ವೀರ ಸಾವರ್ಕರ್ ಹೆಸರಿನಲ್ಲಿ ಬಿಜೆಪಿ ರಾಜಕೀಯ ಆಟ; ಅಖಿಲ ಭಾರತ ಹಿಂದೂ ಮಹಾಸಭಾ ಆರೋಪ

ದೇಶದಲ್ಲಿರುವ ಏಕೈಕ ಹಿಂದೂ ಪಕ್ಷವೆಂದರೆ ಅಖಿಲ ಭಾರತ ಹಿಂದೂ ಮಹಾಸಭಾ ಮಾತ್ರ. ನಮ್ಮಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶವಿದೆ. ಹಿಂದೂಗಳಿಗೆ ಎಸ್‌ಡಿಪಿಐ ಶತ್ರು. ಆದರೆ ಎಸ್‌ಡಿಪಿಐಗೆ ಮುಸ್ಲಿಮರೇ ಶತ್ರು. ಎಸ್‌ಡಿಪಿಐ ಬೆಳೆದರೆ ಇನ್ನೊಂದು ತಾಲಿಬಾನ್ ಸೃಷ್ಟಿಯಾಗುತ್ತದೆ ಎಂದರು.

ಸುದ್ದಿಗೋಷ್ಠಿ ನಡೆಸಿದ ಹಿಂದೂ ಮಹಾಸಭಾದ ಪದಾಧಿಕಾರಿಗಳು.

ಸುದ್ದಿಗೋಷ್ಠಿ ನಡೆಸಿದ ಹಿಂದೂ ಮಹಾಸಭಾದ ಪದಾಧಿಕಾರಿಗಳು.

  • Share this:
 ಪುತ್ತೂರು: ವೀರ ಸಾವರ್ಕರ್ ಹೆಸರು ಹೇಳಿಕೊಂಡು ಬಿಜೆಪಿ, ಎಸ್‌ಡಿಪಿಐ ಪಕ್ಷಗಳು ರಾಜಕೀಯ ಆಟ ಮಾಡುತ್ತಿವೆ. ಇದು ತಾಪಂ, ಜಿಪಂ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಮಾಡುತ್ತಿರುವ ಒಳಸಂಚಿನ ಭಾಗ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷ ಆಪಾದಿಸಿದೆ.

ಪಕ್ಷದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಮಂಗಳವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಗೆ ಪಂಡಿತ್ ನಾಥೂರಾಮ್ ಗೋಡ್ಸೆ ಬೇಕಾಗಿಲ್ಲ. ಆದರೆ ಸಾವರ್ಕರ್ ಬೇಕಾಗಿದೆ. ಇದೆಂಥ ದ್ವಂದ್ವ? ಸಾವರ್ಕರ್ ನಮ್ಮ ನಾಯಕರು. ಅವರು ಕಟ್ಟಿದ ಪಕ್ಷ ನಮ್ಮದು. ನಾವು ಗೋಡ್ಸೆಯನ್ನೂ ಆರಾಧಿಸುತ್ತೇವೆ. ಸಾವರ್ಕರ್ ಅವರನ್ನೂ ಆರಾಧಿಸುತ್ತೇವೆ ಎಂದರು.

ಅಖಿಲ ಭಾರತ ಹಿಂದೂ ಮಹಾಸಭಾವನ್ನು ಮುಗಿಸಲು ಬಿಜೆಪಿ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದೆ. ಎಸ್‌ಡಿಪಿಐ ಹುಟ್ಟಿಕೊಳ್ಳಲು ಬಿಜೆಪಿಯೇ ಕಾರಣ. ಈಗ ಅವರ ವಿರುದ್ಧವೇ ಇವರು ಹೋರಾಡುವ ನಾಟಕ ಮಾಡುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಜಾತ್ಯತೀತ ಪಕ್ಷಗಳು. ಅವುಗಳು ಒಂದೇ ನಾಣ್ಯದ ಮುಖಗಳು. ಬಿಜೆಪಿಗೆ ನಾವು ಬೇಡ. ಹಾಗಾದರೆ ನಮ್ಮ ನಾಯಕರಾದ ಸಾವರ್ಕರ್ ಯಾಕೆ ಬೇಕು? ಈ ರಾಜಕೀಯ ದೊಂಬರಾಟಕ್ಕೆ ಹಿಂದೂಗಳು ಬಲಿಯಾಗಬಾರದು ಎಂದರು.

ಅಧಿಕಾರದಲ್ಲಿ ಇಲ್ಲದಿದ್ದಾಗ ಎಸ್‌ಡಿಪಿಐ ಬ್ಯಾನ್ ಮಾಡಿ ಎಂದವರು ಬಿಜೆಪಿಗರು. ಈಗ ಅವರೇ ಅಧಿಕಾರದಲ್ಲಿ ಇದ್ದಾರೆ. ಯಾಕೆ ಬ್ಯಾನ್ ಮಾಡುತ್ತಿಲ್ಲ? ತಾಕತ್ತಿದ್ರೆ ಬ್ಯಾನ್ ಮಾಡಿ ತೋರಿಸಿ. ಪಕ್ಷ ಕಟ್ಟಿದ ಯಡಿಯೂರಪ್ಪನವರನ್ನೇ ಇಳಿಸಿದವರು ಬಿಜೆಪಿಗರು. ಈಗ ರಾಜ್ಯದಲ್ಲಿ ಚುನಾವಣೆ ನಡೆದರೆ ಬಿಜೆಪಿಗೆ 10 ಸೀಟೂ ಬರಲ್ಲ. ಹಿಂದೂಗಳ ವಿಚಾರದಲ್ಲಿ ನಾಟಕ ಮಾಡಿದರೆ ಬಿಜೆಪಿ ಠೇವಣಿ ಕಳೆದುಕೊಳ್ಳುವ ದಿನಗಳು ಬರಲಿವೆ ಎಂದು ಎಚ್ಚರಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಮಾತನಾಡಿ, ಹಿಂದೂಯೇತರರನ್ನು ಬಿಜೆಪಿ ಯಾವಾಗ ಹೊರಗಿಡುತ್ತದೋ ಆಗ ಅದು ಹಿಂದೂ ಪರ ಪಕ್ಷವಾಗುತ್ತದೆ. ಆಗ ನಾವು ಅವರನ್ನು ಒಪ್ಪುತ್ತೇವೆ. ದೇಶದಲ್ಲಿರುವ ಏಕೈಕ ಹಿಂದೂ ಪಕ್ಷವೆಂದರೆ ಅಖಿಲ ಭಾರತ ಹಿಂದೂ ಮಹಾಸಭಾ ಮಾತ್ರ. ನಮ್ಮಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶವಿದೆ. ಹಿಂದೂಗಳಿಗೆ ಎಸ್‌ಡಿಪಿಐ ಶತ್ರು. ಆದರೆ ಎಸ್‌ಡಿಪಿಐಗೆ ಮುಸ್ಲಿಮರೇ ಶತ್ರು. ಎಸ್‌ಡಿಪಿಐ ಬೆಳೆದರೆ ಇನ್ನೊಂದು ತಾಲಿಬಾನ್ ಸೃಷ್ಟಿಯಾಗುತ್ತದೆ ಎಂದರು.

ಇದನ್ನು ಓದಿ: ಕೇರಳ ನಿವಾಸಿಗಳಿಗೆ ಕರ್ನಾಟಕ ಗಡಿಯಲ್ಲಿ ಕೋವಿಡ್ ಲಸಿಕೆಗೆ ಅವಕಾಶವಿಲ್ಲ; ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ

ಟಿಪ್ಪು ಸುಲ್ತಾನ್ ಕಾಲದಲ್ಲಿ ದೇಶದ ಸ್ವಾತಂತ್ರ್ಯದ ಕಲ್ಪನೆಯೇ ಇರಲಿಲ್ಲ. ಹಾಗಾದರೆ ಆತ ಹೇಗೆ ಸ್ವಾತಂತ್ರ್ಯ ಹೋರಾಟಗಾರನಾಗುತ್ತಾನೆ?. ಆರೆಸ್ಸೆಸ್ ಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ನಮಗೆ ಪೂಜನೀಯರು. ಈಗಿನ ಆರೆಸ್ಸೆಸ್ ನಾಯಕತ್ವ ಸರಿಯಾಗಿಲ್ಲ. ಕಾಂಗ್ರೆಸ್ ಕೊಳೆತು ಹೋದ ಹಣ್ಣು. ಅದರ ಬಗ್ಗೆ ನಾವು ಮಾತಾಡೋದೇ ಇಲ್ಲ.  ಬಿಜೆಪಿ ಹಿಂದೂಗಳನ್ನು ಮೂರ್ಖರನ್ನಾಗಿಸಲು ಯತ್ನಿಸುತ್ತಿದೆ. ಅದು ನಿಜವಾದ ಹಿಂದುತ್ವ ಪಕ್ಷ ಆಗಿದ್ದರೆ ಇತರ ಮತದವರನ್ನು ಪಕ್ಷದಿಂದ ಹೊರಗಿಡಬೇಕು. ಇವತ್ತಿನವರೆಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಚೆನ್ನಾಗಿದೆ. ಈಗ ಟಿಪ್ಪು ಸುಲ್ತಾನ್ ವಿರೋಧಿಸುವ ಬಿಜೆಪಿಗರು ಹಿಂದೆ ಟಿಪ್ಪು ಸುಲ್ತಾನ್ ಜಯಂತಿ ಮಾಡಿಲ್ವಾ?  ಜಿಪಂ, ತಾಪಂ ಚುನಾವಣೆಯಲ್ಲಿ ರಾಜ್ಯದಾದ್ಯಂತ ಮಹಾಸಭಾ ಸ್ಪರ್ಧಿಸಲಿದೆ. ಮುಂದೊಂದು ದಿನ ಮಹಾಸಭಾ ಈ ದೇಶದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: