• Home
  • »
  • News
  • »
  • district
  • »
  • ಇವತ್ತು ನೋ ಕಮೆಂಟ್ ಎಂದ ಯತ್ನಾಳ; ಸಂಪುಟ ವಿಸ್ತರಣೆ ಬೆನ್ನಲ್ಲೇ ಮೌನಕ್ಕೆ ಶರಣಾದ ಬಿಜೆಪಿ ಫೈರ್ ಬ್ರಾಂಡ್

ಇವತ್ತು ನೋ ಕಮೆಂಟ್ ಎಂದ ಯತ್ನಾಳ; ಸಂಪುಟ ವಿಸ್ತರಣೆ ಬೆನ್ನಲ್ಲೇ ಮೌನಕ್ಕೆ ಶರಣಾದ ಬಿಜೆಪಿ ಫೈರ್ ಬ್ರಾಂಡ್

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ಈ ಮಧ್ಯೆ, ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಮೂರು ಜನ ಬಿಜೆಪಿ ಶಾಸಕರಿದ್ದೇವೆ.  ಯತ್ನಾಳ ಮತ್ತು ನಡಹಳ್ಳಿ ತಮಗಿಂತ ಹಿರಿಯರು. ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಆಗ್ರಹಿಸಿದ್ದಾರೆ.

  • Share this:

ವಿಜಯಪುರ (ಜ. 11); ಈಗ ರಾಜ್ಯ ಸಚಿವ ಸಂಪುಟದ ವಿಸ್ತರಣೆ, ಪುನಾರಚನೆಯ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಇತ್ತ ತಮಗನಿಸಿದ್ದನ್ನು ನೇರವಾಗಿ ಹೇಳುವ ಛಾತಿ ಹೊಂದಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಂದು ಮೌನಕ್ಕೆ ಶರಣಾಗಿದ್ದಾರೆ. ಪ್ರತಿದಿನ ಮಾಧ್ಯಮಗಳ ಪ್ರಶ್ನೆಗೆ ತಮ್ಮದೇ ಧಾಟಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಯತ್ನಾಳ, ಇಂದು ಮಾತ್ರ ಇವತ್ತು ಯಾವುದೇ ಇಂಟರವ್ಯೂವ್ ಇಲ್ಲ ಎಂದು ಹೇಳಿ ತಮ್ಮ ಕೊಠಡಿಗೆ ತೆರಳಿದ್ದು ಕುತೂಹಲ ಕೆರಳಿಸಿದೆ.


ಬಲ್ಲ ಮೂಲಗಳ ಪ್ರಕಾರ ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡುವ ಮತ್ತು ಆ ಮೂಲಕ ಬಿಜೆಪಿಯಲ್ಲಿ ಅಸಮಾಧಾನ ಹೋಗಲಾಡಿಸುವ ಪ್ರಯತ್ನವೂ ನಡೆಯುವ ನಿರೀಕ್ಷೆಯಿದೆ.  ಅಲ್ಲದೇ, ಬಿಜೆಪಿ ಹೈಕಮಾಂಡ್ ಕೂಡ ನೇರವಾಗಿ ಮತ್ತು ಧೈರ್ಯದಿಂದ ರಾಜಕೀಯ ಎದುರಾಳಿಗಳನ್ನು ಹಣಿಯುವ ಮತ್ತು ನಿರುತ್ತರರನ್ನಾಗಿ ಮಾಡುವ ನಾಯಕನ ಹುಡುಕಾಟದಲ್ಲಿದ್ದು, ಅದಕ್ಕೆ ಯತ್ನಾಳ ಹೇಳಿ ಮಾಡಿಸಿದ ವ್ಯಕ್ತಿ ಎಂದು ಈಗಾಗಲೇ ಒಂದು ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡಿದರೆ ಬಿಜೆಪಿಯಲ್ಲಿ ಅಸಮಾಧಾನವನ್ನು ತಣಿಸುವುದಷ್ಟೇ ಅಲ್ಲ, ಪ್ರತಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಅನುಕೂಲವಾಗುತ್ತದೆ.  ಅಷ್ಟೇ ಅಲ್ಲ, ಈ ಮೂಲಕ ಬಿಜೆಪಿಗೆ ಭವಿಷ್ಯದಲ್ಲಿ ಯಡಿಯೂರಪ್ಪ ನಂತರ ಮತ್ತೊಬ್ಬ ಯುವ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕನನ್ನು ರೂಪಿಸಿದಂತಾಗುತ್ತದೆ. ಆ ಮೂಲಕ ಲಿಂಗಾಯತ ಮತಬ್ಯಾಂಕ್ ಅನ್ನು ಭದ್ರಪಡಿಸುವ ಯೋಜನೆಯೂ ಇದರ ಹಿಂದೆ ಇದೆ ಎನ್ನಲಾಗಿದೆ.


ಆದರೆ, ಈ ಹಿಂದೆ ಯತ್ನಾಳ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರವಾಹ ಸಂದರ್ಭದಲ್ಲಿ ಅನುದಾನ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ, ಅಂದು ತಾವು ಈ ವಿಚಾರ ಪ್ರಸ್ತಾಪಿಸದಿದ್ದರೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರ ಬಿಜೆಪಿಯಲ್ಲಿ ನಡೆದಿತ್ತು ಎಂದು ಯತ್ನಾಳ ಕಳೆದ ವರ್ಷ ಹೇಳಿಕೆ ನೀಡಿದ್ದರು. ಆಗ ಯತ್ನಾಳ ಅವರಿಗೆ ಬಿಜೆಪಿ ಹೈಕಮಾಂಡ್ ನೊಟೀಸ್ ನೀಡಿತ್ತು. ಆದರೆ, ಅಂದು ಯತ್ನಾಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಬಿ.ಎಸ್. ಯಡಿಯೂರಪ್ಪ ಹೈಕಮಾಂಡ್ ಯತ್ನಾಳ ಅವರಿಗೆ ನೀಡಿದ ನೊಟೀಸಿಗೆ ಉತ್ತರ ಕೊಡಿಸಿ ಆ ಪ್ರಕರಣವನ್ನು ತಣ್ಣಗಾಗಿಸಿದ್ದರು. ಆದರೆ, ಈಗ ಸಿಎಂ ಬಿ. ಎಸ್. ಯಡಿಯೂರಪ್ಪ ತಮ್ಮ ಪುತ್ರನಿಗೆ ಆದ್ಯತೆ ನೀಡುತ್ತಿದ್ದು, ತಮ್ಮಂಥ ಹಿರಿಯ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಕಾರಣದಿಂದ ಯತ್ನಾಳ ಆಗಾಗ ಸಿಎಂ ಹಾಗೂ ಅವರ ಪುತ್ರನ ಬಗ್ಗೆ ಕಿಡಿ ಕಾರುತ್ತಲೇ ಇದ್ದಾರೆ. ಇದರಿಂದ ಸಿಎಂ ಕೂಡ ಒಳಗೊಳಗೆ ಸಿಟ್ಟಾಗಿದ್ದರೂ ಕೂಡ ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿಯಲ್ಲಿರುವ ಶಾಸಕರ ಅಸಮಾಧಾನವನ್ನು ತಣಿಸುವ ಪ್ರಯತ್ನಕ್ಕೆ ಒಪ್ಪಬಹುದು.  ಅಲ್ಲದೇ, ಯತ್ನಾಳ ಸಚಿವರಾದರೆ ತಮ್ಮ ಪರವಾಗಿ ಪ್ರತಿಪಕ್ಷಗಳ ವಿರುದ್ಧವೂ ಅವರ ಸೇವೆಯನ್ನು ಬಳಸುವ ಉದ್ದೇಶದಿಂದ ಸಿಎಂ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯತ್ನಾಳ ಸೇರ್ಪಡೆಗೆ ಸಮ್ಮತಿ ಸೂಚಿಸಬಹುದು ಎಂದು ಅರ್ಥೈಸಲಾಗುತ್ತಿದೆ.


ನಿನ್ನೆಯಷ್ಟೇ ತಾವು ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಚಿವರಾಗುವುದಿಲ್ಲ. ಇದು ತಮ್ಮ ನಿರ್ಣಯ. ಅಲ್ಲದೇ, ಸಿಎಂ ಕೂಡ ತಮ್ಮನ್ನು ಸಚಿವರನ್ನಾಗಿ ಮಾಡುವುದಿಲ್ಲ ಎಂದು ಯತ್ನಾಳ ಪ್ರತಿಕ್ರಿಯೆ ನೀಡಿದ್ದರು. ಆದರೆ, ನಿನ್ನೆ ಸಿಎಂ ದೆಹಲಿಯಿಂದ ಮರಳುತ್ತಿದ್ದಂತೆ ಜ. 13 ಅಥವಾ ಜ. 14 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಕೂಡ ಯತ್ನಾಳ ಅವರಿಗೆ ಸಚಿವ ಸ್ಥಾನ ನೀಡುವ ನಿಟ್ಟಿನಲ್ಲಿ ಉತ್ಸುಕತೆ ತೋರಿರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿಯೇ ಮತ್ತು ಈಗ ಹೇಗಿದ್ದರೂ ಇನ್ನೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಿರುವುದರಿಂದ ಮೌನವಾಗಿದ್ದಷ್ಟು ಸೂರ್ಯ ಪಥ ಬದಲಿಸುತ್ತಿದ್ದಂತೆ ತಮ್ಮ ರಾಜಕೀಯ ಭವಿಷ್ಯವೂ ಉತ್ತಮವಾಗಿರಲಿದೆ ಎಂಬ ನಂಬಿಕೆಯಿಂದ ಯತ್ನಾಳ ಇಂದು ಮೌನ ವಹಿಸಿದ್ದಾರೆ ಎನ್ನಲಾಗುತ್ತಿದೆ.


ಬಸವ ನಾಡಿಗೆ ಸಚಿವ ಸ್ಥಾನ ನೀಡಿ ಎಂದ ಶಾಸಕ


ಈ ಮಧ್ಯೆ, ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಮೂರು ಜನ ಬಿಜೆಪಿ ಶಾಸಕರಿದ್ದೇವೆ.  ಯತ್ನಾಳ ಮತ್ತು ನಡಹಳ್ಳಿ ತಮಗಿಂತ ಹಿರಿಯರು. ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಆಗ್ರಹಿಸಿದ್ದಾರೆ.


ಇದನ್ನು ಓದಿ: ಮದ್ಯದ ನಶೆ ಇಳಿಸಿದ ರೊಟ್ಟಿ ಉದ್ಯಮ; ಸ್ಥಳೀಯ ಮಾರುಕಟ್ಟೆ ಸೇರಿ ವಿದೇಶದಲ್ಲೂ ಭಾರೀ ಬೇಡಿಕೆ


ವಿಜಯಪುರದಲ್ಲಿ ಮಾತನಾಡಿದ ಅವರು, ಯತ್ನಾಳ ಅಥವಾ ನಡಹಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಒಂದು ವೇಳೆ ತಮಗೆ ಸಚಿವ ಸ್ಥಾನ ನೀಡಿದರೂ ಅದನ್ನು ನಿಭಾಯಿಸುವ ಶಕ್ತಿಯಿದೆ.  ನಮ್ಮ ತಂದೆ ಬಿ. ಎಸ್. ಪಾಟೀಲ ಸಾಸನೂರ ಅವರು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯ ಕುಟುಂಬಕ್ಕೆ ಸೇರಿದ ಮನೆತನ ನಮ್ಮದು. ತಂದೆ ಸಚಿವರಾಗಿದ್ದಾಗ ನಾನೂ ಕೂಡ ಅವರೊಂದಿಗೆ ಕೆಲಸ ಮಾಡಿದ್ದೇನೆ. ಹೀಗಾಗಿ ಸಚಿವ ಸ್ಥಾನ ನೀಡಿದರೆ ನಿಭಾಯಿಸುವ ಶಕ್ತಿ ತಮ್ಮಲ್ಲಿದೆ ಎಂದು ಸೋಮನಗೌಡ ಪಾಟೀಲ ಸಾಸನೂರ ತಿಳಿಸಿದರು.


ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡಲಿ. ತಾವು ಪ್ರತಿನಿಧಿಸುವ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಪೀರಾಪುರ-ಬೂದಿಹಾಳ ಏತ ನೀರಾವರಿಗೆ ಸಿಎಂ ಅನುದಾನ ನೀಡಲಿ. ಈವರೆಗೆ ಸಿಎಂ ತಮ್ಮ ಮತಕ್ಷೇತ್ರಕ್ಕೆ ಅನುದಾನ ನೀಡಿದ್ದಾರೆ. ಸಿಎಂ ಪುತ್ರ ವಿಜಯೇಂದ್ರ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಅವರನ್ನು ತಾವು ಒಮ್ಮೆಯೂ ಭೇಟಿಯಾಗಿಲ್ಲ. ತಾವು ಈವರೆಗೆ ಕೇವಲ ಸಿಎಂ ಅವರನ್ನು ಮಾತ್ರ ಭೇಟಿಯಾಗಿದ್ದಾಗಿ ದೇವರ ಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ತಿಳಿಸಿದರು.


ವರದಿ; ಮಹೇಶ್ ವಿ. ಶಟಗಾರ

Published by:HR Ramesh
First published: