• Home
  • »
  • News
  • »
  • district
  • »
  • ಕನ್ನಡ ಹೋರಾಟಗಾರರ ಬಗ್ಗೆ ಶಾಸಕ ಯತ್ನಾಳ್ ಟೀಕೆ : ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆಕ್ರೋಶ

ಕನ್ನಡ ಹೋರಾಟಗಾರರ ಬಗ್ಗೆ ಶಾಸಕ ಯತ್ನಾಳ್ ಟೀಕೆ : ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆಕ್ರೋಶ

ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ಸದಸ್ಯರು

ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ಸದಸ್ಯರು

ಯತ್ನಾಳ್ ಅವರು ಮರಾಠಿಗರ ಏಜೆಂಟರಂತೆ ವರ್ತಿಸುತ್ತಿದ್ದಾರೆ, ಅವರು  ಕರ್ನಾಟಕದ ಇತಿಹಾಸ, ಸಂಸ್ಕೃತಿ ಗೊತ್ತಿಲ್ಲದ ಅವಿವೇಕಿ ರಾಜಕಾರಣಿ ಎಂದು ಕನ್ನಡ ಸೇನಾಪಡೆ ಅಧ್ಯಕ್ಷ ಶ್ರೀನಿವಾಸಗೌಡ ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು

  • Share this:

ಚಾಮರಾಜನಗರ(ನವೆಂಬರ್. 22) : ಕನ್ನಡ ಚಳವಳಿಗಾರರನ್ನು ರೋಲ್ ಕಾಲ್ ಚಳವಳಿಗಾರೆಂದು ಟೀಕಿಸಿರುವ ಬಿಜೆಪಿ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ ಯತ್ನಾಳ್ ವಿರುದ್ದ ಗಡಿ ಜಿಲ್ಲೆ ಚಾಮರಾಜನಗರದಲ್ಲು ಭಾರೀ ವಿರೋಧ ವ್ಯಕ್ತವಾಗಿದೆ. ಕನ್ನಡ ನೆಲ ಜಲ ಭಾಷೆಗೆ ಧಕ್ಕೆಯುಂಟಾದಾಗ ಮೊದಲ ಪ್ರತಿಭಟನೆ ವ್ಯಕ್ತವಾಗುವುದೇ ರಾಜ್ಯದ ದಕ್ಷಿಣ ಭಾಗದ ತುತ್ತ ತುದಿಯಲ್ಲಿರುವ ಚಾಮರಾಜನಗರದಲ್ಲಿ. ಇಲ್ಲಿನ ಕನ್ನಡಪರ ಹೋರಾಟಗಾರರು ಬಹಳ ಹಿಂದಿನಿಂದಲು ಸಕ್ರಿಯವಾಗಿದ್ದು,ಇದೀಗ ಬಸವನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆ ಇಲ್ಲಿನ ಕನ್ನಡ ಚಳವಳಿಗಾರರನ್ನು ಕೆರಳಿಸಿದೆ. ನಗರದಲ್ಲಿ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಯತ್ನಾಳ್ ವಿರುದ್ದ ಪ್ರತಿಭಟನೆ ನಡೆಸಿದರು.ಇಲ್ಲಿನ ಚಾಮರಾಜೇಶ್ವರ ಪಾರ್ಕ್ ನಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು ಯತ್ನಾಳ್ ಭಾವಚಿತ್ರಕ್ಕೆ ಕೊಳೆತ ಟೊಮ್ಯಾಟೊ ಹಣ್ಣಿನಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.


ಕೆಲ ಕಾಲ ರಸ್ತೆ ತಡೆ ನಡೆಸಿ ಯತ್ನಾಳ್ ವಿರುದ್ದ ಪ್ರತಿಭಟನೆ ನಡೆಸಿದರು.ಯತ್ನಾಳ್ ಅವರು ಮರಾಠಿಗರ ಏಜೆಂಟರಂತೆ ವರ್ತಿಸುತ್ತಿದ್ದಾರೆ, ಅವರು ಕರ್ನಾಟಕದ ಇತಿಹಾಸ, ಸಂಸ್ಕೃತಿ ಗೊತ್ತಿಲ್ಲದ ಅವಿವೇಕಿ ರಾಜಕಾರಣಿ ಎಂದು ಕನ್ನಡ ಸೇನಾಪಡೆ ಅಧ್ಯಕ್ಷ ಶ್ರೀನಿವಾಸಗೌಡ ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.


ಕನ್ನಡಪರ ಹೋರಾಟಗಾರರು ಇಲ್ಲದಿದ್ದರೆ ಕರ್ನಾಟಕ ಛಿದ್ರವಾಗುತ್ತಿತ್ತು. ಬೆಂಗಳೂರಿನಲ್ಲಿ ಕನ್ನಡವನ್ನು ಕನ್ನಡಿ ಹಿಡಿದು ಹುಡಕಬೇಕಾಗುತ್ತಿತ್ತು ಎಂಬ ಸಾಮಾನ್ಯ ತಿಳುವಳಿಕೆಯು ಯತ್ನಾಳ್ ಅವರಿಗೆ ಇಲ್ಲವಾಗಿದೆ. ಬಿಜೆಪಿಯಲ್ಲಿ ಅವರ ಅಸ್ತಿತ್ವ ಅಲುಗಾಡುತ್ತಿರುವುದರಿಂದ ಯತ್ನಾಳ್ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಬಿಜೆಪಿ ಹೈಕಮಾಂಡ್ ಮನವೊಲಿಸಿಕೊಳ್ಳಲು ಹೀಗೆ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಕೂಡಲೇ ಅವರು ಕನ್ನಡ ಚಳವಳಿಗಾರರ ಬೇಷರತ್  ಕ್ಷಮೆ ಯಾಚಿಸಬೇಕು ಎಂದು ಶ್ರೀನಿವಾಸಗೌಡ ಆಗ್ರಹಿಸಿದರು.


ಇದನ್ನೂ ಓದಿ : ಎಂಇಎಸ್ ಸಂಘಟನೆ ನಿಷೇಧಿಸಿ ಎಂದ ವಿಜಯಪುರ ಮರಾಠಿಗರು; ಯತ್ನಾಳ ವಿರುದ್ಧ ಕರವೇ ಕಾರ್ಯಕರ್ತರ ಪ್ರತಿಭಟನೆ


ಕನ್ನಡ ಪರ ನಕಲಿ ಹೋರಾಟಗಾರರು ಮತ್ತು ರೋಲಕಾಲ್ ಹೋರಾಟಗಾರರಿಗೆ ಮುಖ್ಯಮಂತ್ರಿಗಳು ಹೆದರಬಾರದು. ಮರಾಠ ನಿಗಮ ವಿರೋಧಿಸಿ ಕೆಲ ಕನ್ನಡ ಸಂಘಟನೆಯವರು ಡಿ. 5 ರಂದು  ನೀಡಿರುವ ಬಂದ್​ ಹೇಗೆ ನಡೆಯುತ್ತದೆ. ವಾಟಾಳ್​ ನಾಗರಾಜ ಮತ್ತು ಕನ್ನಡ ಪರ ಸಂಘಟನೆಗಳು ಹೇಗೆ ಬಂದ್ ಮಾಡುತ್ತಾರೋ ನೋಡೋಣ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದರು.  


ಕನ್ನಡದ ಹೆಸರಿನಲ್ಲಿ ಸುಮ್ಮನೆ ಹೋರಾಟ ಸಲ್ಲದು. ಸರಕಾರದಿಂದ ಪಡೆದ ರೂ. 50 ಲಕ್ಷ ಹಣವನ್ನು ಕನ್ನಡಪರ ಹೋರಾಟಗಾರರು ಎಲ್ಲ ಕನ್ನಡಪರ ಸಂಘಟನೆಗಳಿಗೆ ಹಂಚಿಕೆ ಮಾಡಿದ್ದಾರಾ ಎಂದು ಅವರು ಪ್ರಶ್ನಿಸಿದ್ದರು. ಇವರೆಲ್ಲ ಬೆಂಗಳೂರಿನಲ್ಲಿ ಕುಳಿತು ಹೋಟೇಲಿನಲ್ಲಿ ಕುಳಿತು ಹೋಟೇಲ್ ತಮ್ಮದೆಂದು ಹೇಳುತ್ತಾರೆ. ವಾಟಾಳ್​​ ನಾಗರಾಜ ಅವರಿಂದ ನಾವೇನು ಕಲಿಯಬೇಕಾಗಿಲ್ಲ ಎಂದಿದ್ದರು.

Published by:G Hareeshkumar
First published: