ಬಾಗಲಕೋಟೆ: ಇಟ್ಟಿಗೆ ಭಟ್ಟಿಗಳಿಂದ ಹೊರಬರುವ ಧೂಳಿನಿಂದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಗುಳೇದಗುಡ್ಡ ರೈಲ್ವೆ ಸ್ಟೇಷನ್ ಗ್ರಾಮದ ಜನರು ಹೈರಾಣಾಗಿದ್ದಾರೆ. ಇದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೊಳಪಡುವ ಗ್ರಾಮವಾಗಿದೆ. ಸುಮಾರು 80-90 ಮನೆಗಳನ್ನು ಹೊಂದಿರುವ ಈ ಗ್ರಾಮದ ಜನರದ್ದು ನಿತ್ಯವೂ ನರಕಯಾತನೆ. ಇದಕ್ಕೆ ಮುಖ್ಯ ಕಾರಣ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ನೂರಾರು ಇಟ್ಟಿಗೆ ಫ್ಯಾಕ್ಟರಿಗಳಿಂದ ನಿತ್ಯವೂ ಹೊರ ಸೂಸುವ ಸುಟ್ಟ ಮಣ್ಣಿನ ಕಣಗಳಿಂದ ಇಲ್ಲಿನ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ.
ವಿಷಕಾರಿ ಧೂಳು ಇಡೀ ಗ್ರಾಮವನ್ನೇ ಆವರಿಸಿದೆ. ಜೊತೆಗೆ ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿನ ಬೆಳೆಗಳ ಮೇಲೂ ಸುಟ್ಟ ಕಪ್ಪು ಮಣ್ಣಿನ ಕಣಗಳು ಬಿದ್ದು ಹಾನಿಯಾಗಿವೆ. ಕೇವಲ ಬೆಳೆಗಳಷ್ಟೇ ಅಲ್ಲದೇ ಮನೆಗಳಲ್ಲಿನ ಪಾತ್ರೆಗಳ ಮೇಲೂ ಧೂಳು ಆವರಿಸಿ ಜನರ ಜೀವ ಹಿಂಡುತ್ತಿದೆ. ಯಾರೂ ತಮ್ಮ ಸಮಸ್ಯೆಗಳನ್ನು ಕೇಳ್ತಿಲ್ಲ ಅಂತಿದ್ದಾರೆ ಗ್ರಾಮಸ್ಥರು. ಗುಳೇದಗುಡ್ಡ ರೈಲ್ವೆ ಸ್ಟೇಷನ್ ಗ್ರಾಮದಿಂದ ಕೆಲವಡಿ, ಗುಳೇದಗುಡ್ಡ ಪಟ್ಟಣಕ್ಕೆ ಹೋಗುವ ರಸ್ತೆ ಮಾರ್ಗದುದ್ದಕ್ಕೂ ಈ ಇಟ್ಟಿಗೆ ಫ್ಯಾಕ್ಟರಿಗಳದ್ದೇ ಕಾರುಬಾರು. ರಸ್ತೆ ಮೇಲೆಯೇ ಮಣ್ಣು ಹಾಕಿದ್ದಾರೆ. ಇವರಿಗೆ ಹೇಳುವವರಿಲ್ಲ, ಕೇಳುವರಿಲ್ಲ. ರಾಜಕೀಯ ಪ್ರಭಾವಿಗಳಿರುವವರ ಇಟ್ಟಿಗೆ ಭಟ್ಟಿಗಳಿದ್ದು, ಜಮೀನು ಲೀಸ್ ಪಡೆದು ಅನಧಿಕೃತವಾಗಿ ಇಟ್ಟಿಗೆ ಭಟ್ಟಿಗಳನ್ನು ತೆರೆಯಲಾಗಿದೆ. ನಿಯಮದ ಪ್ರಕಾರ ಕೃಷಿಯೇತರ ಜಮೀನಿನಲ್ಲಿ ಇಟ್ಟಿಗೆ ಭಟ್ಟಿಗಳನ್ನು ಹಾಕಬೇಕು. ಆದರೆ ಇಲ್ಲಿನ ಬಹುತೇಕ ಇಟ್ಟಿಗೆ ಭಟ್ಟಿಗಳು ಕೃಷಿ ಜಮೀನಿನಲ್ಲಿವೆ. ಅರಣ್ಯ ಭೂಮಿ ಒತ್ತುವರಿ ಮಾಡಿ ಇಟ್ಟಿಗೆ ಭಟ್ಟಿಗಳನ್ನು ನಡೆಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.
ಇನ್ನು, ಹಗಲಿರುಳು ಇಟ್ಟಿಗೆ ಫ್ಯಾಕ್ಟರಿಗಳಲ್ಲಿ ಕೆಲಸ ನಡೆಯುತ್ತಿರುವ ಕಾರಣ ಇಟ್ಟಿಗೆ ತಯಾರಿಸುವಾಗ ಹೊರ ಸೂಸುವ ಮಣ್ಣಿನ ಕಣಗಳು ಇಡೀ ಊರಿಗೆ ಊರನ್ನೇ ನುಂಗಿ ಹಾಕಿವೆ. ರಸ್ತೆಯಲ್ಲಿ ಹೊರಟರೆ ಸಾಕು ಧೂಳು ಆವರಿಸಿಕೊಂಡು ಸರಿಯಾಗಿ ರಸ್ತೆಯೇ ಕಣ್ಣಿಗೆ ಕಾಣುವುದಿಲ್ಲ. ಇಟ್ಟಿಗೆ ಭಟ್ಟಿಗಳಲ್ಲಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ಕಣ್ಣಿದ್ದೂ ಕುರುಡಾಗಿದ್ದಾರೆ. ಧೂಳಿನ ಕಣಗಳು ಕ್ರಮೇಣವಾಗಿ ಜನರ ದೇಹ ಸೇರುತ್ತಿದೆ. ಇದರಿಂದ ಸ್ಥಳೀಯರು ನಾನಾ ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ನಮ್ಮನ್ನು ಮುಕ್ತಿಗೊಳಿಸಿ ಎಂದು ಜನರು ಗೋಗರೆಯುತ್ತಿದ್ದಾರೆ. ಇದು ಯಾವ ಅಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿಲ್ಲವಾ ಅನ್ನೋದು ಯಕ್ಷ ಪ್ರಶ್ನೆ ಆಗಿದೆ.
ಇದನ್ನೂ ಓದಿ: ಕೊರೋನಾ ಎರಡನೆ ಅಲೆ ಎಫೆಕ್ಟ್; ಇಳಿಕೆಯಾದ ಬನ್ನೇರುಘಟ್ಟ ಪ್ರವಾಸಿಗರ ಸಂಖ್ಯೆ
ಇಟ್ಟಿಗೆ ಭಟ್ಟಿಯೊಂದರ ಮಾಲೀಕ ನೂರ್ ಅಹ್ಮದ್ ಖಾಜಿ ಎನ್ನುವರು, ಇಟ್ಟಿಗೆ ಭಟ್ಟಿಗಳಲ್ಲಿ ಬಾಲಕಾರ್ಮಿಕರು ದುಡಿಯುತ್ತಿರುವುದು ಹಾಗೂ ಅನಧಿಕೃತವಾಗಿ ಇಟ್ಟಿಗೆ ಭಟ್ಟಿ ನಡೆಸುತ್ತಿರುವುದರ ಬಗ್ಗೆ ಪ್ರಶ್ನಿಸಿದರೆ ಕೆಂಡಾಮಂಡಲರಾದರು. ಇದಕ್ಕೆಲ್ಲಾ ನಾವು ಅಧಿಕಾರಗಳನ್ನು ನೋಡಿಕೊಳ್ಳುತ್ತೇವೆ. ಅದನ್ನು ಕೇಳಲು ನೀವ್ಯಾರು ಎಂದು ನೂರ್ ಅವರು ಮಾಧ್ಯಮವರನ್ನೇ ಪ್ರಶ್ನಿಸಿದ್ದಾರೆ. ಗುಳೇದಗುಡ್ಡ ತಹಶೀಲ್ದಾರ್ ಗುರುರಾಜ್ ಕುಲಕರ್ಣಿ, ಕೃಷಿ ಜಮೀನಿನಲ್ಲಿ ನಡೆಯುವ ಇಟ್ಟಿಗೆ ಭಟ್ಟಿಗಳನ್ನು ಎನ್ ಎ ಮಾಡಿಕೊಳ್ಳುವಂತೆ ನೋಟಿಸ್ ನೀಡಲಾಗಿದೆ. ಏಪ್ರೀಲ್ 20ವರೆಗೆ ಕಾಲಾವಕಾಶ ನೀಡಲಾಗಿದೆ. ಅನಧಿಕೃತ ಇಟ್ಟಿಗೆ ಭಟ್ಟಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಗಣಿ ಸಚಿವ ಮುರುಗೇಶ್ ನಿರಾಣಿ, ಅಕ್ರಮ ಮಣ್ಣು, ಮರಳು ಸೇರಿದಂತೆ ಇತರೆ ಗಣಿಗಾರಿಕೆ ತಡೆಯಲು ಹೊಸ ಮರಳು ನೀತಿ ಸಹಕಾರಿ ಆಗಲಿದೆ. ಗುಳೇದಗುಡ್ಡ ಭಾಗದಲ್ಲಿ ಅನಧಿಕೃತ ಇಟ್ಟಗಿ ಭಟ್ಟಿಗಳ ಸ್ಥಳಕ್ಕೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಲು ಸೂಚನೆ ಕೊಡುತ್ತೇನೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೆಳಿದ್ದಾರೆ.
ಒಟ್ಟಿನಲ್ಲಿ ಇಟ್ಟಿಗೆ ಫ್ಯಾಕ್ಟರಿಗಳಿಂದ ಇಡೀ ಗುಳೇದಗುಡ್ಡ ರೈಲ್ವೆ ಸ್ಟೇಷನ್ ಗ್ರಾಮದ ಧೂಳುಮಯವಾಗಿದೆ. ವಿಪರೀತ ಧೂಳು ಆವರಿಸಿದ ಕಾರಣ ಜನ ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಬಂಧಿಸಿದವರು ಆದಷ್ಟು ಶೀಘ್ರ ಗ್ರಾಮಸ್ಥರ ಸಮಸ್ಯೆಗಳಿಗೆ ಮುಕ್ತಿ ಹಾಡಬೇಕಿದೆ.
ವರದಿ: ರಾಚಪ್ಪ ಬನ್ನಿದಿನ್ನಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ