ಮೈಸೂರು; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಕುಮಾರ್ ಕಟೀಲ್ ಒಬ್ಬ ಪೆದ್ದನ ರೀತಿ ಮಾತನಾಡುತ್ತಾರೆ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ಗಂಭೀರತೆ ಇಲ್ಲದೆ ಹೇಳಿಕೆ ಕೊಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ನಳಿನ್ ಕುಮಾರ್ ಕಟೀಲ್ ಅವರದ್ದೆ ಒಂದು ಗುಂಪಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಹಾಗೂ ಸಿಎಂ ವಿರುದ್ದ ಯತ್ನಾಳ್ ಹೇಳಿಕೆಗಳೆಲ್ಲ ಆ ಗುಂಪಿನಿಂದಲೇ ಬರೋದು. ಯತ್ನಾಳ್ ಆ ರೀತಿ ಹೇಳಿಕೆ ನೀಡಿದರೂ ಅವರ ಮೇಲೆ ಕ್ರಮ ಯಾಕೀಲ್ಲ? ಬಿಜೆಪಿಯಲ್ಲೆ ವಿರೋಧ ಪಕ್ಷದವರಂತೆ ಮಾತನಾಡುವ ವ್ಯಕ್ತಿಗಳಿದ್ದಾರೆ. ಅವರೆಲ್ಲರಿಗೆ ಕಟೀಲ್ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ. ಆದರೂ ಕಟೀಲ್ ಅವರು ನಮ್ಮ ಪಕ್ಷದ ಹಿರಿಯ ಮುಖಂಡರಾದ ಖರ್ಗೆ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಪೆದ್ದನಂತೆ ಮಾತನಾಡುತ್ತಾರೆ. ಅನುಭವ ಹಾಗೂ ರಾಜಕೀಯ ಜ್ಞಾನವಿಲ್ಲದೆ ನೀಡುವ ಇವರ ಹೇಳಿಕೆಗಳಿಗೆ ನಾವು ಮಹತ್ವ ಕೊಡಬಾರದು ಎಂದು ಹೇಳಿದರು.
ರಾಜ್ಯದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ಯಾವತ್ತೂ ನೋಡಿಲ್ಲ. ಸಂಪುಟದಲ್ಲಿ ಸಚಿವರ ಮಧ್ಯೆ ಸಾಮರಸ್ಯವಿಲ್ಲ. ಹಲವು ಮಂತ್ರಿಗಳ ಖಾತೆ ಕ್ಷಣ ಕ್ಷಣಕ್ಕೆ ಬದಲಾಗುತ್ತೆ. ಯಾವುದೇ ಸಚಿವರಾಗಲಿ ಕೊಟ್ಟ ಖಾತೆಗಳಲ್ಲಿ ಪ್ರಗತಿ ತೋರಿಸಬೇಕು. ಆದರೆ ನನಗೆ ಇಥಂದ್ದೆ ಖಾತೆ ಬೇಕು ಅಂತ ಹಠ ಮಾಡ್ತಾರೆ. ಒಳ್ಳೆ ಆಡಳಿತ ತೋರುವಲ್ಲಿ ಸಿಎಂ ಯಡಿಯೂರಪ್ಪ ವಿಫಲವಾಗಿದ್ದಾರೆ. ಹಿಂದೆಯೂ ಒಳ್ಳೆ ಆಡಳಿತ ಕೊಡುವ ಅವಕಾಶವನ್ನು ಬಿಜೆಪಿ ಕಳೆದು ಕೊಂಡಿದೆ. ಈಗಲೂ ಅದನ್ನೇ ಮಾಡುತ್ತಿದೆ ಎಂದು ಆರೋಪಿಸಿದರು.
ಇದನ್ನು ಓದಿ: Mann ki Baat: ಗಣರಾಜ್ಯೋತ್ಸವ ದಿನ ತ್ರಿವರ್ಣ ಧ್ವಜಕ್ಕೆ ಅವಮಾನ; ವರ್ಷದ ಮೊದಲ ಮನ್ ಕೀ ಬಾತ್ನಲ್ಲಿ ಪ್ರಧಾನಿ ಮೋದಿ ಅಸಮಾಧಾನ
ಜೆಡಿಎಸ್ ಕೂಡ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ -ಜೆಡಿಎಸ್ ಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದೆ. ಕಾಂಗ್ರೆಸ್ ನಿಂದ ಒಂದು ಅಂಶವೂ ಜೆಡಿಎಸ್ ಗೆ ಅನ್ಯಾಯವಾಗಿಲ್ಲ. ಅವರು ಎಲ್ಲರ ಮುಂದೆ ಬಂದು ಹೇಳಲಿ ಅದ್ಯಾವ ವಿಚಾರಕ್ಕೆ ನಾವು ಅವರಿಗೆ ಅನ್ಯಾಯ ಮಾಡಿದ್ದೇವೆ ಅಂತ. ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವುದಕ್ಕೂ ಕಾಂಗ್ರೆಸ್ ಸಹಾಯ ಮಾಡಿದೆ. ಶಾಸಕರ ವಿಶ್ವಾಸ ಗಳಿಸಿದ್ದರೆ ಕುಮಾರಸ್ವಾಮಿ ಐದು ವರ್ಷ ಸಿಎಂ ಆಗಿ ಇರುತ್ತಿದ್ದರು. ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಇಬ್ಬರು ಸಹ ಒಳ್ಳೆಯ ಆಡಳಿತ ನೀಡುವ ಸುವರ್ಣಾವಕಾಶ ಕಳೆದುಕೊಂಡಿದ್ದಾರೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದರು.
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮೇಲೆ ನಾನು ರಾಜ್ಯ ರಾಜಕೀಯಕ್ಕೆ ಬರುವುದರ ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ. ಈ ಸಂದರ್ಭದಲ್ಲಿ ಅದು ಅಪ್ರಸ್ತುತ ವಿಚಾರವಾಗಿದೆ. ನನಗೆ ಯಾವುದೇ ಆಸೆ ಇಲ್ಲ. ನನಗೆ ಜೀವನ ಕೊಟ್ಟ ಪಕ್ಷ ಕಾಂಗ್ರೆಸ್. ನಾನು ಕಾಂಗ್ರೆಸ್ ಪಕ್ಷದಿಂದ ಯಾವುದನ್ನು ನಿರೀಕ್ಷೆ ಮಾಡಿಲ್ಲ. ನಾನು ಸೋತಾಗಲೂ ಪಕ್ಷ ನನ್ನ ಬಿಟ್ಟಿಲ್ಲ. ನಾನು ಸೋತೆ ಅಂತ ಕೆಲಸ ಮಾಡುವುದನ್ನು ಬಿಟ್ಟಿಲ್ಲ. ನಾನು ಸದಾ ಜನರ ಜೊತೆ ಇದ್ದೇನೆ. ನಾನು ಯಾವುದಕ್ಕೂ ಆಸೆ ಪಡಲ್ಲ. ಆದ್ರೆ ಈಗ ಸಿಕ್ಕಿರುವ ಅವಕಾಶ ಬಳಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಅಂತ ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ