ಪೀಜ್ಜಾ, ಬರ್ಗರ್ ತಿನ್ನುವ ದಳ್ಳಾಳಿಗಳಿಂದ ಪ್ರತಿಭಟನೆ: ‘ರೈತ ಹೋರಾಟ’ಕ್ಕೆ ಸಂಸದ ಮುನಿಸ್ವಾಮಿ ವ್ಯಂಗ್ಯ

ದೆಹಲಿ ಬಳಿ ಕೇಂದ್ರದ ಕೃಷಿಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವವರು ರೈತರೇ ಅಲ್ಲ. ಅವರೆಲ್ಲಾ ಪೀಜ್ಜಾ, ಬರ್ಗರ್, ಕೆಎಫ್​ಸಿ ತಿನ್ನುವ ಹೈಟೆಕ್ ದಳ್ಳಾಳಿಗಳು ಎಂದು ಕೋಲಾರದ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಆರೋಪಿಸಿದ್ದಾರೆ.

ಕೋಲಾರ ಸಂಸದ ಎಸ್ ಮುನಿಸ್ವಾಮಿ

ಕೋಲಾರ ಸಂಸದ ಎಸ್ ಮುನಿಸ್ವಾಮಿ

  • Share this:
ಕೋಲಾರ: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆದುಕೊಳ್ಳುವಂತೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ರೈತರ ಹೋರಾಟ ಮುಂದುವರೆದಿದೆ. ದೆಹಲಿ ಹೊರಗೆ ಕೊರೆಯುವ ಚಳಿಯನ್ನು ಲೆಕ್ಕಿಸದೆ ಸಾವಿರಾರು ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, “ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಿರುವವರು ‘ರೈತರೇ ಅಲ್ಲ’. ಅವರೆಲ್ಲ ಹೈಟೆಕ್ ದಳ್ಳಾಳಿಗಳು” ಎಂದು ಕೋಲಾರ ಸಂಸದ ಎಸ್ ಮುನಿಸ್ವಾಮಿ ವಾಗ್ದಾಳಿ ನಡೆಸಿದರು.

ಕೋಲಾರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ, ಕೇಂದ್ರ ಸರ್ಕಾರದ ವಿರುದ್ದ ವಿಪಕ್ಷಗಳು ಕೆಲ ಸಂಘಟನೆಗಳನ್ನ ಎತ್ತಿಕಟ್ಟಿ ಹೋರಾಟಗಳನ್ನ ನಡೆಸುತ್ತಿವೆ. ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲದೆ ಆಡಳಿತ ನೀಡುತ್ತಿರುವುದನ್ನ ಕಾಂಗ್ರೆಸ್ ಸಹಿಸುತ್ತಿಲ್ಲ. ಹೀಗಾಗಿ ರೈತರನ್ನ ಹಾಗು ದಳ್ಳಾಳಿಗಳನ್ನ ಕೇಂದ್ರದ ವಿರುದ್ದ ಎತ್ತಿ ಕಟ್ಟಿ ಹೋರಾಟಗಳನ್ನ ನಡೆಸುತ್ತಿದೆ. ಮುಂದೆ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ವಿಚಾರ: ಮುಂದುವರಿದ ಐಪಿಎಸ್ ಅಧಿಕಾರಿಗಳ ಲೆಟರ್ ವಾರ್

‘ಪಿಜ್ಜಾ, ಬರ್ಗರ್, ಕೆಎಫ್​ಸಿ ತಿನ್ನುವ ದಳ್ಳಾಳಿಗಳಿಂದ ಪ್ರತಿಭಟನೆ’:

ಕಿಸಾನ್ ಸಮ್ಮಾನ್ ಯೋಜನೆಯಡಿ ಕೋಟಿ ಕೋಟಿ ರೈತರಿಗೆ ಸಾವಿರಾರು ಕೋಟಿ ರೂಪಾಯಿ ಸಹಾಯಧನ ರೈತರ ಖಾತೆಗಳಿಗೆ ವರ್ಗಾವಣೆಯಾಗಿದೆ. ನೂತವಾಗಿ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳಿಂದ ರೈತರಿಗೆ ಯಾವುದು ಸಮಸ್ಯೆಯಾಗಲ್ಲ. ಕೇವಲ ದಳ್ಳಾಳಿಗಳಿಗೆ ಮಾತ್ರ ಹೊಡೆತ ಬೀಳಲಿದೆ. ಇದನ್ನ ಸಹಿಸಲಾಗದೆ ಪಂಜಾಬ್​ನಲ್ಲಿ ಪಿಜ್ಜಾ, ಬರ್ಗರ್, ಕೆಎಫ್​ಸಿ ತಿಂದು ಜಿಮ್ ಮಾಡುವವರು ಇದೀಗ ಹೋರಾಟಕ್ಕೆ ಧುಮುಕಿದ್ದಾರೆ. ಅವರ್ಯಾರೂ ರೈತರೇ ಅಲ್ಲ, ನಕಲಿ ರೈತರು ಎಂದು ಕೋಲಾರ ಸಂಸದರು ವಾಗ್ದಾಳಿ ನಡೆಸಿದರು.

ಪಂಜಾಬ್​ನಲ್ಲಿನ‌ ಶ್ರೀಮಂತ ದಳ್ಳಾಳಿಗಳು ಅಕ್ಕ ಪಕ್ಕದ ರಾಜ್ಯದ ಸಣ್ಣ ಪುಟ್ಟ ರೈತರ ಜಮೀನುಗಳನ್ನ ಖರೀದಿ ಮಾಡಿ ಆಹಾರಧಾನ್ಯಗಳನ್ನ ಬೆಳೆದು, ಗೋದಾಮಿನಲ್ಲಿ ಇರಿಸಿ ಆಹಾರ ಧಾನ್ಯಗಳ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಧಾನ್ಯಗಳನ್ನು ಮಾರಾಟ ಮಾಡುವುದು ಮಾಡುತ್ತಿದ್ದಾರೆ ಎಂದು ಮುನಿಸ್ವಾಮಿ ಈ ವೇಳೆ ಕಿಡಿಕಾರಿದರು.

ಇದನ್ನೂ ಓದಿ: ಹಾಲಿನ ಡೈರಿಯಲ್ಲಿ ಸರಕಾರಿ ಆಸ್ಪತ್ರೆ; ಕಟ್ಟಡಕ್ಕೆ ಅನುದಾನ ಬಂದರೂ ಜಾಗ ನೀಡದ ಸ್ಥಳೀಯ ಆಡಳಿತ

ರೈತರ ಆದಾಯವನ್ನ‌ ದ್ವಿಗುಣ ಮಾಡಲೆಂದು ಮೋದಿಯವರು ಕೃಷಿ ಕಾಯ್ದೆಗಳನ್ನ ಜಾರಿಗೆ ತಂದಿದ್ದಾರೆ. ಕೇರಳದಲ್ಲಿ ಎಪಿಎಂಸಿ ವ್ಯವಸ್ಥೆಯೇ ಇಲ್ಲ. ಆದರೆ, ದೇಶದಲ್ಲಿ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯನ್ನ ರದ್ದು ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಕಾಂಗ್ರೆಸ್ ಪಕ್ಷ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ರೈತರು ಇವರ ಹೋರಾಟಕ್ಕೆ ಮನ್ನಣೆ ನೀಡಬಾರದು ಎಂದು ಸಂಸದ ಎಸ್ ಮುನಿಸ್ವಾಮಿ ಮನವಿ ಮಾಡಿದರು.

ಒಟ್ಟಿನಲ್ಲಿ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನ ರಾಜಕೀಯ ಪ್ರೇರಿತ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ದ ವಾಗ್ದಾಳಿಯನ್ನ ಮುಂದುವರೆಸಿದ್ದಾರೆ.

ವರದಿ: ರಘುರಾಜ್
Published by:Vijayasarthy SN
First published: