news18-kannada Updated:January 2, 2021, 10:43 AM IST
ಡಾ. ಸುಧಾಕರ್
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ 469 ಗ್ರಾಮ ಪಂಚಾಯಿತಿ ಸ್ಥಾನಗಳಲ್ಲಿ 340 ಸ್ಥಾನಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ದೊರೆತಿದ್ದು, ಇದು ಐತಿಹಾಸಿಕ ದಾಖಲೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಸಂತಸ ವ್ಯಕ್ತಪಡಿಸಿದರು.
ಜಿಲ್ಲೆಯ ಎಲ್ಲಾ 29 ಪಂಚಾಯಿತಿಗಳಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷರಾಗುವ ಸಾಧ್ಯತೆ ಇದೆ. ನೆಲೆಯೇ ಇಲ್ಲ ಎಂದು ಹೇಳುತ್ತಿದ್ದ ಬಿಜೆಪಿಗೆ ಈಗ ಹೆಚ್ಚು ಸ್ಥಾನಗಳು ದೊರೆತಿವೆ. ಇನ್ನೂ ಹೆಚ್ಚು ಸ್ಥಾನಗಳು ದೊರೆತು ಒಟ್ಟು ಸ್ಥಾನಗಳು 380 ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಮತದಾರರಿಗೆ ಧನ್ಯವಾದ ಎಂದರು.
20 ಸ್ಥಾನ ಇರುವ ಪೆರೇಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಎಲ್ಲವೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ದೊರೆತಿದೆ. 44 ಸ್ಥಾನಗಳು ಅವಿರೋಧವಾಗಿ ದೊರೆತಿದೆ. ಗೌರಿಬಿದನೂರು ತಾಲೂಕಿನಲ್ಲಿ 89 ಸ್ಥಾನಗಳು, ಬಾಗೇಪಲ್ಲಿ ಮತ್ತು ಗುಡಿಬಂಡೆಯಲ್ಲಿ 40 ಸ್ಥಾನಗಳು, ಶಿಡ್ಲಘಟ್ಟದಲ್ಲಿ 68-69 ಸ್ಥಾನಗಳು, ಚಿಂತಾಮಣಿಯಲ್ಲಿ 25 ಸ್ಥಾನಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ದೊರೆತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಅತ್ಯುತ್ತಮ ಆರೋಗ್ಯ ಸೇವೆ ನೀಡಲು ಹೆಲ್ತ್ ವಿಶನ್ ಗ್ರೂಪ್ ರಚನೆ; ಸಚಿವ ಡಾ.ಕೆ. ಸುಧಾಕರ್
'ಬಿಜೆಪಿ ಜೊತೆಗಿದ್ದರೆ ಜೆಡಿಎಸ್ಗೆ ಒಳಿತು'
ಪ್ರಧಾನಿ ನರೇಂದ್ರ ಮೋದಿಯವರ ಶುದ್ಧ ಆಡಳಿತ, ಜನಪರ ಕಾರ್ಯಕ್ರಮ, ರೈತರ ಪರ ಕೈಗೊಂಡ ಐತಿಹಾಸಿಕ ನಿರ್ಧಾರಗಳು ಈ ಗೆಲುವಿಗೆ ಕಾರಣ. ಜೆಡಿಎಸ್ನವರು ಕಾಂಗ್ರೆಸ್ ಜೊತೆ ಹೋದಾಗಲೆಲ್ಲ ತಮ್ಮ ಜನಪ್ರತಿನಿಧಿಗಳನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಅವರು ಬಿಜೆಪಿ ಜೊತೆಗಿದ್ದರೆ ಉತ್ತಮ ಎಂದೂ ಸುಧಾಕರ್ ಸಲಹೆ ನೀಡಿದರು.
ಯು.ಕೆ. ರಾಷ್ಟ್ರದಿಂದ ಬಂದವರಲ್ಲಿ 30 ಜನರಿಗೆ ಪಾಸಿಟಿವ್ ಆಗಿದ್ದು, ಅವರ ಸಂಪರ್ಕಿತರ ಪೈಕಿ ನಾಲ್ಕು ಮಂದಿಗೆ ಪಾಸಿಟಿವ್ ಆಗಿತ್ತು. ಅವರಲ್ಲಿ ಏಳು ಜನರಿಗೆ ಮಾತ್ರ ರೂಪಾಂತರಿ ಕೊರೋನಾ ಬಂದಿದೆ. ಮಾಹಿತಿ ಪತ್ತೆಯಾಗದ 199 ಮಂದಿಯ ಪೈಕಿ 80 ಜನರು ವಿದೇಶಿ ಪ್ರಜೆಗಳಾಗಿದ್ದು, ಎಲ್ಲರ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದರು.
ವರದಿ: ನವೀನ್ ಕುಮಾರ್
Published by:
Vijayasarthy SN
First published:
January 2, 2021, 10:43 AM IST