ಕೊಡಗು(ಆ.10): ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಸಚಿವಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕೊನೆಗೂ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಐದು ಬಾರಿ ಶಾಸಕರಾಗಿ ಗೆದ್ದಿರುವ ಅಪ್ಪಚ್ಚು ರಂಜನ್ ಅವರಿಗೆ ಸಚಿವಸ್ಥಾನ ನೀಡುವಂತೆ ಆಗ್ರಹಿಸಿ ತಾಲ್ಲೂಕು ಕೇಂದ್ರ ಕುಶಾಲನಗರದಿಂದ ಐದು ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಬೆಂಗಳೂರು ಚಲೋ ನಡೆಸಿದರು.
ಕುಶಾಲನಗರದ ಬೈಚನಹಳ್ಳಿಯಲ್ಲಿ ಇರುವ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನೂರಾರು ಕಾರ್ಯಕರ್ತರು ಅಪ್ಪಚ್ಚು ರಂಜನ್ ಅವರಿಗೆ ಸಚಿವಸ್ಥಾನ ಸಿಗಲಿ ಎಂದು ಬೇಡಿದರು. ಬಳಿಕ ಬೈಚನಹಳ್ಳಿಯಿಂದ ಸ್ವಲ್ಪ ದೂರದವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು. ನೂರಕ್ಕೂ ಹೆಚ್ಚು ಕಾರು ಮತ್ತು 10 ಟೆಂಪೊ ಟ್ರಾವಲರ್ ಗಳಲ್ಲಿ ಬೆಂಗಳೂರಿನತ್ತ ಸಾಗಿದರು. ಈ ನಿಯೋಗವು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲಿದ್ದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಮನವಿ ಮಾಡಲಿದೆ.
ಕುಶಾಲನಗರದಿಂದ ಬೆಂಗಳೂರಿಗೆ ಹೋಗುತ್ತಿರುವ ಕಾರ್ಯಕರ್ತರಿಗೆ ಮಧ್ಯಾಹ್ನದ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಸಮಯ ನಿಗದಿ ಮಾಡಿದ್ದಾರೆ. ಈ ವೇಳೆ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಲಿದ್ದಾರೆ. ಬೆಂಗಳೂರಿಗೆ ತೆರಳಿರುವ ನಿಯೋಗವು ಅಲ್ಲಿ ಸ್ವಾತಂತ್ರ್ಯ ಉದ್ಯಾನ ವನದಿಂದ ಯಡಿಯೂರಪ್ಪ ಅವರ ಮನೆಯವರೆಗೆ ಜಾಥಾ ನಡೆಸಲಿದೆ. ಬಳಿಕ ಯಡಿಯೂರಪ್ಪ ಅವರನ್ನು ಮೊದಲು ಭೇಟಿಯಾಗಿ ಅಪ್ಪಚ್ಚು ರಂಜನ್ ಅವರಿಗೆ ಸಚಿವಸ್ಥಾನ ನೀಡುವಂತೆ ಆಗ್ರಹಿಸಲಿದೆ.
ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲಿದೆ. ಬೆಂಗಳೂರು ಚಲೋ ಹೊರಡುವ ವೇಳೆ ಪ್ರತಿಕ್ರಿಯಿಸಿದ ಕುಶಾಲನಗರ ನಗರ ಘಟಕದ ಬಿಜೆಪಿ ಅಧ್ಯಕ್ಷ ಉಮಾಶಂಕರ್ ಅಪ್ಪಚ್ಚು ರಂಜನ್ ಅವರು 40 ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ. 5 ಬಾರಿ ಶಾಸಕರಾಗಿ ಗೆದ್ದಿದ್ದಾರೆ. ಅವರಿಗೆ ಸಚಿವಸ್ಥಾನ ನೀಡಲೇಬೇಕು. ಇಲ್ಲದಿದ್ದರೆ ಸಚಿವಸ್ಥಾನ ನೀಡುವವರೆಗೆ ನಮ್ಮ ಹೋರಾಟ ಹೀಗೆ ಮುಂದುವರಿಯಲಿದೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸಿದಿದ್ದರೆ ನಮ್ಮ ಹೋರಾಟ ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದಿದ್ದಾರೆ.
ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಮಾತನಾಡಿ, ಇಡೀ ಕ್ಷೇತ್ರದಲ್ಲಿ ಮನೆ ಮನೆ ತಿರುಗಿ ಬಿಜೆಪಿಯನ್ನು ಸಂಘಟಿಸುವ ಕೆಲಸವನ್ನು ಶಾಸಕ ಅಪ್ಪಚ್ಚು ರಂಜನ್ ಅವರು ಮಾಡಿದ್ದಾರೆ. 40 ವರ್ಷಗಳಿಂದ ಬಿಜೆಪಿಗಾಗಿ ದುಡಿದವರಿಗೆ ಸಚಿವಸ್ಥಾನ ನೀಡದಿದ್ದರೆ ಹೇಗೆ? ಐದು ಬಾರಿ ಶಾಸಕರಾಗಿದ್ದರು ಅವರ ಸರಳತನ ಮತ್ತು ಕ್ಲೀನ್ ಹ್ಯಾಂಡ್ ಆಗಿದ್ದಾರೆ. ಅವರಿಗೆ ಸಚಿವಸ್ಥಾನ ನೀಡಲೇ ಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಕಾರ್ಯಕರ್ತರು ಮತ್ತು ಮುಖಂಡರು ತಮಗೆ ಸ್ಥಾನಕ್ಕಾಗಿ ಒತ್ತಾಯಿಸಿ ಬೆಂಗಳೂರು ಚಲೋ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಅಪ್ಪಚ್ಚು ರಂಜನ್ ಅವರು, ಸಿಎಂ ಅವರಲ್ಲಿ ಮನವಿ ಮಾಡಲು ನಿಯೋಗ ಹೋಗುತ್ತಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅವರ ಸ್ವ ಇಚ್ಚೆಯಿಂದ ಹೋಗುತ್ತಿದ್ದಾರೆ. ಪಕ್ಷದಲ್ಲಿ ನಿರ್ಧರಿಸಿಕೊಂಡು ಹೋಗುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ