ಬಿಎಸ್​ಎನ್​ಎಲ್​, ಅಂಚೆ ಕಚೇರಿ ಸಾರ್ವಜನಿಕರಿಗೆ ಉತ್ತಮ ಸೇವೆ ಕಲ್ಪಿಸಲಿ: ಸಂಸದ ಪ್ರಜ್ವಲ್ ರೇವಣ್ಣ

ಎರಡು ದಿನ ದಿಶಾ ಸಭೆಯಲ್ಲಿ ಬಹಳಷ್ಟು ವಿಚಾರಗಳು ಚರ್ಚೆಯಾಗಿವೆ. ಸಭೆಯಲ್ಲಿ ಚರ್ಚಿಸಲಾದ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಜಿಲ್ಲಾಧಿಕಾರಿಯವರು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು ಹಾಗೂ ಸಂಬಂದಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

ಹಾಸನ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ.

ಹಾಸನ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ.

  • Share this:
ಹಾಸನ; ಬಿ.ಎಸ್.ಎನ್.ಎಲ್ ಮತ್ತು ಅಂಚೆ ಕಚೇರಿಯಲ್ಲಿ  ಸಾರ್ವಜನಿಕರಿಗೆ ಉತ್ತಮ ಸೇವೆ  ಒದಗಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ. ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಮುಂದುವರೆದ ದಿಶಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳು ಇಂದಿಗೂ ಬಿ.ಎಸ್.ಎನ್.ಎಲ್ ನೆಟ್ ವರ್ಕ್ ಬಳಕೆ ಮಾಡುತ್ತಿದ್ದು, ಸೂಕ್ತ ನಿರ್ವಹಣೆ ಹಾಗೂ ಉತ್ತಮ ಸೇವಾ ಸೌಲಭ್ಯ ಒದಗಿಸದ ಕಾರಣ ಕಚೇರಿಗಳು ಕಾರ್ಯನಿರ್ವಹಿಸಲು ತೊಂದರೆಯಾಗುತ್ತಿದೆ ಎಂದರು.

ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ, ಸಾರ್ವಜನಿಕರು ಪಡಿತರ ಪಡೆಯಲೂ ಸಹ ನೆಟ್ ವರ್ಕ್ ಸಮಸ್ಯೆಯಿಂದ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ, ತಹಸೀಲ್ದಾರ್ ಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್ ನೆಟ್‍ವರ್ಕ್ ಸಮಸ್ಯೆಯಾಗುತ್ತಿರುವ ಬಗ್ಗೆ ನಿರ್ದಿಷ್ಟ ಸ್ಥಳಗಳ ಕುರಿತು ವರದಿ ನೀಡಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಹಲವು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನತೆಗೆ ಅನುಕೂಲವಾಗುವಂತೆ ಅಂಚೆ ಕಚೇರಿ ತೆರೆಯುವ ಅಗತ್ಯವಿದೆ ಎಂದ ಪ್ರಜ್ವಲ್ ರೇವಣ್ಣ ಅವರು, ಈ ನಿಟ್ಟಿನಲ್ಲಿ ಹೊಸ ಅಂಚೆ ಕಚೇರಿ ತೆರೆಯಲು ಕ್ರಮವಹಿಸುವಂತೆ ತಿಳಿಸಿ, ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಜೊತೆಗೆ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹಾಗೂ ಇತರೆ ಸೌಲಭ್ಯಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ನೀಡಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಿವಮೊಗ್ಗ ಹಾಗೂ ತುಮಕೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಅವರು ಆಪಾದಿಸಿದರು. ಪ್ರಜ್ವಲ್ ರೇವಣ್ಣ ಅವರು ಮಾತನಾಡಿ, ಜಿಲ್ಲಾಧಿಕಾರಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಲಾಗುವುದು. ಕಾಮಗಾರಿಯಲ್ಲಿ ಯಾವುದೇ ಲೋಪಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಅರಸೀಕೆರೆ ವ್ಯಾಪ್ತಿಯ ರಿಂಗ್ ರಸ್ತೆಗಳಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಆದಷ್ಟು ಬೇಗ ರಸ್ತೆ ದುರಸ್ತಿಯಾಗದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕಠಿಣ ಹೋರಾಟ ಮಾಡಲಾಗುವುದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.  ಶಾಸಕರಾದ ಹೆಚ್.ಡಿ ರೇವಣ್ಣ ಮಾತನಾಡಿ, ಹಾಸನದಿಂದ ಬೇಲೂರು ಮಾರ್ಗವಾಗಿ ಕಡೂರು ಸೇರುವ ರೈಲ್ವೆ ಸಂಪರ್ಕ ಕಾಮಗಾರಿ ಇಷ್ಟರೊಳಗೆ ಪ್ರಾರಂಭವಾಗಬೇಕಿತ್ತು, ಆದರೆ ಇದುವರೆಗೂ ಭೂ ಒತ್ತುವರಿ ಕೂಡ ಆಗಿಲ್ಲ. ಜೊತೆಗೆ ಜಿಲ್ಲೆಯಲ್ಲಿ ಸಾಕಷ್ಟು ಸರ್ಕಾರಿ ಜಾಗಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತ ಸರ್ಕಾರಿ ಜಾಗಗಳನ್ನು ಉಳಿಸಿ ಸಂರಕ್ಷಿಸುವ ಕಾರ್ಯ ಮಾಡಬೇಕು ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಅವರು ಮಾತನಾಡಿ ಜಿಲ್ಲೆಯಲ್ಲಿ ಕೆಲವೆಡೆ ಅಂಡರ್ ಪಾಸಿಂಗ್‍ಗಳನ್ನು ಮಾಡಲಾಗಿದ್ದು, ಮಳೆಗಾಲದಲ್ಲಿ ಅವು ಸಂಪೂರ್ಣವಾಗಿ ನೀರಿನಿಂದ ಮುಚ್ಚಿಹೋಗುತ್ತಿವೆ. ರೈಲ್ವೆ ಇಲಾಖೆ ಈ ಬಗ್ಗೆ ನಿಗಾ ವಹಿಸಬೇಕು ಎಂದರಲ್ಲದೆ, ಜಿಲ್ಲೆಯಲ್ಲಿ ಹಲವಾರು ಮೇಲ್ಸೇತುವೆ ಕಾಮಗಾರಿಗಳು ಆಗಬೇಕಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಆಗಬೇಕಾದ ಕಾಮಗಾರಿಗಳನ್ನು ಪಟ್ಟಿಮಾಡಿಕೊಂಡು ಇದೇ ತಿಂಗಳ 27-28 ರಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸೋಣ ಎಂದು ಶಾಸಕರುಗಳಿಗೆ ತಿಳಿಸಿದರು. ಶಾಸಕರಾದ ಕೆ.ಎಂ ಶಿವಲಿಂಗೇಗೌಡ ಅವರು ಮಾತನಾಡಿ ಅರಸೀಕೆರೆಯಲ್ಲಿ ಮೂರು ವಾರ್ಡ್ ಗಳಲ್ಲಿ ಕೊಳಚೆ ನೀರು ಬರುತ್ತಿದ್ದು, ಸಾರ್ವಜನಿಕರು ಅದನ್ನೇ ಉಪಯೋಗಿಸುವ ಪರಿಸ್ಥಿತಿ ಎದುರಾಗಿದೆ. ಆ ಪ್ರದೇಶವು ರೈಲ್ವೆ ಇಲಾಖೆಯ ಸ್ವಾಧೀನದಲ್ಲಿದ್ದು, ಅವರು ಅದನ್ನು ಶುದ್ಧೀಕರಣಗೊಳಿಸಬೇಕು ಇಲ್ಲವಾದರೆ ನಗರಸಭೆ ಮೂಲಕ ನಾವೇ ಶುದ್ಧೀಕರಣ ಮಾಡಿಸುತ್ತೇವೆ ಎಂದರು.

ರೈತರು ಟ್ರಾಕ್ಟರ್ ಖರೀದಿಸಲು ಪಡೆದ ಸಾಲದ ಕುರಿತು ಮಾತನಾಡಿದ ರೇವಣ್ಣ ಅವರು ಸಾಲಕ್ಕಿಂತ ಬಡ್ಡಿಯೇ ಹೆಚ್ಚಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಪರಿಹಾರವೇನು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಪ್ರಶ್ನೆ ಮಾಡಿದರು. ಇದೇ ವೇಳೆ ಶಾಸಕರಾದ ಎ.ಟಿ. ರಾಮಸ್ವಾಮಿ ಅವರು ಮಾತನಾಡಿ ಬ್ಯಾಂಕ್ ನಿಂದ ಪಡೆದ ಸಾಲಕ್ಕಿಂತ  ಬಡ್ಡಿ ಮೊತ್ತ ಹೆಚ್ಚಾಗಬಾರದು ಎಂಬ ನಿಯಮವಿದೆ ಎಂದರು.

ನಂತರ ಮಾತನಾಡಿದ ಪ್ರಜ್ವಲ್ ರೇವಣ್ಣ, ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಎಲ್ಲಾ ಬ್ಯಾಂಕ್‍ಗಳ ವ್ಯವಸ್ಥಾಪಕರನ್ನು ಕರೆದು ಸಭೆ ಆಯೋಜಿಸುವಂತೆ ಸೂಚಿಸಿ, ಆ ಸಭೆಯಲ್ಲಿ ಕಡ್ಡಾಯವಾಗಿ ಎಲ್ಲಾ ಬ್ಯಾಂಕುಗಳ ಮುಖ್ಯಸ್ಥರು ಹಾಜರಿರಬೇಕು ಎಂದರು.

ಸಕಲೇಶಪುರದ ಎತ್ತಿನ ಹೊಳೆ ಯೋಜನೆ ಕಾಮಗಾರಿಗೆ ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಶಾಸಕರ ಸಭೆಗೆ ಗೈರು ಹಾಜರಾಗುತ್ತಾರೆ. ಅಲ್ಲದೆ ಯಾವುದೇ ವರದಿ ನೀಡುವುದಿಲ್ಲ ಎಂದು ಶಾಸಕ ಹೆಚ್.ಕೆ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು. ಎತ್ತಿನ ಹೊಳೆ ಯೋಜನೆಯಡಿ ಸ್ವಾಧೀನಪಡಿಸಿಕೊಂಡ ಭೂಮಿಯ ಮಾಲೀಕರಿಗೆ ಪರಿಹಾರ ನೀಡಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದು ಆದಷ್ಟು ಬೇಗ ಪರಿಹಾರಧನ ಒದಗಿಸಬೇಕು ಎಂದು ಶಾಸಕರುಗಳು ಮನವಿ ಮಾಡಿದರು.

ಎತ್ತಿನಹೊಳೆ ಯೋಜನೆ ಕಾಮಗಾರಿಯಲ್ಲಿ ಟ್ರಕ್‍ಗಳು  ನಿಗದಿತ ತೂಕಕ್ಕಿಂತ ಹೆಚ್ಚು ತೂಕ  ಹಾಕಿಕೊಂಡು ಸಾಗಾಣಿಕೆ ಮಾಡುತ್ತಿವೆ. ಹಲವಾರು ನೂತನ ರಸ್ತೆಗಳು ಗುಂಡಿಬಿದ್ದಿವೆ. ಈ ಸಂಬಂಧ ದೂರು ದಾಖಲಿಸಲು ಸೂಚಿಸಿದರೂ ಸಹ ಲೋಕೋಪಯೋಗಿ ಇಲಾಖೆ ದೂರು ದಾಖಲಿಸಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಎತ್ತಿನಹೊಳೆ ಕಾಮಗಾರಿಯಲ್ಲಿ ಜಲ್ಲಿ ಹಗರಣ ಹೆಚ್ಚಾಗಿದ್ದು, ನಿಯಮದ ಪ್ರಕಾರ ಕಾಮಗಾರಿ ಸ್ಥಳದಲ್ಲಿ ದೊರೆತ ಜಲ್ಲಿಯನ್ನು ಆ ಸ್ಥಳದ ಕಾಮಗಾರಿಗೆ ಬಳಸಬೇಕು. ಆದರೆ ಬೇರೆ ಜಿಲ್ಲೆಗಳಿಗೆ ಅಕ್ರಮವಾಗಿ ರಫ್ತು ಆಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ವಿಚಾರಣೆ ನಡೆಸಬೇಕು ಎಂದು ಎಲ್ಲಾ ಶಾಸಕರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ ಎತ್ತಿನಹೊಳೆ ಕಾಮಗಾರಿಯಲ್ಲಿ ನಿಗದಿಗಿಂತ ಹೆಚ್ಚಿನ ತೂಕ ಹಾಕಿಕೊಂಡು ಟ್ರಕ್‍ಗಳು ಸಂಚರಿಸಿದರೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಓಡಾಡಿ ರಸ್ತೆ ಹಾಳಾದರೆ ಯಾರು ಹೊಣೆಗಾರರಾಗುತ್ತಾರೆ. ಮುಂದಿನ ಒಂದು ವಾರದಲ್ಲಿ ಇದನ್ನು ಸರಿಪಡಿಸಿಕೊಳ್ಳದಿದ್ದರೆ ಆರ್.ಟಿ.ಒ ಮೂಲಕ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಆಗ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಹೆಚ್ಚುವರಿ ತೂಕ ಹಾಕುವ ಟ್ರಕ್ ಗಳನ್ನು ಆರ್.ಟಿ.ಓ. ಅಧಿಕಾರಿಗಳು ನಿಲ್ಲಿಸಿ ದಂಡ ವಿಧಿಸಬೇಕು. ಆದರೆ ಅಧಿಕಾರಿಗಳು ಯಾವುದೇ ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿದರು. ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ರಸ್ತೆಗಳ  ಸಾಮರ್ಥ್ಯ ಆಧಾರಿಸಿ ನಿಗದಿತ ತೂಕ ಸಾಗಾಣಿಕೆಗೆ ಮಾತ್ರ ಪರ್ಮಿಟ್  ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಅಧಿಕ ತೂಕ ರವಾನೆ ಮಾಡುತ್ತಿದ್ದರೆ ದಂಡ ಹಾಕುವುದರ ಜೊತೆಗೆ ಸುಮೊಟೋ ಪ್ರಕರಣ ದಾಖಲಿಸುವಂತೆ  ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಹೆಚ್.ಕೆ ಕುಮಾರಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಮರಳುದಂದೆ ಯಥೇಚ್ಛವಾಗಿ ನಡೆಯುತ್ತಿದೆ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಮರಳುದಂಧೆ ಮಾಡುವವರ ಜೊತೆ ಶಾಮೀಲಾಗಿದ್ದಾರೆ ಎಂದರು.

ಇದನ್ನು ಓದಿ: ಗ್ರಾಮ ಒನ್ ಕೇಂದ್ರದ ಪ್ರಾಯೋಗಿಕ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ

ಶಾಸಕರಾದ ಹೆಚ್.ಡಿ ರೇವಣ್ಣ ಅವರು ಮಾತನಾಡಿ ಜಿಲ್ಲೆಯಲ್ಲಿ ನೀರಾವರಿ ಇಲಾಖೆಯಿಂದ ಹಲವು ವರ್ಷಗಳ ಹಿಂದೆಯೇ ಭೂ ಸ್ವಾದೀನ ಆಗಿದ್ದು ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಆದಷ್ಟು ಬೇಗ ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಎರಡು ದಿನ ದಿಶಾ ಸಭೆಯಲ್ಲಿ ಬಹಳಷ್ಟು ವಿಚಾರಗಳು ಚರ್ಚೆಯಾಗಿವೆ. ಸಭೆಯಲ್ಲಿ ಚರ್ಚಿಸಲಾದ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಜಿಲ್ಲಾಧಿಕಾರಿಯವರು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು ಹಾಗೂ ಸಂಬಂದಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

ಸಭೆಯಲ್ಲಿ ಚರ್ಚಿಸಲಾದ ಸಭಾ ನಡಾವಳಿಗಳನ್ನು ದಾಖಲೆಯಾದ ವಿಚಾರಗಳನ್ನು ಕೆ.ಡಿ.ಪಿ ಸಭೆಗೂ ಮುನ್ನ ಶಾಸಕರುಗಳಿಗೆ ನೀಡಿದರೆ ಕೆ.ಡಿ.ಪಿ ಸಭೆಯಲ್ಲಿ ಜಿಲ್ಲಾ ಮಂತ್ರಿಯವರ ಗಮನಕ್ಕೆ ತರುವ ಮೂಲಕ ಕಾರ್ಯರೂಪಕ್ಕೆ ತರಬಹುದು ಎಂದರು.

ವರದಿ - ಡಿಎಂಜಿಹಳ್ಳಿ ಅಶೋಕ್
Published by:HR Ramesh
First published: