HOME » NEWS » District » BROOMS MADE OUT OF STRAW ARE IN DEMAND ACROSS KODAGU DISTRICT RHHSN RSK

ಕೊರೋನಾ ಸಂಕಷ್ಟದಲ್ಲೂ ಆಸರೆಯಾದ ತಾಳಿ ಕಡ್ಡಿ ಪೊರಕೆ ತಯಾರಿಕೆ

ಒಟ್ಟಿನಲ್ಲಿ ಕಾಫಿ ಹಾಗೂ ಭತ್ತದ ಒಕ್ಕಣೆ ಸಮಯದಲ್ಲಿ ಇಂತಹ ಪೊರಕೆಗಳಿಗೆ ಬೇಡಿಕೆ ಹೆಚ್ಚಿದ್ದು ಕೊರೋನಾ ಸಂಕಷ್ಟದಲ್ಲೂ ಪೊರಕೆಗಳು ಈ ಕುಟುುಂಬಗಳಿಗೆ ಆಸರೆಯಾಗಿವೆ.‌ 

news18-kannada
Updated:December 9, 2020, 9:09 PM IST
ಕೊರೋನಾ ಸಂಕಷ್ಟದಲ್ಲೂ ಆಸರೆಯಾದ ತಾಳಿ ಕಡ್ಡಿ ಪೊರಕೆ ತಯಾರಿಕೆ
ತಾಳಿ ಕಡ್ಡಿ ಪೊರಕೆ ತಯಾರಿಸುತ್ತಿರುವ ಮಹಿಳೆ
  • Share this:
ಕೊಡಗು: ಕೊರೋನಾ ಬಂದ ಬಳಿಕ ದೇಶದಲ್ಲಿ ಲಕ್ಷಾಂತರ ಜನರು ಕೂಲಿಯೂ ಇಲ್ಲದೆ ಪರದಾಡುವಂತಾಗಿದೆ. ಇದರ ನಡುವೆಯೇ ತಾಳಿಕಡ್ಡಿಗಳಿಂದ ಪೊರಕೆ ಮಾಡುವ ಕುಲಕಸುಬು ಕೋವಿಡ್ ಸಂಕಷ್ಟದಲ್ಲೂ ಆಸರೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಭತ್ತದ ಕೊಯ್ಲು ಆರಂಭವಾಯಿತು ಎಂದರೆ ಎಲ್ಲೆಡೆ ಪೊರಕೆಗಳಿಗೆ ಬೇಡಿಕೆ ಹೆಚ್ಚುತ್ತದೆ.‌ ನಾಪೋಕ್ಲು ಸಮೀಪದ ಕಣ್ವಬಲಮುರಿ ಗ್ರಾಮದ ಆದಿ ಕರ್ನಾಟಕ ಸಮುದಾಯದ 18ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳಿಂದ ಪೊರಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾ ಜೀವನ ನಡೆಸುತ್ತಿವೆ..!

ಇವರು ಮನೆ ಪೊರಕೆ, ತಾಳಿ ಪೊರಕೆ ಹಾಗೂ ಕಡ್ಡಿ ಪೊರಕೆಗಳನ್ನು ತಯಾರಿಸುತ್ತಾರೆ. ನೆರೆಯ ಕೇರಳ ರಾಜ್ಯದ ಇರಿಟ್ಟಿಯ ಬೆಟ್ಟಗಳಿಂದ ಮಕ್ಕಿ, ಕುರುಂದೋಟಿ, ತಾಳಿಕಡ್ಡಿಗಳನ್ನು ತಂದು ಕಣ್ವ ಬಲಮುರಿಯಲ್ಲಿ ಪೊರಕೆಗಳನ್ನು ಸಿದ್ಧಪಡಿಸುತ್ತಾರೆ. ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳುಗಳಲ್ಲಿ ಪೊರಕೆಗಳನ್ನು ತಯಾರಿಸುತ್ತಾರೆ. ಮೊದಲು ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದ ಇವರು, ಭತ್ತ ಕೆಲಸ ಪೂರೈಸಿದ ಬಳಿಕ ಭತ್ತವನ್ನು ರೈತರಿಂದ ಪಡೆಯುವ ಸಂಪ್ರದಾಯ ಜಾರಿಯಲ್ಲಿತ್ತಂತೆ. ಆದರೆ ಈಗ ಹಣಕ್ಕೆ ಮಾರುತ್ತಿದ್ದಾರೆ. ಒಂದು ಪೊರಕೆಗೆ 50 ರೂಪಾಯಿ ನಿಗದಿಪಡಿಸಿದ್ದಾರೆ.‌ ಹಿರಿಯರಿಂದ ಬಂದಿರುವ‌ ಕಸುಬನ್ನು ಕಾರ್ಮಿಕರು ಕಷ್ಟಪಟ್ಟು ಈಗಲೂ ಮುಂದುವರಿಸುತ್ತಿದ್ದಾರೆ.

ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಎದುರಾಗಿರುವ ಹತ್ತಾರು ಸಮಸ್ಯೆಗಳಿಂದ ಕಸುಬುದಾರರು ತಮ್ಮ ವೃತ್ತಿಯನ್ನೇ ಬಿಡುವಂತಾಗಿದೆ. ತಮ್ಮನ್ನು  ಈ ವರ್ಷ ಕೊರೋನಾ ಬಾಧಿಸಿದೆ.‌ ಬಾಡಿಗೆ ವಾಹನದ ಮೂಲಕ ಬೆಳಿಗ್ಗೆ ತೆರಳಿ ಸಂಜೆ ಹಿಂತಿರುಗಬೇಕು. ಕಾಡಿನಿಂದ ತಂದ ತಾಳಿಗಿಡಗಳನ್ನು ರಸ್ತೆ ಬದಿಯಲ್ಲಿ ಹರಡಿ ಬಿಸಿಲಿಗೆ ಒಣಗಿಸಿ ಕಟ್ಟಿ ಮಾರಾಟ ಮಾಡುವುದಕ್ಕೆ ಅಧಿಕ ಶ್ರಮ ಬೇಕಾಗುತ್ತದೆ. ಕೇರಳ ರಾಜ್ಯದ ಕಾಡಿಗೆ ಕಾರು ಬಾಡಿಗೆ ಮಾಡಿಕೊಂಡು ಹೋಗಿ ಪೊರಕೆ ಕಡ್ಡಿಗಳನ್ನು ತಂದಿದ್ದೇವೆ. ಕೊರೋನಾ ಇದ್ದುದ್ದರಿಂದ ಅಲ್ಲಿ ಉಳಿಯಲೂ ಬಿಡಲಿಲ್ಲ. ಒಂದು ಲೋಟ ನೀರನ್ನು ಕೊಡಲು ಹಿಂದೆ ಮುಂದೆ ನೋಡಿದರು. ಇಷ್ಟೆಲ್ಲ ಕಷ್ಟಪಡುವ ನಾವು ಪೊರಕೆಗೆ ಹೆಚ್ಚು ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.‌ ಆದರೂ ಗ್ರಾಹಕರು ಪೊರಕೆಯ ದರ ಕೇಳಿ ಚೌಕಾಸಿ ಮಾಡುತ್ತಾರೆ ಎಂದು ಮಹಿಳೆ ಜಾನಕಿ ಬೇಸರ ವ್ಯಕ್ತಪಡಿಸುತ್ತಾರೆ.

ಇದನ್ನು ಓದಿ: ಗೋ ಹತ್ಯೆ ನಿಷೇಧ ಮಸೂದೆಯಲ್ಲಿರುವ ಪ್ರಮುಖ ಅಂಶಗಳೇನು ಗೊತ್ತಾ?

ಹಿಂದೆ ತಾಳಿ ಗಿಡಗಳು ಎಲ್ಲೆಂದರಲ್ಲಿ ಸಿಗುತ್ತಿದ್ದವು. ಇತ್ತೀಚೆಗೆ ದೂರದ ಕಾಡಿನಿಂದ ಗಿಡಗಳನ್ನು ಕತ್ತರಿಸಿ ತರಬೇಕು. ಇದಕ್ಕೆ ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಾರೆ. ಪೂರ್ವಜರಿಂದ ಬಂದ ಕಸುಬನ್ನು ಬಿಡುವಂತಿಲ್ಲ. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಹಿಡಿಯ ಪೊರಕೆಗಳು ಲಭಿಸುತ್ತಿದ್ದು, ಹೊತ್ತುಕೊಂಡು ಹೋಗಿ ಮಾರುವುದು ಕಷ್ಟಕರವಾಗಿದೆ. ಅನಿವಾರ್ಯವಾಗಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಕಸುಬನ್ನು ಮುಂದುವರೆಸಿದ್ದೇವೆ ಎಂದು ನಿವಾಸಿ ರಮೇಶ ಅಳಲು ತೋಡಿಕೊಳ್ಳುತ್ತಾರೆ.

ಒಟ್ಟಿನಲ್ಲಿ ಕಾಫಿ ಹಾಗೂ ಭತ್ತದ ಒಕ್ಕಣೆ ಸಮಯದಲ್ಲಿ ಇಂತಹ ಪೊರಕೆಗಳಿಗೆ ಬೇಡಿಕೆ ಹೆಚ್ಚಿದ್ದು ಕೊರೋನಾ ಸಂಕಷ್ಟದಲ್ಲೂ ಪೊರಕೆಗಳು ಈ ಕುಟುುಂಬಗಳಿಗೆ ಆಸರೆಯಾಗಿವೆ.‌
Published by: HR Ramesh
First published: December 9, 2020, 9:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories