ಕಲಬುರ್ಗಿ(ಜೂ.10): ಎಸ್ಕಾರ್ಟ್ ವಾಹನಕ್ಕಾಗಿ ಕೊಲೆ ಬೆದರಿಕೆ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ತಂತ್ರ ಹೆಣೆದಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಗೆ ಜೀವ ಬೆದರಿಕೆ ಕರೆ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಖರ್ಗೆ ಅವರಿಗೆ ಎಸ್ಕಾರ್ಟ್ , ಪೊಲೀಸ್ ವಾಹನಗಳು ಇರುತಿತ್ತು. ರಾಜ್ಯಸಭಾ ಸದಸ್ಯರಿಗೆ ಕೇವಲ ಕಾರ್ ಮಾತ್ರ ಇರುತ್ತೆ. ಇದರಿಂದಾಗಿ ಜೀವಭಯ ಇದೆ ಎನ್ನುವ ಮುಲಕ ಭದ್ರತೆ ಹೆಚ್ಚಿಸಿಕೊಳ್ಳಲು ತಂತ್ರ ಮಾಡಿರಬಹುದು ಎಂದಿದ್ದಾರೆ.
ನಮ್ಮಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭಾ ಸ್ಥಾನ ನೀಡಲಾಗಿದೆ. ಇದರಿಂದ ಮಲ್ಲಿಕಾರ್ಜು ಖರ್ಗೆ ಅವರಿಗೆ ಮುಜುಗರ ಆಗಿರಬಹುದು. ಮುಜುಗರ ತಪ್ಪಿಸಿಕೊಳ್ಳುಲು ಈ ರೀತಿ ಸುಳ್ಳು ದೂರು ನೀಡಿರಬಹುದು ಎಂದು ಕಟೀಲ್ ಲೇವಡಿ ಮಾಡಿದ್ದಾರೆ.
ಖರ್ಗೆಗೆ ಕೊಲೆ ಬೆದರಿಕೆ ಖಂಡಿಸಿ ಪ್ರತಿಭಟನೆ:
ಎಐಸಿಸಿ ಕಾರ್ಯದರ್ಶಿ, ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಲೆ ಬೆದರಿಕೆ ಕರೆ ಖಂಡಿಸಿ ಕಲಬುರ್ಗಿಯಲ್ಲಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಿಜೆಪಿ ಹಾಗೂ ಸಿಎಂ ವಿರುದ್ದ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು, ಬೆದರಿಕೆ ಕರೆ ಮಾಡಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆಯೂ ಆಗ್ರಹಿಸಿದರು.
ಇದನ್ನೂ ಓದಿ : ಕೊಟ್ಟ ಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ ; ಡಿಕೆಶಿಗೆ ರೇಣುಕಾಚಾರ್ಯ ತಿರುಗೇಟು
ರಾಜ್ಯಸಭೆಗೆ ಅಚ್ಚರಿಯ ಹೆಸರುಗಳು ಆಯ್ಕೆಯಾದಂತೆ ವಿಧಾನ ಪರಿಷತ್ ಅಭ್ಯರ್ಥಿಗಳೂ ಆಗಬಹುದೆಂಬುದನ್ನು ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ರಾಜ್ಯಸಭೆಗೆ ಅಚ್ಚರಿಯ ಹೆಸರುಗಳ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿದೇವೆ. ಒಂದು ರಾಜಕೀಯ ಪಕ್ಷ ಹೇಗೆಲ್ಲ ವಿಚಾರ ಮಾಡಬಹುದು ಎನ್ನುವುದನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ತೋರಿಸಿ ಕೊಟ್ಟಿದ್ದೇವೆ. ವಿಧಾನ ಪರಿಷತ್ತಿನಲ್ಲಿ ಇದೆ ರೀತಿಯ ಅಚ್ಚರಿಯ ಆಯ್ಕೆಯೇ ? ಎನ್ನುವ ಬಗ್ಗೆ ಕಾಯ್ದು ನೋಡಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ