Hangal By Election Result : ಸಿಎಂ ತವರಲ್ಲಿಯೇ BJPಗೆ ತೀವ್ರ ಮುಖಭಂಗ; ಹಾನಗಲ್​​ನಲ್ಲಿ ಕಾಂಗ್ರೆಸ್​​ಗೆ ಗೆಲುವಿನ ಹಾರ

Hangal By Election Result: ಶ್ರೀನಿವಾಸ ಮಾನೆ 87,490 ಮತ ಪಡೆದರೆ, ಶಿವರಾಜ ಸಜ್ಜನರ್ 80,117 ಮತ ಪಡೆದರು. ಮಾನೆ 7,373 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ನ ನಿಯಾಜ್ ‍ಶೇಕ್ ಕೇವಲ 927 ಮತ ಪಡೆಯಲಷ್ಟೇ ಶಕ್ತವಾಗಿದ್ದಾರೆ. 

ಶ್ರೀನಿವಾಸ​ ಮಾನೆ, ಸಿಎಂ

ಶ್ರೀನಿವಾಸ​ ಮಾನೆ, ಸಿಎಂ

  • Share this:
ಹಾವೇರಿ : ಪ್ರತಿಷ್ಠೆಯ ಕಣವಾಗಿದ್ದ ಹಾವೇರಿ ಜಿಲ್ಲೆ ಹಾನಗಲ್  ಉಪ ಚುನಾವಣೆಯಲ್ಲಿ (Hangal By Election)  ಕಾಂಗ್ರೆಸ್ (Congress) ಪಕ್ಷ ಗೆಲುವಿನ ನಗೆ ಬೀರಿದೆ. ಸಿ ಎಂ ಬಸವರಾಜ್ ಬೊಮ್ಮಾಯಿ (CM Basavaraj bommai) ತವರು  ಜಿಲ್ಲೆಯಲ್ಲಿಯೇ ಬಿಜೆಪಿ(BJP) ಮುಗ್ಗರಿಸಿದ್ದು, ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಸ್ವತಃ ಸಿಎಂ ಬೊಮ್ಮಾಯಿ ಸೇರಿದಂತೆ ಹಲವಾರು ಸಚಿವರು ಇಲ್ಲಿಯೇ ಠಿಕಾಣಿ ಹೂಡಿದ್ದರೂ ಬಿಜೆಪಿ ಅಭ್ಯರ್ಥಿಯನ್ನು ಗೆಲುವಿನ ದಡಕ್ಕೆ ಸೇರಿಸಲಾಗಿಲ್ಲ. ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದ್ದ ಹಾನಗಲ್ ಕ್ಷೇತ್ರದ ಫಲಿತಾಂಶ ಪ್ರಕಟಗೊಂಡಿದೆ. ಹಾವೇರಿ ಯ ದೇವಗಿರಿ ಬಳಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಒಟ್ಟು 19  ಸುತ್ತುಗಳ ಮತ ಎಣಿಕೆ ಕಾರ್ಯ ನಡೆಯಿತು. ಅಂಚೆ ಮತ ಪತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದನ್ನು ಬಿಟ್ಟರೆ ಬಹುತೇಕ ಸುತ್ತುಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತು.  ಅಂತಿಮವಾಗಿ ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಜಯದ ನಗೆ ಬೀರಿದ್ದಾರೆ.

7,373 ಮತಗಳ ಅಂತರದಲ್ಲಿ ಬಿಜೆಪಿಗೆ ಸೋಲು

ಶ್ರೀನಿವಾಸ ಮಾನೆ 87,490 ಮತ ಪಡೆದರೆ, ಶಿವರಾಜ ಸಜ್ಜನರ್ 80,117 ಮತ ಪಡೆದರು. ಮಾನೆ 7,373 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ನ ನಿಯಾಜ್ ‍ಶೇಕ್ ಕೇವಲ 927 ಮತ ಪಡೆಯಲಷ್ಟೇ ಶಕ್ತವಾಗಿದ್ದಾರೆ.  ಸಿಂದಗಿ ಹಾಗೂ ಹಾನಗಲ್ ಎರಡೂ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದರೂ ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ ಹಾನಗಲ್ ಕ್ಷೇತ್ರದ ಕಡೆ ಹೆಚ್ಚು ಗಮನ ಕೇಂದ್ರೀಕರಿಸಿದ್ದರು. ಸಚಿವರಾದ ಸೋಮಶೇಖರ್, ಕೆ ಸುಧಾಕರ್, ಭೈರತಿ ಬಸವರಾಜ್ ಮುನಿರತ್ನ ಮೊದಲಾದವರು ಆಯಾ ಜಿಲ್ಲಾ ಪಂಚಾಯಿತಿಗಳ ಉಸ್ತುವಾರಿ ತೆಗೆದುಕೊಂಡು ಸಂಘಟಿತವಾಗಿ ಚುನಾವಣೆ ಎದುರಿಸಲಾಗಿತ್ತು. ಮುಂದಿನ ಸಾರ್ವತ್ರಿಕ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಹೈಕಮಾಂಡ್ ಸಂದೇಶ ಸಾರಿದ ನಂತರ ನಡೆದ ಮೊದಲ ಉಪ ಚುನಾವಣೆ ಇದಾಗಿತ್ತು. ಹೀಗಾಗಿ ಸಿಎಂ ಬೊಮ್ಮಾಯಿ ನಾಯಕತ್ವ ದ ದಿಕ್ಸೂಚಿಯೂ ಈ ಚುನಾವಣೆಯಾಗಿತ್ತು.

ಸಿಎಂ ನಾಯಕತ್ವದ ಬಗ್ಗೆ ಪ್ರಶ್ನೆ..!? 

ಸಿಂಧಗಿ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಬಿಜೆಪಿ ಜಯಭೇರಿ ಬಾರಿಸಿದ್ದರೂ, ಹಾನಗಲ್ ಕ್ಷೇತ್ರದಲ್ಲಿನ ಸೋಲು ಬಿಜೆಪಿ ಪಕ್ಷಕ್ಕೆ ಅರಗಿಸಿಕೊಳ್ಳಲಾರದ ಸ್ಥಿತಿ ತಂದಿದೆ. ತಮ್ಮ ಜಿಲ್ಲೆಯಲ್ಲಿಯೇ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಾಗದ ಸಿಎಂ, ಮುಂದಿನ  ಸಾರ್ವತ್ರಿಕ ಚುನಾವಣೆಯನ್ನು ಹೇಗೆ ವಹಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅರ್ಧ ಮತ ಎಣಿಕೆವರೆಗೂ ಹುಬ್ಬಳ್ಳಿಯಲ್ಲಿ ಇದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಗೆಲುವಿನ ದಡ ಸೇರುವ ಸುಳಿವು ಸಿಕ್ಕ ಕೂಡಲೇ ಹಾವೇರಿಯತ್ತ ಪ್ರಯಾಣ ಬೆಳೆಸಿದರು.

ಶ್ರೀನಿವಾಸ ಮಾನೆ ಸಂತಸ 

ದೇವಗಿರಿ ಬಳಿಯ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್ ಮಾನೆ, ಗೆಲುವಿಗೆ ಹರ್ಷ ವ್ಯಕ್ತಪಡಿಸಿದರು. ಹತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸವಿತ್ತು. ಅದು ಫಲಿತಾಂಶದಲ್ಲಿ ಪ್ರತಿಬಿಂಬಿತವಾಗಿದೆ. ಕಳೆದ ಚುನಾವಣೆಯಲ್ಲಿ ಸುಮಾರು 6ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದೆ. ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಮುಖ್ಯಮಂತ್ರಿ ಆದಿಯಾಗಿ ಸಚಿವ ಸಂಪುಟವೇ ಇಲ್ಲಿತ್ತು. ಆದರೂ  ಹಣ ಬೆಂಬಲಕ್ಕೆ ಹಿನ್ನಡೆಯಾಗಿದ್ದು, ಜನಬಲಕ್ಕೆ ಗೆಲುವಾಗಿದೆ. ಕಾಂಗ್ರೆಸ್ ಗೆಲುವು ನಮ್ಮ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಹೋರಾಡುತ್ತೇನೆ. ಪ್ರಣಾಳಿಕೆಯ ಅಂಶಗಳನ್ನು ಜಾರಿಗೆ ತರಲು ಯತ್ನಿಸುತ್ತೇನೆ ಎಂದು ನ್ಯೂಸ್ 18 ಕನ್ನಡಕ್ಕೆ ಶ್ರೀನಿವಾಸ್ ಮಾನೆ ತಿಳಿಸಿದ್ದಾರೆ.

ಇದನ್ನೂ ಓದಿ: Sindagi-Hangal By Election Results: ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗಲೂ ಹೀಗೆ ಆಗಿತ್ತು; ಸಿಎಂ ಸಮರ್ಥನೆ

ಕೊನೆಯ ಕ್ಷಣದಲ್ಲಿ ಟಿಕೆಟ್ ಕೊಟ್ಟಿದ್ದರಿಂದ ಗೆಲ್ಲಲು ಆಗಲಿಲ್ಲ 

ಇದೇ ವೇಳೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್, ಜಿದ್ದಾಜಿದ್ದಿ ಅಖಾಡದಲ್ಲಿ ಸೋಲಾಗಿದೆ. ಈ ಉಪಚುನಾವಣೆ ಸೋಲಿನ ಹೊಣರಯನ್ನು ನಾನೇ ಹೊರುತ್ತೇನೆ. ಮುಖ್ಯಮಂತ್ರಿ ಮತ್ತು ಹಲವಾರು ಸಚಿವರು ಇಲ್ಲಿ ಬಂದು ಪ್ರಚಾರ ಮಾಡಿದರು. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದೆವು. ಆದರೂ ಸಹ ಸೋಲಾಗಿದೆ. ನನಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೊಟ್ಟಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಗಳಿಸಲಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ನನ್ನ ವೈಯಕ್ತಿಕ ವಿಚಾರಗಳನ್ನು ಪ್ರಚಾರಕ್ಕೆ ಬಳಸಿದರು. ಕಾಂಗ್ರೆಸ್ ನವರು ಸುಳ್ಳು ಆರೋಪಗಳನ್ನು ಮಾಡಿ, ಅಪ ಪ್ರಚಾರ ಮಾಡಿದರು. ಇದೆಲ್ಲದರ ನಡುವೆ ನನಗೆ ಸೋಲಾಗಿದೆ. ಈ ಸೋಲಿನಿಂದ ನಾನು ಧೃತಿಗೆಡುವುದಿಲ್ಲ. ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತೇನೆ. ಪಕ್ಷ ಬಯಸಿದಲ್ಲಿ ಹಾನಗಲ್ ಕ್ಷೇತ್ರದಿಂದಲೇ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀನಿ ಎಂದು ನ್ಯೂಸ್ 18 ಕನ್ನಡಕ್ಕೆ ಶಿವರಾಜ್ ಸಜ್ಜನ್ ತಿಳಿಸಿದ್ದಾರೆ.

ಒಟ್ಟಾರೆ ಸಿಎಂ ಬೊಮ್ಮಾಯಿ ತವರಿನಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಜೆಡಿಎಸ್ ಠೇವಣಿ ಕಳೆದುಕೊಂಡಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬೊಮ್ಮಾಯಿ ನೇತೃತ್ವದಲ್ಲಿಯೇ ನಡೆಸಬೇಕೆಂಬ ಹೈಕಮಾಂಡ್ ತೀರ್ಮಾನವನ್ನೂ ಮರುಪರಿಶೀಲಿಸುವಂತೆ ಮಾಡಿದೆ.
Published by:Kavya V
First published: