news18-kannada Updated:December 18, 2020, 7:20 AM IST
ಅಭ್ಯರ್ಥಿ ಮನೆ ಮುಂದೆ ಮಾಡಲಾದ ವಾಮಾಚಾರ.
ಧಾರವಾಡ; ರಾಜ್ಯದೆಲ್ಲೆಡೆ ಗ್ರಾಮ ಪಂಚಾಯಿತಿ ಚುನಾವಣೆ ಹವಾ ಜೋರಾಗಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 22 ಹಾಗೂ ಡಿಸೆಂಬರ್ 27ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 30ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಏತನ್ಮಧ್ಯೆ ಗೆಲುವಿಗಾಗಿ ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತು ಆರಂಭಿಸಿದ್ದಾರೆ. ಮದ್ಯ, ಹಣ, ಸೀರೆ, ಉಡುಗೊರೆ ಹಂಚಿಕೆ ಜೋರಾಗಿಯೇ ನಡೆಯುತ್ತಿದೆ. ಇದೆಲ್ಲವುದಕ್ಕಿಂತ ಹೆಚ್ಚಾಗಿ ಧಾರವಾಡದಲ್ಲಿ ವಾಮಾಚಾರಗಳು ಹೆಚ್ಚಾಗಿವೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಧಾರವಾಡ ಜಿಲ್ಲೆಯಲ್ಲಿ ವಾಮಾಚಾರದ ಹಾವಳಿ ಜೋರಾಗಿದೆ. ಅಭ್ಯರ್ಥಿಗಳ ಮನೆಯ ಮುಂದೆ ವಾಮಾಚಾರ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಣ್ಣಿಗೇರಿಯಲ್ಲಿ ಅಭ್ಯರ್ಥಿಯೊಬ್ಬರ ಮನೆಯ ಮುಂದೆ ವಾಮಾಚಾರ ನಡೆದಿದೆ. ನಿಂಬೆಹಣ್ಣು, ಒಣ ಮೆಣಸಿನಕಾಯಿ, ಮೊಟ್ಟೆ, ಉಪ್ಪು ಹಾಕಿ ಚಿತ್ರ ಬಿಡಿಸಲಾಗಿದೆ. ಆತಂಕಗೊಂಡಿರುವ ಅಭ್ಯರ್ಥಿ ಪೊಲೀಸರಿಗೆ ದೂರು ನೀಡಿದ್ದಾರೆ.ಇದನ್ನು ಓದಿ: ಅವಸಾನದತ್ತ ಐತಿಹಾಸಿಕ ಬಿದ್ರಿ ಕಲೆ; ಪರ್ಶಿಯನ್ ಮೂಲದ ಕಲೆಗೆ ಬೇಕಿದೆ ಕಾಯಕಲ್ಪ
ಇನ್ನೊಂದೆಡೆ ಕಲಘಟಗಿ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಅಭ್ಯರ್ಥಿಯೊಬ್ಬ ಜನರ ಮತ ಸೆಳೆಯಲು ವಾಮಾಚಾರ ಮಾಡಿದ್ದಾನೆ ಎನ್ನಲಾಗಿದೆ. ಮತದಾರ ಮನೆ ಮನೆಗಳಿಗೆ ತೆರಳಿ ಬಿಳಿ ಎಳ್ಳು ಹಾಕಿದ್ದಾನೆಂದು ಆರೋಪಿಸಲಾಗಿದೆ. ಮಲಕನಕೊಪ್ಪ ಗ್ರಾಮದ ಹಲವು ಮನೆಗಳಲ್ಲಿ ಬಿಳಿ ಎಳ್ಳು ಪತ್ತೆಯಾಗಿದೆ. ಮನೆಯ ಒಳಾಂಗಣ ಮತ್ತು ಆವರಣದಲ್ಲಿ ರಾತ್ರಿ ವೇಳೆಯಲ್ಲಿ ಬಿಳಿ ಎಳ್ಳು ಹಾಕಲಾಗಿದೆ. ಗ್ರಾಮಸ್ಥರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಚುನಾವಣೆಯಲ್ಲಿ ಗೆಲ್ಲಲು ನಾನಾ ರೀತಿಯ ಕಸರತ್ತು ಮಾಡುವ ಅಭ್ಯರ್ಥಿಗಳು ವಾಮಾಚಾರದಂತಹ ಪದ್ಧತಿ ಅನುಸರಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂತಹ ಕೃತ್ಯ ಎಸಗಿದವರನ್ನು ಪೊಲೀಸರು ಶೀಘ್ರ ಬಂಧಿಸಿ ಶಿಕ್ಷೆ ವಿಧಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Published by:
HR Ramesh
First published:
December 18, 2020, 7:20 AM IST