎನ್ಎಲ್ ನೌಕರರನ್ನು ದೇಶದ್ರೋಹಿಗಳಿಗೆ ಹೋಲಿಸಿ ಸುದ್ದಿಯಾಗಿದ್ದರು. ಇವರ ಹೇಳಿಕೆ ಈಗ ಕಾರವಾರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿ.ಎಸ್.ಎನ್.ಎಲ್ ನೌಕರರು ದೇಶದ್ರೋಹಿಗಳು ಎಂದು ನಿಂದಿಸಿದ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಖಂಡಿಸಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಂದು ಬಿಎಸ್‌ಎನ್‌ಎಲ್ ಉದ್ಯೋಗಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಎರಡು ದಿನದ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವಾಗ ಬಿಎಸ್.ಎನ್.ಎಲ್. ನೌಕರರ ವಿರುದ್ದ ಹರಿಹಾಯ್ದಿದ್ದರು. ಬಿ.ಎಸ್.ಎನ್.ಎಲ್. ನೌಕರರು ದೇಶದ್ರೋಹಿಗಳು ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹೇಳಿಕೆ ನೀಡಿದ ಬೆನ್ನಲ್ಲೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಸದ ಹೆಗಡೆ ವಿರುದ್ದ ಆಕ್ರೋಷ ವ್ಯಕ್ತವಾಗುತ್ತಿದೆ. ಇಂದು ಕಾರವಾರ ನಗರದ ಬಿಎಸ್‌ಎನ್‌ಎಲ್ ಮುಖ್ಯ ಕಚೇರಿ ಎದುರು ಆಲ್ ಯೂನಿಯನ್ ಆ್ಯಂಡ್ ಅಸೋಸಿಯೇಷನ್ ಆಫ್ ಬಿಎಸ್ಎನ್ಎಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಅನಂತಕುಮಾರ ಹೆಗಡೆ ವಿರುದ್ಧ ಘೋಷಣೆ ಕೂಗಿದರು. ಬಿಎಸ್‌ಎನ್‌ಎಲ್ ಸಂಸ್ಥೆ ಸ್ವಂತ ಆದಾಯದ ಮೇಲೆ ಸ್ವಾವಲಂಬಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ಯಾವುದೇ ರೀತಿಯ ಹಣ ಅಥವಾ ಬಜೆಟ್‌ನಲ್ಲಿ ಹಣ ಮೀಸಲಿರಿಸಿಲ್ಲ. ಆದರೆ ಇದಾವುದನ್ನೂ ತಿಳಿಯದ ಅನಂತಕುಮಾರ ಹೆಗಡೆ ಅಸಂಬದ್ಧ ಹಾಗೂ ಉದ್ರೇಕಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅನಂತಕುಮಾರ ಹೆಗಡೆ ಹೇಳಿಕೆಯನ್ನು ನಾವು ಸಹಿಸಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರ ಕೇವಲ ಕಾಗದದ ಮೇಲೆ 4G ಸಂಪರ್ಕ ನೀಡಿದೆ. ಆದರೆ ಕಳೆದ ಐದು ವರ್ಷದಲ್ಲಿ 285 ಪ್ರಶ್ನೆಗಳನ್ನು ಸಂಸತ್‌ನಲ್ಲಿ ಕೇಳಿರುವ ಅನಂತಕುಮಾರ ಒಂದು ಪ್ರಶ್ನೆಯನ್ನೂ ಬಿಎಸ್‌ಎನ್‌ಎಲ್ ಬಗ್ಗೆ ಕೇಳಿಲ್ಲ. ಇದೀಗ ಬಿಎಸ್‌ಎನ್‌ಎಲ್ ನೌಕರರು ದೇಶದ್ರೋಹಿಗಳು ಎಂದು ಆರೋಪಿಸಿ ಸಂಸ್ಥೆಯನ್ನು ಮುಚ್ಚಿಸುವುದಾಗಿ ಹೇಳಿರುವುದು ಖಂಡನೀಯ. ಕೂಡಲೇ ಅವರು ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: ‘ಬಿಎಸ್ಎನ್ಎಲ್ ಸಂಸ್ಥೆಯ ನೌಕರರು ದೇಶದ್ರೋಹಿಗಳು‘ - ಸಂಸದ ಅನಂತಕುಮಾರ್ ಹೆಗಡೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ