ಪಶ್ಚಿಮಘಟ್ಟ ಕಾಡುಗಳಲ್ಲಿವೆ ರಕ್ತ‌ಹೀರುವ ಅತಿಥಿಗಳು ; ಮಳೆಗಾಲದಲ್ಲಿ ಹೆಚ್ಚಾಗುತ್ತೆ ಜಿಗಣೆಗಳ ಭೀತಿ..!

ಆನೆಕಾಲು ರೋಗ, ರಕ್ತ ಹೆಪ್ಪುಗಟ್ಟಿದ್ದ ಭಾಗಗಳಲ್ಲಿ ಈ ಜಿಗಣೆಯನ್ನು ಕಚ್ಚಿಸುವ ಮೂಲಕ ಕೆಟ್ಟ ರಕ್ತವನ್ನು ಹೊರಗೆ ಹಾಕಲಾಗುತ್ತದೆ.

ಜಿಗಣೆ

ಜಿಗಣೆ

  • Share this:
ಪುತ್ತೂರು(ಜುಲೈ. 15): ನೀವು ಮೊದಲ ಬಾರಿಗೆ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಸಂಚರಿಸುವವರಾಗಿದ್ದರೆ ನಿಮಗೆ ಅಲ್ಲೊಂದು ಅಪರೂಪದ ಅತಿಥಿಯ ದರ್ಶನವಾಗುವುದು ಸಾಮಾನ್ಯ. ನಿಮಗೆ ತಿಳಿಯದಂತೆಯೇ ನಿಮ್ಮ ರಕ್ತವನ್ನೇ ಹೀರುವ ಸಾಮರ್ಥ್ಯ ಆ ಅತಿಥಿಗಿದೆ. ಇದು ರಕ್ತ ಹೀರುವ ರಕ್ತ ಪಿಪಾಸು ಜಿಗಣೆಯ ಕಥೆ.

ದಟ್ಟ ಅರಣ್ಯಗಳಲ್ಲಿ ಸಂಚರಿಸುವಾಗ ನೀವು  ಕಾಡು ಪ್ರಾಣಿಗಳಿಂದಾದರೂ ತಪ್ಪಿಸಿಕೊಳ್ಳಬಹುದು ಆದರೆ, ರಕ್ತ ಹೀರುವ ಜಿಗಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜಿಗಣೆ ಇದನ್ನು ಇಂಗ್ಲೀಷ್‍ನಲ್ಲಿ ಲೀಚಸ್ ಎಂದು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಜನರು ಇದನ್ನು ಉಂಬಳ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ದಟ್ಟ ಕಾಡುಗಳಲ್ಲೇ ಕಾಣ ಸಿಗುವ ಇವುಗಳಿಗೆ ರಕ್ತವೇ ಆಹಾರ. ಕಾಡು ಪ್ರಾಣಿಗಳ ಸರಿಸೃಪಗಳ ರಕ್ತ ಹೀರುವ ಮೂಲಕ ಇದು ತನ್ನ ಜೀವನ ಚಕ್ರ ಸಾಗಿಸುತ್ತದೆ.

ಸಾಮಾನ್ಯವಾಗಿ ತಂಪಾದ ಪ್ರದೇಶಗಳಲ್ಲಿ ಇರುವ ಜಿಗಣೆಗಳು  ಪ್ರಾಣಿಗಳ ವಾಸನೆಯನ್ನು ಗ್ರಹಿಸಿಕೊಂಡು ದಾಳಿ ಇಡುತ್ತದೆ. ಇತರ ಪ್ರಾಣಿಗಳ ದೇಹದಿಂದ ರಕ್ತವನ್ನು ಹೀರುವ ಮೊದಲು ರಕ್ತ ಹೀರುವ ಜಾಗಕ್ಕೆ ಪ್ರಾಣಿಗೆ ಗೊಚರಿಸದಂತಹ ಚುಚ್ಚು ಮದ್ದನ್ನು ಮೊದಲು ನೀಡುತ್ತದೆ. ಬಳಿಕ ರಕ್ತವನ್ನು ಹೀರುವ ಕಾಯಕದಲ್ಲಿ ತೊಡಗಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ಜಿಗಣೆಗಳು ತಮಗೆ ಬೇಕಾಗುವಷ್ಟು ರಕ್ತವನ್ನು  ಹೀರಿದ ಬಳಿಕ  ತನ್ನಷ್ಟಕ್ಕೆ ಕೆಳಗೆ ಬೀಳುತ್ತದೆ.

ದೇಹದಿಂದ ರಕ್ತ ಹಿರುವ ಮೊದಲು ಸಣ್ಣ ಕಡ್ಡಿಯಂತಿರುವ ಈ ಜಿಗಣೆಗಳು ಬಳಿಕ ದೊಡ್ಡದಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಅರ್ಧ ಗಂಟೆಯಿಂದ 2 ಗಂಟೆಯವರೆಗೂ ರಕ್ತ ಹೀರುವಂತಹ ಜಿಗಣೆಗಳು ಇರುತ್ತವೆ. ಒಮ್ಮೆ ದೇಹಕ್ಕೆ ಅಂಟಿಕೊಂಡಂತಹ ಜಿಗಣೆ ತೆಗೆಯಲು ಹರಸಾಹಸವನ್ನೇ ಪಡಬೇಕಾಗುತ್ತದೆ. ಅರಣ್ಯ ಭಾಗಗಳಲ್ಲಿ ವಾಸಿಸುವ ಸ್ಥಳೀಯರು ಇದರಿಂದ ತಪ್ಪಿಸಿಕೊಳ್ಳಲು ತಮ್ಮ ಕಾಲುಗಳಿಗೆ ಸೋಪು  ಅಥವಾ ನಶ್ಯ ಹಚ್ಚುವ ಹಾಗೂ ಉಪ್ಪು ನೀರನ್ನು ಸಿಂಪಡಿಸಿಕೊಳ್ಳುತ್ತಾರೆ.

ಕೇವಲ ಮನುಷ್ಯನಿಗೆ ಮಾತ್ರವಲ್ಲದೆ ಎಲ್ಲಾ ಪ್ರಾಣಿಗಳಿಂದಲೂ ಇದು ರಕ್ತವನ್ನು ಹೀರುತ್ತದೆ. ಕೆಲವೊಮ್ಮೆ ವಿಷಜಂತುಗಳಿಗೆ ಕಚ್ಚಿದ ಜಿಗಣೆಗಳು ಮನುಷ್ಯನ ದೇಹವನ್ನು ಕಚ್ಚಿದಲ್ಲಿ, ಆ ಭಾಗದಲ್ಲಿ ತುರಿಕೆ ಕಂಡು ಬರುತ್ತದೆ. ಆ ಭಾಗವು ಬಾತು ಹೋಗುವ ಸಾಧ್ಯತೆಗಳು ಇರುತ್ತವೆ. ಅಲ್ಲದೆ ರೋಗಗಳನ್ನು ಹೊಂದಿರುವ ವ್ಯಕ್ತಿಯ ರಕ್ತವನ್ನು ಹೀರಿದ ಜಿಗಣೆ ಮತ್ತೊಬ್ಬನನ್ನು ಕಚ್ಚಿದಲ್ಲಿ ರೋಗವು ಹರಡುವ ಸಾಧ್ಯತೆಗಳು ಇರುತ್ತದೆ.ಅಲ್ಲದೆ ಈ ಜಗಣೆಗಳು ಕೆಲವು ಸಂದರ್ಭಗಳಲ್ಲಿ ಮಾನವನಿಗೆ ಉಪಕಾರಿಯೂ ಆಗುತ್ತದೆ.

ಇದನ್ನೂ ಓದಿ : 2nd PUC Karnataka Result 2020: ಭೀಮಾ ತೀರದಲ್ಲಿ ಅರಳಿದ ಪ್ರತಿಭೆ: ಕಲಾ ವಿಭಾಗದಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆದ ರೈತನ ಮಗಳು

ಪ್ರಾಚೀನ ಗ್ರೀಕ್ ಹಾಗೂ ಭಾರತದ ಆಯುರ್ವೇದದಲ್ಲೂ ಇದನ್ನು ಮನುಷ್ಯ ಉಪಕಾರಿಯಾಗಿಯೂ ಬಿಂಬಿಸಲಾಗಿದೆ. ಆನೆಕಾಲು ರೋಗ, ರಕ್ತ ಹೆಪ್ಪುಗಟ್ಟಿದ್ದ ಭಾಗಗಳಲ್ಲಿ ಈ ಜಿಗಣೆಯನ್ನು ಕಚ್ಚಿಸುವ ಮೂಲಕ ಕೆಟ್ಟ ರಕ್ತವನ್ನು ಹೊರಗೆ ಹಾಕಲಾಗುತ್ತದೆ. ವಾತ ಸಂಬಂಧಿರೊಗ, ರಕ್ತ ಹೆಪ್ಪುಗಟ್ಟುವುದು ಮೊದಲಾದವುಗಳಿಗೆ ಅತ್ಯಂತ ಪರಿಣಾಮಕಾರಿ ಔಷಧಿಯಾಗಿ ಜಿಗಣೆಗಳು ಇಂದಿಗೂ ಬಳಕೆಯಲ್ಲಿದೆ.ಮಳೆಗಾಲದ ಸಂದರ್ಭದಲ್ಲಿ ಅರಣ್ಯದ ಒಳಗೆ ಹಾಗೂ ಅರಣ್ಯಕ್ಕೆ ತಾಗಿಕೊಂಡಿರುವ ಪ್ರದೇಶಗಳಲ್ಲಿ ಈ ಜಿಗಣೆಗಳು ಕಂಡು ಬರುತ್ತವೆ. ಕೇವಲ ಕಡ್ಡಿಯಂತಿರುವ ಈ ಜಿಗಣೆಗಳು ಒಂದು ಸಂದರ್ಭದಲ್ಲಿ ಮನುಷ್ಯನ ರಕ್ತ ಹೀರಿ ನೋವುಂಟು ಮಾಡಿದರೆ ಮತ್ತೊಂದೆಡೆ ಅದೇ ಜಿಗಣೆಗಳು ಅವನ ಜೀವನವನ್ನು ರಕ್ಷಿಸುವ ಮಹತ್ವದ ಕಾರ್ಯವನ್ನು ಮಾಡುತ್ತದೆ. ಅಂದ ಹಾಗೆ ಈ ಜೀವಿಗಳ ದರ್ಶನ ಪಡೆಯಬೇಕಾದರೆ ಒಮ್ಮೆ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ನಡೆದಾಡಬೇಕು.
Published by:G Hareeshkumar
First published: