ಬಿಆರ್ ಶೆಟ್ಟಿ ಸಾಮ್ರಾಜ್ಯ ಪತನ: ಅತಂತ್ರವಾಗಿದೆ ಬಿಆರ್​ಎಸ್ ಮಲ್ಟಿ ಸ್ಪೆಷಾಲಿಟಿ‌ ಆಸ್ಪತ್ರೆ!

ಬಿಆರ್ ಶೆಟ್ಟರು ಉಡುಪಿಯ ಹೆಮ್ಮೆಯ ಉದ್ಯಮಿಯಾಗಿದ್ದರು. ತನ್ನ ಸ್ವಂತ ಊರಿನಲ್ಲಿ ಏನಾದರೂ ಕೊಡುಗೆ ನೀಡಬೇಕು ಅನ್ನೋದು ಅವರ ಆಶಯವಾಗಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿ ಶೆಟ್ಟರ ಸಾಮ್ರಾಜ್ಯ ಕುಸಿಯುವುದರೊಂದಿಗೆ ಸರಕಾರ ಮತ್ತು ಬಿಆರ್ ಶೆಟ್ಟಿ ಇಬ್ಬರ ನಿರೀಕ್ಷೆ ಹುಸಿಯಾಗಿದೆ.

ಉಡುಪಿಯಲ್ಲಿ ನಿರ್ಮಿಸಲು ಮುಂದಾಗಿದ್ದ ಆಸ್ಪತ್ರೆ.

ಉಡುಪಿಯಲ್ಲಿ ನಿರ್ಮಿಸಲು ಮುಂದಾಗಿದ್ದ ಆಸ್ಪತ್ರೆ.

  • Share this:
ಉಡುಪಿ: ಉದ್ಯಮಿ ಬಿ ಆರ್ ಶೆಟ್ಟಿ ಉದ್ಯಮ ಸಾಮ್ರಾಜ್ಯ ಪತನದ ಹಾದಿ ಹಿಡಿದಿದೆ. ಸರಕಾರದ ಜೊತೆ ಒಪ್ಪಂದ ಮಾಡಿಕೊಂಡು ಉಡುಪಿಯಲ್ಲಿ ಆರಂಭಿಸಲು ಉದ್ದೇಶಿಸಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೆಲಸವೂ ಮೊಟಕುಗೊಂಡಿದೆ. ಖಾಸಗಿಯವರೊಂದಿಗೆ ಕೈಜೋಡಿಸಿ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ನೀಡಿದ್ದ ಸರಕಾರ ಈಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದೆ.

ಉಡುಪಿ ಜಿಲ್ಲೆಯ ಸಾಹಸಿ ಉದ್ಯಮಿ ಬಿ ಆರ್ ಶೆಟ್ಟಿ ಕೊಲ್ಲಿ ರಾಷ್ಟ್ರಗಳಲ್ಲಿ ತನ್ನ ಆರ್ಥಿಕ ಸಾಮ್ರಾಜ್ಯ ಕಟ್ಟಿರುವುದು ಒಂದು ಕುತೂಹಲಕಾರಿ ಕಥೆ! ಆದರೆ ಆರ್ಥಿಕ ಅಶಿಸ್ತಿನ ಕಾರಣಕ್ಕೆ ಶೆಟ್ಟರ ಸಾಮ್ರಾಜ್ಯ ಕುಸಿತ ಕಾಣುತ್ತಿದೆ. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ. ಕೊಲ್ಲಿಯಲ್ಲಿ ಬಿದ್ದ ಹೊಡೆತ ಹಳ್ಳಿಗೂ ತಟ್ಟಿದೆ. ಹೌದು, ತನ್ನ ತವರು ಜಿಲ್ಲೆ ಉಡುಪಿಯಲ್ಲಿ ಬಿ.ಆರ್ ಶೆಟ್ಟಿ ಅವರು ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ತಯಾರಿ ನಡೆಸಿದ್ದರು. ರಾಜ್ಯ ಸರ್ಕಾರದ ಜೊತೆ MOU ಮಾಡಿಕೊಂಡು ಸರಕಾರಿ ಭೂಮಿಯಲ್ಲಿ ಆಸ್ಪತ್ರೆಯ ಕಾಮಗಾರಿ ಆರಂಭಿಸಿದ್ದರು. ಸರಕಾರಿ ಭೂಮಿಯನ್ನು ಬಳಸಿಕೊಂಡಿದ್ದಕ್ಕೆ ಪ್ರತಿಯಾಗಿ ಒಂದು ಉಚಿತ ಹೆರಿಗೆ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಶೆಟ್ಟರ ಸಾಮ್ರಾಜ್ಯ ಪತನ ಕಾಣುತ್ತಿದ್ದಂತೆ ಹೆರಿಗೆ ಆಸ್ಪತ್ರೆಯ ಭವಿಷ್ಯ ಅತಂತ್ರವಾಗಿದೆ. ಇತ್ತ ನಿರ್ಮಾಣ ಹಂತದಲ್ಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿಯೂ ಸ್ಥಗಿತಗೊಂಡಿದೆ. ತನ್ನ ಆಸ್ತಿಯನ್ನು ಖಾಸಗಿಯವರಿಗೆ ವಹಿಸಿಕೊಟ್ಟ ಸರ್ಕಾರ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ಜನರ ಉಪಯೋಗಕ್ಕೆ ಬಳಕೆಯಾಗಬೇಕಿದ್ದ ಭೂಮಿ  ಈಗ ಪಾಳು ಬಿದ್ದಿದೆ.

ಇದನ್ನು ಓದಿ: ಕೆಆರ್​ಎಸ್ ಡ್ಯಾಂ ಮೇಲೆ ಪೊಲೀಸ್ ಜೀಪ್ ಚಲಾಯಿಸಿದ ಯುವಕ: ಜಿಪ್​ನಲ್ಲಿ ಕುಳಿತು ದೃಶ್ಯ ಸೆರೆ ಹಿಡಿದ ಪೊಲೀಸ್ ಅಧಿಕಾರಿ!

ಇಷ್ಟಕ್ಕೂ ಬಿ.ಆರ್. ಶೆಟ್ಟರ ಜೊತೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಸ್ಥಳೀಯ ನಾಗರಿಕರ ವಿರೋಧವಿತ್ತು. ಹಾಜಿ ಅಬ್ದುಲ್ಲಾ ಸಾಹೇಬ್ ಎನ್ನುವವರು ಶತಮಾನದ ಹಿಂದೆ ಬಡವರ ಉಪಯೋಗಕ್ಕಾಗಿ ಈ ಭೂಮಿಯನ್ನು ಬಿಟ್ಟುಕೊಟ್ಟಿದ್ದರು. ಅಬ್ದುಲ್ಲಾ ಸಾಹೇಬರ ಆಶಯಕ್ಕೆ ವಿರುದ್ಧವಾಗಿ ರಾಜ್ಯ ಸರಕಾರ ಈ ಭೂಮಿಯನ್ನು ಶೆಟ್ಟರಿಗೆ ವಹಿಸಿ ಕೊಟ್ಟಿತ್ತು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಲಾಭಾಂಶದಿಂದ ಉಚಿತ ಸರಕಾರಿ ಹೆರಿಗೆ ಆಸ್ಪತ್ರೆ ನಡೆಸುವ ವಾಗ್ದಾನ ಪಡೆದಿತ್ತು. ಬಿ.ಆರ್. ಶೆಟ್ಟರ ಸದ್ಯದ ಪರಿಸ್ಥಿತಿ ಕಂಡರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗುವ ಲಕ್ಷಣವಂತೂ ಕಾಣುತ್ತಿಲ್ಲ. ಇದರ ಲಾಭಾಂಶದಲ್ಲಿ ಉಚಿತ ಆಸ್ಪತ್ರೆ ನಡೆಸುವ ಸಾಧ್ಯತೆಯೂ ಇಲ್ಲ. ಮೂರು ವರ್ಷಗಳ ಹಿಂದೆ ಆರಂಭವಾದ ಈ ಉಚಿತ ಆಸ್ಪತ್ರೆಯಲ್ಲಿ ನೌಕರರ ಸಂಬಳ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಅತ್ಯಾಧುನಿಕ ಶೈಲಿಯಲ್ಲಿ ಕಟ್ಟಿರುವ ಉಚಿತ ಆಸ್ಪತ್ರೆಯ ಕಟ್ಟಡವನ್ನು ಸರಕಾರಿ ಅನುದಾನದಲ್ಲಿ ನಿರ್ವಹಣೆ ಮಾಡುವುದು ಸಾಧ್ಯವಿಲ್ಲ. ಮಹತ್ವಾಕಾಂಕ್ಷೆಯೊಂದಿಗೆ ಸರಕಾರ ಮಾಡಿಕೊಂಡ MOU ನಿಷ್ಪ್ರಯೋಜಕವಾಗುವ ಭಯ ಕಾಡುತ್ತಿದೆ.

ಬಿಆರ್ ಶೆಟ್ಟರು ಉಡುಪಿಯ ಹೆಮ್ಮೆಯ ಉದ್ಯಮಿಯಾಗಿದ್ದರು. ತನ್ನ ಸ್ವಂತ ಊರಿನಲ್ಲಿ ಏನಾದರೂ ಕೊಡುಗೆ ನೀಡಬೇಕು ಅನ್ನೋದು ಅವರ ಆಶಯವಾಗಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿ ಶೆಟ್ಟರ ಸಾಮ್ರಾಜ್ಯ ಕುಸಿಯುವುದರೊಂದಿಗೆ ಸರಕಾರ ಮತ್ತು ಬಿಆರ್ ಶೆಟ್ಟಿ ಇಬ್ಬರ ನಿರೀಕ್ಷೆ ಹುಸಿಯಾಗಿದೆ.
Published by:HR Ramesh
First published: