ವಿಜಯಪುರ: ಬಿಜೆಪಿಯವರು ತಾಲಿಬಾನಿಗಳು ಎಂಬ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah )ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (basanagouda patil)ತಿರುಗೇಟು ನೀಡಿದರು. ಸಿದ್ದರಾಮಯ್ಯನವರೇ ಟಿಪ್ಪು ಸುಲ್ತಾನ್ (Tipu Sultan)ವಂಶಸ್ಥರು. ಅವರಿಗೆ ಧರ್ಮ, ದೇಶ, ಸಂಸ್ಕೃತಿ ಬಗ್ಗೆ ಗೊತ್ತಿಲ್ಲ. ಸ್ವಾರ್ಥಕ್ಕಾಗಿ, ಓಟ್ ಬ್ಯಾಂಕ್ ಗಾಗಿ ಅವಹೇಳನಕಾರಿಯಾಗಿ ಮಾತನಾಡ್ತಾರೆ. ಮಾಜಿ ಸಿಎಂ, ವಿರೋಧ ಪಕ್ಷದ ನಾಯಕರಾಗಿ ಗೌರವಯುತವಾಗಿ ಮಾತನಾಡಬೇಕು. ತಾಲಿಬಾನಿಗಳು ಕಾಂಗ್ರೆಸ್ ನಲ್ಲಿದ್ದಾರೆ, ಕಾಂಗ್ರೆಸ್ ತಾಲಿಬಾನ್ ಪ್ರತಿರೂಪವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನಲ್ಲಿರುವವರು ಛೋಟಾ ಇಮ್ರಾನ್ ಖಾನ್ ಗಳು
ಕಾಶ್ಮೀರದ ವಿಚಾರದಲ್ಲಿ ಇವರೇಕೆ ಬೆಂಬಲ ಕೊಡಲಿಲ್ಲ? ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕಾಶ್ಮೀರದಲ್ಲಿ 370 ಆರ್ಟಿಕಲ್ ಜಾರಿಗೆ ತರ್ತೇವೆ ಎಂದು ಕಾಂಗ್ರಸ್ ನ ಓರ್ವ ಹಿರಿಯ ಮುಖಂಡ ಹೇಳ್ತಾರೆ. ಕಾಂಗ್ರೆಸ್ ಇವತ್ತು ಪಾಕಿಸ್ತಾನಿ ಪಾರ್ಟಿಯಾಗಿ ಪರಿವರ್ತನೆ ಆಗಿದೆ. ಪಾಕಿಸ್ತಾನದ ಇಮ್ರಾನ್ ಖಾನ್ ಮಾತನಾಡಿದಂತೆ ಮಾತನಾಡ್ತಾರೆ. ಹಾಗಾಗಿ ಕಾಂಗ್ರೆಸ್ ನಲ್ಲಿರುವವರು ಛೋಟಾ ಇಮ್ರಾನ್ ಖಾನ್ ಗಳು ಎಂದು ಕುಟುಕಿದರು.
ಮೋದಿಗೇನು ಸಂಸಾರ ಇದೆಯಾ..?
ಪ್ರಧಾನಿ ಮೋದಿ ಅವರು ದೇಶವನ್ನು ಮಾರುತ್ತಾರೆ ಎಂದು ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ. ಮೋದಿ ಯಾಕೆ ದೇಶವನ್ನು ಮಾರುತ್ತಾರೆ? ಅವರದ್ದೇನು ಸಂಸಾರ ಇದೆಯಾ? ಇಟಲಿಯಿಂದ ಬಂದಂತಹ ಒಂದು ಕುಟುಂಬ ಇಡಿ ದೇಶವನ್ನೇ ಲೂಟಿ ಮಾಡಿದೆ. ಮಾಜಿ ಪ್ರಧಾನಿ ನೆಹರೂ ಅವರಿಂದ ಹಿಡಿದು ಈ ದೇಶವನ್ನು ಲೂಟಿ ಮಾಡಿದ್ದಾರೆ. ಇವರಿಗೆ ಈ ದೇಶದ ಬಗ್ಗೆ ಭಕ್ತಿಯಿಲ್ಲ, ಶ್ರದ್ಧೆ ಇಲ್ಲ, ಭಾರತದ ಬಗ್ಗೆ ಗೌರವ ಇಲ್ಲ. ಯಾವ ವಿಷಯದ ಬಗ್ಗೆ ಮಾತನಾಡಬೇಕು ಎಂಬ ಕನಿಷ್ಠ ಪರಿಜ್ಞಾನ ಇಲ್ಲ. ಇದರಿಂದಾಗಿ ಕಾಂಗ್ರೆಸ್ ನಲ್ಲಿ ಕೆಲವರು ನಗೆಪಾಟಿಲಿಗೆ ಈಡಾಗುತ್ತಿದ್ದಾರೆ, ಪಾಕಿಸ್ತಾನಿ ಏಜಂಟರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು
ಕಾಂಗ್ರೆಸ್ ನಲ್ಲಿ ಕೆಲವು ದೇಶ ಭಕ್ತರು ಮಾತನಾಡದೆ ಸುಮ್ಮನೆ ಕುಳಿತಿದ್ದಾರೆ. ದೇಶಕ್ಕೆ ಅನ್ಯಾಯ ಆದಾಗ ಮಾತನಾಡುವ ಧೈರ್ಯ ಮಾಡದಿದ್ರೆ ಅವರು ಗುಲಾಮಗಿರಿಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಬಿಜೆಪಿ ದೇಶಭಕ್ತರ ಪಕ್ಷವಾಗಿದೆ, ಎಲ್ಲರೂ ಶಾಂತಿ ನೆಮ್ಮದಿಯಿಂದ ಜೀವನ ಮಾಡಬೇಕು ಎಂಬುದು ಬಿಜೆಪಿ ಗುರಿಯಾಗಿದೆ ಎಂದರು.
ಇದನ್ನೂ ಓದಿ: Bharat Bandh| ರೈತರು ಕರೆ ನೀಡಿರುವ ಭಾರತ್ ಬಂದ್; ಪಂಜಾಬ್-ಹರಿಯಾಣ-ಬಂಗಾಳ ಸ್ತಬ್ಧ, ಚೆನ್ನೈನಲ್ಲಿ ರೈಲ್ ರೋಖೋ!
ನಕಲಿ ಹೋರಾಟಗಾರರು
ಇನ್ನು ಇಂದು ಕರೆ ನೀಡಿರುವ ಭಾರತ್ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಪಂಜಾಬ್ ಒಂದು ಬಿಟ್ಟರೇ ಎಲ್ಲಿಯೂ ಪ್ರತಿಭಟನೆಯಾಗ್ತಿಲ್ಲ. ಕರ್ನಾಟದ ಬಹುತೇಕ ಕಡೆಗಳಲ್ಲಿ ಬಂದ್ ವಿಫಲವಾಗಿದೆ. ಇದಕ್ಕಾಗಿ ರೈತರಿಗೆ ಧನ್ಯವಾದ ಹೇಳ್ತೀನಿ. ಪ್ರಧಾನಿ ಮೋದಿ ಜಾರಿಗೆ ತಂದಿರೋದು ರೈತ ವಿರೋಧಿ ಕಾನೂನು ಅಲ್ಲ. ಬಂದ್ ವಿಫಲವಾಗಿರೋದೆ ಇದಕ್ಕೆ ಸಾಕ್ಷಿ. ಮೋದಿ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ. ಕೇಂದ್ರದ ರೈತ ಕಾನೂನು ವಿರೋಧಿಸುತ್ತಿರೋರು ನಕಲಿ ಹೋರಾಟಗಾರರು. ಅವರ ಉಪಜೀವನವೇ ಹೋರಾಟದಿಂದ ನಡೆದಿದೆ ಎಂದು ಟೀಕಿಸಿದರು.
ಟಿಕಾಯತ್ ಪಾಕಿಸ್ತಾನದ ಎಜೆಂಟ್
ದೇಶದಲ್ಲಿ ಆಂತರಿಕ ಭಯೋತ್ಪಾದನೆಗೆ ಪ್ರಚೋದನೆ ನೀಡ್ತಿದ್ದಾರೆ. ರೈತ ಹೋರಾಟದ ಮುಖ್ಯಸ್ಥ ಟಿಕಾಯತ್ ಪಾಕಿಸ್ತಾನದ ಎಜೆಂಟ್ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪಾಕಿಸ್ತಾನ್, ಚೀನಾ ಎಜೆಂಟರಾಗಿ ಕೆಲಸ ಮಾಡ್ತಿದ್ದಾರೆ.ರೈತರ ಹೆಸರಲ್ಲಿ ದಂಗೆ ಎಬ್ಬಿಸಬೇಕು. ಭಾರತವನ್ನು ಅಸ್ಥಿರ ಮಾಡಬೇಕು, ಭಾರತದವನ್ನ ಜಗತ್ತಿನ ಎದುರು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಷಡ್ಯಂತ್ರ ಇದು ಎಂದು ಯತ್ನಾಳ್ ಆರೋಪಿಸಿದರು. ರೈತ ಹೋರಾಟವೇ ಒಂದು ಷಡ್ಯಂತ್ರ ಎಂದು ಯತ್ನಾಳ್ ಅಸಮಾಧಾನ ಹೊರ ಹಾಕಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ