HOME » NEWS » District » BJP MP MUNISWAMY RELEASES AUDIO AGAINST CONGRESS MLA NANJE GOWDA RRK SNVS

ನಂಜೇಗೌಡ ವಿರುದ್ಧ ಸಂಸದ ಮುನಿಸ್ವಾಮಿ ಆಡಿಯೋ ಬಾಂಬ್; ಆರೋಪ ಸಾಬೀತಾದರೆ ರಾಜೀನಾಮೆಗೆ ಸಿದ್ಧ ಎಂದ ಕೈ ಶಾಸಕ

ಬಿಜೆಪಿ ಹಾಗೂ ಪಕ್ಷೇತರ ಪುರಸಭಾ ಸದಸ್ಯರನ್ನು ಸೆಳೆಯಲು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಪ್ರಯತ್ನಿಸುತ್ತಿರುವ ಆಡಿಯೋವೊಂದನ್ನು ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಬಿಡುಗಡೆ ಮಾಡಿದ್ದಾರೆ.

news18-kannada
Updated:November 9, 2020, 9:59 AM IST
ನಂಜೇಗೌಡ ವಿರುದ್ಧ ಸಂಸದ ಮುನಿಸ್ವಾಮಿ ಆಡಿಯೋ ಬಾಂಬ್; ಆರೋಪ ಸಾಬೀತಾದರೆ ರಾಜೀನಾಮೆಗೆ ಸಿದ್ಧ ಎಂದ ಕೈ ಶಾಸಕ
ಕೆ.ವೈ. ನಂಜೇಗೌಡ (ಮಧ್ಯದಲ್ಲಿರುವವರು)
  • Share this:
ಕೋಲಾರ: ಜಿಲ್ಲೆಯ ಮಾಲೂರು ಪುರಸಭೆ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆ ನಿಗದಿ ನಂತರ, ಬಿಜೆಪಿ ಕಾಂಗ್ರೆಸ್ ಮಧ್ಯೆ ತಿಕ್ಕಾಟ ಆರಂಭವಾಗಿದೆ. ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಮತ್ತು ಶಾಸಕರ ಬೆಂಬಲಿಗರು ಬಿಜೆಪಿ ಹಾಗು ಪಕ್ಷೇತರ ಪುರಸಭಾ ಸದಸ್ಯರಿಗೆ ಹಣದ ಆಮಿಷ ಒಡ್ಡಿರುವ ಆಡಿಯೋವನ್ನ ಸಂಸದ ಎಸ್ ಮುನಿಸ್ವಾಮಿ ಬಹಿರಂಗ ಪಡಿಸಿದ್ದಾರೆ. ಆಡಿಯೋದಲ್ಲಿ ಬಿಜೆಪಿ ಸದಸ್ಯ ರಾಮೂಮುರ್ತಿ, ಪಕ್ಷೇತರ ಸದಸ್ಯ ರಾಜಪ್ಪ ಎನ್ನುವರ ಜೊತೆಗೆ ನಂಜೇಗೌಡರು ಮಾತನಾಡಿ, ನೀನು ಬಿಜೆಪಿಗೆ ಬೆಂಬಲ ಕೊಡು ಎಂದಿದ್ದಾರೆ. ಪಕ್ಷೇತರ ಸದಸ್ಯ ಪಚ್ಚಪ್ಪ ಎನ್ನುವರಿಗೆ ಶಾಸಕ ನಂಜೇಗೌಡ ಅವರ ಬೆಂಬಲಿಗ, ಕಾಂಗ್ರೆಸ್ ವಾರ್ಡ್ ಸದಸ್ಯ ಶಂಕರಪ್ಪ ಮಾತನಾಡಿದ್ದು, 20 ಕೊಡೊದಾಗಿ ಆಫರ್ ನೀಡಿ ಕಾಂಗ್ರೆಸ್ ಬೆಂಬಲಿಸುವಂತೆ ಹೇಳಿರುವ ಆಡಿಯೊ ವೈರಲ್ ಆಗಿದ್ದು ಸಂಚಲನ ಮೂಡಿಸಿದೆ.

ನಂಜೇಗೌಡ ಸವಾಲ್: ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋದಲ್ಲಿ, ಶಾಸಕ ನಂಜೇಗೌಡ ಹಾಗು ಬೆಂಬಲಿಗರು ಹಣದ ಆಮಿಷವನ್ನ ಒಡ್ಡಿದ್ದಾರೆಂದು ಬಿಜೆಪಿ ಆರೋಪವಾಗಿದೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ನಂಜೇಗೌಡ, ನಾನು ಆಮಿಷವೊಡ್ಡಿರುವ ಆಡಿಯೋ ಇದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವೆ ಎಂದು ಆಡಿಯೋ ಬಿಡುಗಡೆ ಆಗುವುದಕ್ಕೂ ಮೊದಲ ಸವಾಲು ಹಾಕಿದ್ದರು. ಬಳಿಕ ಬಿಜೆಪಿ ನಾಯಕರು ಆಡಿಯೋ ರಿಲೀಸ್ ಮಾಡಿದ ನಂತರ, ಅದಕ್ಕೆ ಸ್ಪಷ್ಟನೆ ನೀಡಿದ ಮಾಲೂರು ಶಾಸಕರು, ನಾನು ಯಾರಿಗು ಹಣದ ಆಮಿಷ ನೀಡಿ ಬೆಂಬಲ ಕೊಡಿ ಎಂದಿಲ್ಲ. ಪಕ್ಷೇತರ ಸದಸ್ಯರನ್ನ ಬೆಂಬಲಿಸಲು ಕೇಳಿದ್ದೇನೆ. ಆಡಿಯೋದಲ್ಲಿ 20 ಸಂಖ್ಯೆ ಹೇಳುವ ಧ್ವನಿ ನನ್ನದಲ್ಲ, ಚುನಾವಣೆ ಮುಂದೂಡಲು ಬಿಜೆಪಿ ಅವರೇ ಯಾವುದೋ ಧ್ವನಿಯನ್ನ ಮಿಮಿಕ್ರಿ ಮಾಡಿ ಆರೋಪ ಮಾಡ್ತಿದ್ದಾರೆ. ಆಪರೇಷನ್ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಆಡಿಯೋ ಆರೋಪ ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ಗ್ರಾಮ ಪಂಚಾಯತ್ ಚುನಾವಣೆ ಸಮೀಪ ಹಿನ್ನೆಲೆ; ಸಾವಿನ‌ ಮನೆಯಲ್ಲೂ ಬಿಜೆಪಿ-ಜೆಡಿಎಸ್​ ಸಾಂತ್ವನದ ರಾಜಕೀಯ

ಇದಕ್ಕೂ ಮುನ್ನ ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ.ವೈ. ನಂಜೇಗೌಡ ಮತ್ತು ಚಂದ್ರಾರೆಡ್ಡಿ, ಮಾಲೂರು ಪುರಸಭೆ ಚುನಾವಣೆ ಮುಂದೂಡಲು ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಅಧಿಕಾರಿಗಳ ಮೇಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದರು. ನಿಗದಿಯಂತೆ ನವೆಂಬರ್ 10 ರಂದು ಚುನಾವಣೆ ನಡೆಯದೇ ಹೋದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾಮಟ್ಟದ ಅಧಿಕಾರಿಗಳು ರಾಜಕಾರಣಿಗಳ ಕೈ ಗೊಂಬೆಯಂತೆ ವರ್ತಿಸಬಾರದು ಎಂದೂ ಅಧಿಕಾರಿಗಳ ವಿರುದ್ದ ಬೇಸರ ಹೊರಹಾಕಿದರು.

ಶಾಸಕ ನಂಜೇಗೌಡ ರಾಜಿನಾಮೆಗೆ ಸಂಸದ ಎಸ್ ಮುನಿಸ್ವಾಮಿ ಆಗ್ರಹ:

ಶಾಸಕ ಕೆವೈ ನಂಜೇಗೌಡ ಆರೋಪಗಳಿಗೆ ತಿರುಗೇಟು ನೀಡಿದ ಕೋಲಾರ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ, ಹಣದ ಆಮಿಷವೊಡ್ಡಿ ನಮ್ಮ‌ ಪುರಸ‌ಭಾ ಸದಸ್ಯರನ್ನ ಸೆಳೆದಿದ್ದಾರೆ. ಈಗಾಗಲೇ ಒಬ್ಬರನ್ನ ಕರೆದೊಯ್ದಿದ್ದಾರೆ. ಈ ಬಗ್ಗೆ ನಾವು ದೂರು ನೀಡಿದ್ದೇವೆ. ಚುನಾವಣೆ ಮುಂದೂಡಿ ಎಂದು ಬಿಜೆಪಿ ಮನವಿ ಮಾಡಿಲ್ಲ. ಚುನಾವಣೆ ನ್ಯಾಯಯುತವಾಗಿ ನಡೆಯಲಿ ಎಂಬುದು ನಮ್ಮ ಆಗ್ರಹ. ಶಾಸಕ ನಂಜೇಗೌಡ ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಅದೇ ಹಣ ನೀಡಿ ಈಗ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಲು ಹೊರಟಿದ್ದಾರೆ. ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲು ದೂರು ನೀಡಿರುವುದಾಗಿ ತಿಳಿಸಿದರು.

ಒಟ್ಟಿನಲ್ಲಿ ಮಾಲೂರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯು ಬಿಜೆಪಿ, ಕಾಂಗ್ರೆಸ್ ಮಧ್ಯೆ ಪ್ರತಿಷ್ಟೆಯಾಗಿ ಪರಿಣಮಿಸಿದೆ. ಇದೀಗ ಚುನಾವಣೆ ದಿನಾಂಕ‌ ಮುಂದೂಡಿಕೆ ಆಗುವ‌ ಆತಂಕ ಕಾಂಗ್ರೆಸ್ ವ್ಯಕ್ತಪಡಿಸಿದ್ದು, ನಾವೂ ಚುನಾವಣೆಗೆ ತಯಾರಿದ್ದೇವೆ ಎಂದು ಸಂಸದ ಎಸ್ ಮುನಿಸ್ವಾಮಿ ಸ್ಪಷ್ಟಪಡಿಸಿದ್ದಾರೆ.ವರದಿ: ರಘುರಾಜ್
Published by: Vijayasarthy SN
First published: November 9, 2020, 9:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading